ವಿಡಿಯೋ ಕಾಲ್ ಮೂಲಕ ಮಂಗಳೂರಿನಲ್ಲಿರುವ ಮಗು ಜೊತೆ ಮಾತುಕತೆ; ದಾವಣಗೆರೆ ಕೊರೊನಾ ವಾರಿಯರ್ಸ್ ವೈದ್ಯ ದಂಪತಿಗಳ ಸಂಕಟ
ಮಂಗಳೂರು; ಆಟದಲ್ಲಿ ತಲ್ಲೀನವಾಗಿರುವ ಈ ಪುಟ್ಟ ಮಗುವಿನ ಹೆಸರು ಚಿನ್ಮಯ್. ಒಂದೂವರೆ ವರ್ಷದ ಈ ಮಗು ಈ ಸಣ್ಣ ಪ್ರಾಯದಲ್ಲಿ ತಂದೆ ತಾಯಿಯ ತೋಳಿನಲ್ಲಿ ಸಂತಸಪಡಬೇಕಿತ್ತು. ಆದರೆ ಮಹಾಮಾರಿ ಕೊರೊನಾ ಈ ಮಗುವನ್ನು ತಂದೆ ತಾಯಿಯಿಂದ ದೂರವಿರುವಂತೆ ಮಾಡಿದೆ.
ಹೌದು ಮಹಾಮಾರಿ ಕೊರೊನಾ ಬಂದ ಬಳಿಕ  ಈ ಮಗು  ತನ್ನ ತಂದೆ ತಾಯಿ ಜೊತೆಗಿಲ್ಲ. ಮಗುವಿನ ತಂದೆ ಡಾ ಗಿರೀಶ್ ಮತ್ತು ತಾಯಿ ಡಾ ಅರುಣ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಈ ವೈದ್ಯರುಗಳು ತಮ್ಮ ಒಂದೂವರೆ ವರ್ಷದ ಮಗುವನ್ನು ಮಂಗಳೂರಿನಲ್ಲಿ ಬಿಟ್ಟು ಹೋಗಿದ್ದಾರೆ. ಮಗುವಿನ ತಾಯಿಯ ಅಕ್ಕ ಮಂಗಳೂರಿನಲ್ಲಿದ್ದು ಇವರ ಮನೆಯಲ್ಲಿ ಈ ಮಗು ಕಾಲ ಕಳೆಯುತ್ತಿದೆ. ದೂರದಲ್ಲಿರುವ ಮಗುವಿನ ತಂದೆ ತಾಯಿ ಮಗು ಜೊತೆಗೆ ವಿಡಿಯೋ ಕಾಲ್ ಮೂಲಕ ಮಾತಾಡುತ್ತಾರೆ.ಮಗುವಿನ ಆಟೋಟಗಳನ್ನು ವಿಡಿಯೋ ಕಾಲ್ ಮೂಲಕ ನೋಡಿ ಸಂತಸ ಪಡುತ್ತಾರೆ. 
ಸದ್ಯ ತುಮಕೂರಿನಲ್ಲಿರುವ ಮಗುವಿನ ಅಜ್ಜಿ ಮಂಗಳೂರಿಗೆ ಬಂದಿದ್ದಾರೆ. ಮಗುವಿಗೆ ದೊಡ್ಡಮ್ಮ , ದೊಡ್ಡಮನ ಮಗಳು ಮತ್ತು ನೆರೆಮನೆಯ ಮಹಿಳೆ ಜೊತೆಯಾಗಿ ಇದ್ದು ಮಗು ಸಂತಸದಲ್ಲಿರುವಂತೆ ನೋಡುತ್ತಿದ್ದಾರೆ. ಒಟ್ಟಿನಲ್ಲಿ ಕೊರೊನಾ ಮಹಾಮಾರಿ ಒಟ್ಟಿಗಿರಬೇಕಾದ ಮಗು ಮತ್ತು ಹೆತ್ತವರನ್ನು ದೂರ ಮಾಡಿದ್ದು, ಶೀಘ್ರ ಕೊರೊನಾ ಶಮನವಾಗಿ ಮಗು ಮತ್ತು ತಂದೆ ತಾಯಿ ಒಟ್ಟಾಗಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.

Comments