ಎಲ್ಲಾ ವಲಸಿಗರಿಗೂ ಜಾಬ್‍ಕಾರ್ಡ್ ವಿತರಿಸಿ, ಉದ್ಯೋಗ ಖಾತ್ರಿ ಕೆಲಸ ನೀಡಬೇಕು:ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ್

ಕಲಬುರಗಿ- ಕೊರೋನಾ ವೈರಸ್ ಮಹಾಮಾರಿಯಿಂದ ಹೊರರಾಜ್ಯಗಳಿಂದ ತಮ್ಮ ತಮ್ಮ ಊರಿಗೆ ಮರಳಿರುವ  ಎಲ್ಲಾ ವಲಸಿಗರಿಗೂ ಜಾಬ್‍ಕಾರ್ಡ್ ವಿತರಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ನೀಡುವಂತೆ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ್ ಅವರು ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರವಿವಾರ ಕೋವಿಡ್-19 ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಕೈಗೊಂಡ ಕ್ರಮಗಳÀ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅವರು ಮಾತನಾಡುತ್ತಿದ್ದರು.
ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕೊರತೆ ಇದ್ದಲ್ಲಿ ತಿಳಿಸಿ, ಎಷ್ಟೇ ಅನುದಾನ ಬೇಕಾದರೂ ಸರ್ಕಾರದಿಂದ ತರಲು ಸಿದ್ಧ್ಧ, ಯಾವ ವಲಸಿಗರಿಗೂ ಸಮಸ್ಯೆಯಾಗದಂತೆ ಕೂಲಿ ಕೆಲಸ ನೀಡಬೇಕೆಂದು ಹೇಳಿದರು.
ಪ್ರತಿ ತಾಲೂಕಿನಲ್ಲಿ ಇದುವರಗೆ ನೀಡಿರುವ ಜಾಬ್‍ಕಾರ್ಡ್ ಹಾಗೂ ನೀಡಿರುವ ಮಾನವದಿನಗಳ ಕೆಲಸಗಳ ಬಗ್ಗೆ ಆಯಾ ತಾಲೂಕಿನ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು,  ಇಪ್ಪತ್ತು ಸಾವಿರಕಿಂತ ಹೆಚ್ಚು ಜಾಬ್ ಕಾರ್ಡ್‍ಗಳನ್ನು ವಿತರಿಸಿ ಉದ್ಯೋಗ ನೀಡಬೇಕು ಹಾಗೂ ತದನಂತರ ಬೇಗ ಕೂಲಿ ವೇತನ  ತಲುಪುವಂತೆ ಮಾಡಬೇಕು ಎಂದು ಹೇಳಿದರು.
ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಹಳ್ಳಿ ಜನರಿಗೆ ಹೆಚ್ಚಾಗಿ ಗೊತ್ತಿಲ್ಲ. ಪ್ರತಿ ಹಳ್ಳಿ-ಹಳ್ಳಿಗೆ ಹೋಗಿ ಈ ಯೋಜನೆಯ ಬಗ್ಗೆ ಅರಿವು ಮೂಡಿಸಿರಿ ಎಂದ ಅವರು ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿಚಾರದಲ್ಲಿ ಜನರಿಗೆ ಅನ್ಯಾಯಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಕಲಬುರಗಿ ದಕ್ಷಿಣ ಮತಕ್ಷೇತ್ರ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಹಳ್ಳಿಯಲ್ಲಿನ ಪ್ರತಿ ಮನೆಗೆ ಕನಿಷ್ಠಪಕ್ಷ ಒಂದು ಜಾಬ್‍ಕಾರ್ಡ್ ಕಡ್ಡಾಯವಾಗಿ ನೀಡುವಂತೆ ವ್ಯವಸ್ಥೆ ಮಾಡಿ ವಲಸೆ ಕಾರ್ಮಿಕರು ಹಾಗೂ ಹಳ್ಳಿಯ ಜನರಿಗೆ ಸಾಮಾಜಿಕ ನ್ಯಾಯ ಸಿಗುವಂತಾಗಬೇಕು ಎಂದು ಪ್ರತಿಪಾದಿಸಿದರು.
ದೇಶದಲ್ಲಿಯೇ ಅತೀ ಹೆಚ್ಚು ಜಾಬ್‍ಕಾರ್ಡ್ ವಿತರಿಸಿ ಹೆಚ್ಚಿನ ರೀತಿಯಲ್ಲಿ ಉದ್ಯೋಗ ನೀಡುವಂತಹ ಕಾರ್ಯ ನಮ್ಮ ಕಲಬುರಗಿ ಜಿಲ್ಲೆಯಲ್ಲಾಗಬೇಕು. ಇದರಿಂದ ನಮ್ಮ ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಎಂದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತ ಮಿಷನ್ ಯೋಜನೆಯಲ್ಲಿ ಈಗಾಗಲೇ  ಕಲಬುರಗಿ ಜಿಲ್ಲೆ ಪ್ರಶಂಸೆ ಹಾಗೂ ಪ್ರಶಸ್ತಿ ಪಡೆದಿದೆ. ಅದೇ ರೀತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಧಿಕಾರಿಗಳು ಚುರುಕಾಗಿ ಕೆಲಸಮಾಡಿ ಕೇಂದ್ರ ಸರ್ಕಾರದಿಂದ ಪ್ರಶಂಸೆ ಹಾಗೂ ಪ್ರಶಸ್ತಿ ಗಿಟ್ಟಿಸಬೇಕು ಎಂದು ಸಲಹೆ ನೀಡಿದರು.
ಅಫಜಲಪೂರ ಮತಕ್ಷೇತ್ರದ ಶಾಸಕ ಎಂ.ವೈ ಪಾಟೀಲ ಅವರು ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ತಾವು ಈಗಾಗಲೇ ಜಿಲ್ಲಾ ಪಂಚಾಯತ್‍ಗೆ ಪತ್ರ ಬರೆದಿದ್ದು, ಶೀಘ್ರ ಆರ್‍ಓ ಪ್ಲಾಂಟ್ ಸ್ಥಾಪಿಸಬೇಕು ಎಂದು ಸಭೆಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಪ್ರಸಕ್ತ ಬೇಸಿಗೆ ಕಾಲವಾದ್ದರಿಂದ ಎಲ್ಲೆಲ್ಲಿ ಕುಡಿಯುವ ನೀರಿನ ಅಗತ್ಯ ಇದೆಯೋ ಅಲ್ಲಿ ಬೋರ್‍ವೆಲ್ ಕೊರೆಸಬೇಕು ಹಾಗೂ ಆರ್‍ಓ ಪ್ಲಾಂಟ್ ಸ್ಥಾಪನೆಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಇಂಜಿನೀಯರ್‍ಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ  ಚಿಂಚೋಳಿ ಮತಕ್ಷೇತ್ರದ ಶಾಸಕ ಅವಿನಾಶ ಜಾಧವ್, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಡಾ ಪಿ.ರಾಜಾ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮೊಹಮ್ಮದ್ ಇಸ್ಮಾಯಿಲ್, ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಕಾರ್ಯಕಾರಿ ಇಂಜಿನೀಯರ್ ಸತೀಶ್, ನರೇಗಾದ ಡಿಎಂಐಎಸ್ ರಾಜು ಒಂಟಿ 11 ತಾಲ್ಲೂಕಿನ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಮತ್ತಿತ್ತರು ಹಾಜರಿದ್ದರು.

Comments