ವಿದೇಶಿ ನೆಲದಲ್ಲಿ ಕನ್ನಡ ಮತ್ತು ಸಂಸ್ಕೃತಿಯನ್ನು ಪಸರಿಸುವ ಕಾರ್ಯವಾಗಬೇಕು: ಸಚಿವ ಸಿ.ಟಿ ರವಿ

ಚಿಕ್ಕಮಗಳೂರು: ಆಸ್ಟ್ರೇಲಿಯಾದಲ್ಲಿರುವ ಕನ್ನಡಿಗರನ್ನು ವಿಶೇಷ ವಿಮಾನಗಳ ಮೂಲಕ ಹಂತ-ಹಂತವಾಗಿ ಸ್ವದೇಶಕ್ಕೆ ಕರೆತರಲಾಗುವುದು ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅವರು ಹೇಳಿದರು.
   ಅವರು ಇಂದು ತಮ್ಮ ಗೃಹ ಕಛೇರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸ್ಕೈಪ್ ಆಪ್ ಮೂಲಕ ವಿಡಿಯೋ ಸಂವಾದದಲ್ಲಿ ಮಾತನಾಡಿದರು.
ಆಸ್ಟ್ರೇಲಿಯಾಗೆ ಉದ್ಯೋಗ ಅರಸಿ, ಪ್ರವಾಸಕ್ಕೆ ಹೋದವರು, ಹಾಗೂ ಉನ್ನತ ವ್ಯಾಸಂಗಕ್ಕೆ ಹೋದ ವಿದ್ಯಾರ್ಥಿಗಳೊಂದಿಗೆ ಕೊರೋನಾ ಹಾವಳಿಯಿಂದ ಸಂಕಷ್ಟ ಎದುರಿಸುವುದು ಸೇರಿದಂತೆ ಕನ್ನಡ ಭಾಷೆ ಅಭಿವೃದ್ಧಿ ಕುರಿತು ಚರ್ಚಿಸಿದರು.
  ೧೫೦೦ ಕೀ.ಮೀ ದೂರದ ದ್ವೀಪ ಪ್ರದೇಶದ ಆಸ್ಟ್ರೇಲಿಯಾದಲ್ಲಿ ೧೫೦೦ ಕ್ಕೂ ಹೆಚ್ಚು ಕನ್ನಡಿಗರು ಸ್ವದೇಶಕ್ಕೆ ಮರಳಲು ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡಿದ್ದಾರೆ ಈಗಾಗಲೇ ವಿದೇಶದಲ್ಲಿರುವ ಭಾರತೀಯರನ್ನು ವಾಪಸ್ಸು ಕರೆತರುವ ಕಾರ್ಯಾಚರಣೆಯು ಆರಂಭವಾಗಿದ್ದು ಇವರನ್ನು ಸಹ ಹಂತ-ಹಂತವಾಗಿ ದೇಶಕ್ಕೆ ಕರೆತರಲಾಗುವುದು ಎಂದರು.
ಆಸ್ಟ್ರೇಲಿಯದಲ್ಲಿರುವ ನಮ್ಮ ದೇಶದ ರಾಯಭಾರಿ ಕಛೇರಿಗಳು ಈ ಹಿಂದೆ ಕಾರ್ಯನಿರ್ವಹಿಸುವುದಕ್ಕಿಂತ ಇನ್ನೂ ಉತ್ತಮವಾಗಿ ಕೆಲಸ ಮಾಡುವುದರೊಂದಿಗೆ ಭಾರತೀಯರ ಹಾಗು-ಹೋಗುಗಳಿಗೆ ಸ್ಪಂದಿಸುತ್ತಿದೆ ಇದರ ಜೊತೆಗೆ ೪೦ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಂಘವು ಈ ಕಾರ್ಯಕ್ಕೆ ಕೈ ಜೋಡಿಸಿದೆ, ಖಾಲಿ ಇರುವ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಸ್ಥಾನಕ್ಕೆ ನೇಮಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.
ಆಸ್ಟ್ರೇಲಿಯದಲ್ಲಿ ನಡೆಯುವ  ಕಾರ್ಯಕ್ರಮಗಳಿಗೆ ಇಲ್ಲಿನ ಕಲಾವಿದರನ್ನು ಕಳುಹಿಸಬೇಕು ಜೊತೆಗೆ ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಮ್ಮನ್ನು ಆಹ್ವಾನಿಸಬೇಕು ಎನ್ನುವ ಕೋರಿಕೆಗೆ ಸ್ಪಂದಿಸುವುದಾಗಿ ತಿಳಿಸಿದ ಅವರು ಅಲ್ಲಿಯು ಕರ್ನಾಟಕವನ್ನು ಬ್ರಾಂಡ್ ಆಗಿ ರೂಪಿಸುವ ಕಾರ್ಯ ಕನ್ನಡಿಗರ ಮೇಲಿದೆ ಇದನ್ನು ಕಾರ್ಯರೂಪಗೊಳಿಸಬೇಕು ಎಂದರು.
