ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡಿ ಪರೀಕ್ಷೆ : ಸಚಿವ ಸುರೇಶ್ ಕುಮಾರ್


ಹಾಸನ, :- ವಿದ್ಯಾರ್ಥಿಗಳ ಸುರಕ್ಷತೆಗೆ ಆಧ್ಯತೆ ನೀಡಿ, ಅತ್ಯಂತ ಕಾಳಜಿಯಿಂದ ಸರ್ಕಾರ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಶತಮಾನದ ಸರ್ಕಾರಿ ಶಾಲೆಯ ಕಟ್ಟಡ ಸಮಸ್ಯೆಗೆ ಸಿಲುಕಿದ ಕುರಿತು ವಾಟ್ಸಪ್ ಸಂದೇಶ ನೋಡಿ ಸಕಲೇಶಪುರ ತಾಲ್ಲೂಕು ದೇವಾಲಕೆರೆ ಗ್ರಾಮಕ್ಕೆ ಅಗಮಿಸಿದ ಸಚಿವರು ಸ್ಥಳೀಯರೊಂದಿಗೆ ಚರ್ಚಿಸಿ ನಂತರ ಹಾಸನದಲ್ಲಿ ಅಧಿಕಾರಿಗಳ ಸಭೆ ನಡೆಸಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಈ ವಿಷಯ ತಿಳಿಸಿದರು.

ಕೋವಿಡ್-19 ಹಿನ್ನಲೆಯಲ್ಲಿ ಸುಮಾರು ಎರೆಡು ತಿಂಗಳ ಲಾಕ್ ಡೌನ್ ನಂತರ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಬಾಕಿ ಇದ್ದ ಒಂದು ವಿಷಯದ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗುವುದು ಎಂದು ಅವರು ಹೇಳಿದರು.

ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಇರುವ ಊರುಗಳ ಹತ್ತಿರದ ಪರೀಕ್ಷಾ ಕೇಂದ್ರಗಳಲ್ಲಿಯೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಪರೀಕ್ಷೆ ಬರೆಯಲಿರುವ ಎಲ್ಲಾ 8.5 ಲಕ್ಷ ವಿದ್ಯಾರ್ಥಿಗಳಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ತಲಾ ಎರಡು ಮಾಸ್ಕ್ ನೀಡಲಾಗುತ್ತಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್ ಹಾಕುವುದು, ಜಾಗೃತಿ ಮಾಡಿಸುವ ಕಾರ್ಯವನ್ನು ಈ ಸಂಸ್ಥೆ ವತಿಯಿಂದ ಮಾಡಲಾಗುತ್ತದೆ. ಶಾಸಕರು ಇನ್ನೂ ಅನೇಕ ಸಂಘ ಸಂಸ್ಥೆಗಳು ಇದರಲ್ಲಿ ಕೈ ಜೋಡಿಸುತ್ತಿವೆ ಎಂದು ಸಚಿವರು ಹೇಳಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೋಡಿ ಕೆಸ್.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ಸಾರಿಗೆ ಸಚಿವರಲ್ಲಿ ಮಾನವಿ ಮಾಡಲಾಗುವುದು. ಪ್ರಯಾಣಿಕರ ಏರಿಕೆ ಅನುಸಾರ ಮಂದಿನ ದಿನಗಳಲ್ಲಿ ಬಸ್‍ಗಳ ಓಡಾಟವೂ ಏರಿಕೆಯಾಗಲಿದೆ ವಿದ್ಯಾರ್ಥಿಗಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಬರೆಯಬೇಕು ಎಂದು ಸಚಿವರು ಕರೆ ನೀಡಿದರು.

ಪರೀಕ್ಷಾ ಸಂದರ್ಭದಲ್ಲಿ ಕಂಟೈನ್ಮೆಂಟ್ ವಲಯಗಳಲ್ಲಿ ಇರುವವರಿಗೆ ಪೂರಕ ಪರೀಕ್ಷೆಗೆ ಅವಕಾಶ ನೀಡಿ ಅದನ್ನೂ ಈ ಸಾಮಾನ್ಯ ಪರೀಕ್ಷೆಯಂತೆ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

ಸರ್ಕಾರದ ಸೂಚನೆ ಬರುವ ವರೆಗೂ ಖಾಸಗಿ ಶಾಲೆಗಳು ದಾಖಲಾತಿ ಪ್ರಾರಂಭಿಸಬಾರದು, ಈ ವರ್ಷ ಶುಲ್ಕ ಏರಿಸಬಾರದು ಎಂಬ ಸೂಚನೆ ನೀಡಲಾಗಿದೆ ಎಂದ ಸಚಿವರು ಎಲ್.ಕೆ.ಜಿ, ಯು.ಕೆ.ಜಿ ತರಗತಿಗಳಿಗೂ ಆನ್ ಲೈನ್ ಕ್ಲಾಸ್ ನಡೆಸಲಾಗಿತ್ತಿದೆ. ಇದರಿಂದ ಮಕ್ಕಳ ಮೇಲಾಗುವ ಪರಿಣಾಮದ ಬಗ್ಗೆ ನಿಮಾನ್ಸ್‍ನಿಂದ ವರದಿ ಕೇಳಲಾಗಿದೆ. ವರದಿ ಬಂದ ನಂತರ ಅದಕ್ಕನುಸಾರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ಮುಂಬರುವ ದಿನಗಳಲ್ಲಿ ಕೊರೋನಾ ಸೋಂಕಿಗೆ ಔಷಧಿ ಸಿದ್ದವಾಗುವ ನಿರೀಕ್ಷೆ ಇದೆ. ಆದರೂ ಈವರಗೆ ಕೊರೋನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಯಶಸ್ವಿಯಾಗಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.

ಕೋರೋನಾ ಸೋಂಕನ್ನು ತಡೆಗಟ್ಟಲು ಶ್ರಮಿಸುತ್ತಿರುವ ಎಲ್ಲಾ ಕೊರೋನಾ ವಾರಿಯರ್ಸ್‍ಗಳು ಮನೆಗೆ ಹೋಗಲು ಭಯಪಡುತ್ತಿದ್ದು, ಅವರಿಗೆ ಉಳಿಯಲು ಜಿಲ್ಲಾಡಳಿತದೊಂದಿಗೆ ಮಾತನಾಡಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಇದೇ ತಿಂಗಳ 25 ನೇ ತಾರೀಕಿನಿಂದ ಭಾರತದೊಳಗಿನ ವಿಮಾನ ಸಂಚಾರ ಪ್ರಾರಂಭವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುವುದರಿಂದ ಅವರೆಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡುವುದು ಕಷ್ಟಸಾದ್ಯ ಹಾಗಾಗಿ ಹೊರಡುವ ಜಾಗದಲ್ಲಿಯೇ ಪರೀಕ್ಷಿಸಿ ನೆಗಿಟೀವ್ ರಿಪೊರರ್ಟ್ ತರುವವರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿ ಮನೆಗೆ ಕಳುಹಿಸಲಾಗುತ್ತದೆ. ಪಾಸಿಟೀವ್ ಬಂದವರನ್ನು ಇನ್ಸ್ಟಿಟ್ಯೂಷನ್ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ಡಿ.ಡಿ.ಪಿ.ಐ ಪ್ರಕಾಶ್, ತಹಶೀಲ್ದಾರ್ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ಹಾಗೂ ಮತ್ತಿತರರು ಹಾಜರಿದ್ದರು.

Comments