ಕನ್ನಡ ಓದುಗರ ಅಭಿರುಚಿಗಾಗಿ ವಿದೇಶದಲ್ಲಿರುವ ಸಂಘಗಳ ವಾಚಾನಾಲಯಗಳಿಗೆ ಕನ್ನಡದ ಹಳೆಯ ಮತ್ತು ನವ್ಯ ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ನೀಡಲಾಗುವುದು ಅಲ್ಲದೇ ಆನ್‌ಲೈನ್ ಕನ್ನಡ ಲೈಬ್ರರಿ ಪುಸ್ತಕಗಳನ್ನು ಅಲ್ಲಿನ ಜನರಿಗೆ ಲಭ್ಯವಾಗುವ ರೀತಿಯಲ್ಲಿ ಲಿಂಕ್ ಒದಗಿಸಿ ಪುಸ್ತಕಗಳನ್ನು ಓದಲು ಅವಕಾಶ ಮಾಡಿಕೊಡಲಾಗುವುದು ಎಂದರು.
 ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಪಡೆದ ಶೈಕ್ಷಣಿಕ ಸಾಲವನ್ನು ಮರುಪಾವತಿಗೆ ಕಾಲಾವಕಾಶ ಹೆಚ್ಚಿಸಿ ಕಂತು ವಿಸ್ತರಿಸುವ ಮನವಿಗೆ ಈ ಸೌಲಭ್ಯವನ್ನು ಅವರಿಗೆ ಒದಗಿಸಲು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
ಕನ್ನಡ ಭಾಷೆಯ ಭಾಷಾಭಿಮಾನವನ್ನು ಹೊಂದಿದಾಗ ಮಾತ್ರ ಹೊರದೇಶಗಳಲ್ಲಿ ನಾವು ಕನ್ನಡವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದ ಒಳಗೆ ಹಾಗೂ ರಾಜ್ಯದ ಹೊರಗೆ ಕನ್ನಡ ಅಭಿವೃದ್ದಿಗೆ ಕಾರ್ಯನಿರ್ವಹಿಸುತ್ತಿದೆ ಎಂದರು.
ರಾಜ್ಯದಲ್ಲಿರುವ ಅನೇಕ ಪಾರಂಪರಿಕ ಪ್ರೇಕ್ಷಣಿಯ ಸ್ಥಳಗಳಾದ ಹಂಪೆ, ಬಾದಾಮಿ,  ಬೇಲೂರು, ಹಳೆಬೀಡು, ಮೈಸೂರು ಸೇರಿದಂತೆ ಅನೇಕ ಪ್ರೇಕ್ಷಣಿಯ ಸ್ಥಳಗಳ ಮಹತ್ವದ ಬಗ್ಗೆ ಅಲ್ಲಿನ ಜನರಿಗೆ ತಿಳಿಸಿರುವುದರೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಕೆಲಸವಾಗಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್-೧೯ ನಿಂದಾಗಿ ಪ್ರವಾಸೋದ್ಯಮ ಹಿನ್ನಡೆಯಾಗಿದೆ ಇದನ್ನು ಉತ್ತೇಜಿಸಲು ಜನರ ಮನೋಭಾವನೆಯನ್ನು ಬದಲಾಯಿಸುವುದರೊಂದಿಗೆ ಸ್ಥಳೀಯರ ಪ್ರವಾಸ, ಅಂತರ್ ಜಿಲ್ಲಾ ಪ್ರವಾಸವನ್ನು ಹಂತ-ಹಂತವಾಗಿ ಚುರುಕುಗೊಳಿಸುವುದರೊಂದಿಗೆ ಅಂತರಾಷ್ಟ್ರೀಯ ಪ್ರವಾಸಿಗರನ್ನು ತಮ್ಮತ್ತ ಸೆಳೆಯಲು ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಸಂವಾದದಲ್ಲಿ ವಿದೇಶಿ ಕನ್ನಡಿಗರ ಅಹವಾಲುಗಳನ್ನು ಆಲಿಸಿದ ಅವರು ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದರು.

Comments