ನದಿಗೆ ಹಾರಿದ ಯುವಕನ ರಕ್ಷಣೆಗೆ ಯತ್ನಿಸಿದ ಗೂಡಿನಬಳಿ ಯುವಕರ ಕಾರ್ಯ ಸಮಾಜಕ್ಕೆ ಮಾದರಿ

ಮಂಗಳೂರು: ಪಾಣೆಮಂಗಳೂರು ಹಳೆ ಸೇತುವೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವವುಳಿಸಲು ತಮ್ಮ ಜೀವದ ಹಂಗು ತೊರೆದು ನದಿಗೆ ಹಾರಿ ಆತನ ರಕ್ಷಣೆಗೆ ಶತಾಯಗತಾಯ ಪ್ರಯತ್ನಪಟ್ಟ ಗೂಡಿನಬಳಿಯ 6 ಮಂದಿ ಯುವಕರು ನಿಜಕ್ಕೂ ಇಡೀ ಸಮಾಜಕ್ಕೆ ಮಾದರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಯುವ ಕಾಂಗ್ರೆಸ್ ವತಿಯಿಂದ ಇಂದು ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಯಾವತ್ತೂ ಶಾಂತಿ-ಸೌಹಾರ್ದತೆಯ ನಾಡು. ಆದರೆ ಓಟಿನ ಲಾಭಕ್ಕಾಗಿ ಜಾತಿ ವಿಷಬೀಜ ಬಿತ್ತಿ ಶಾಂತಿ ಕದಡುವವರು ಇದ್ದಾರೆ. ಆದರೆ ಈದ್-ಉಲ್-ಫಿತ್ರ್‌ ಅಂದು ಬಂಟ್ವಾಳದ ಗೂಡಿನಬಳಿಯಲ್ಲಿ ನಡೆದ ಘಟನೆ ನಿಜಕ್ಕೂ ಸೌಹರ್ದತೆಯ ಸಂಕೇತ. ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಲ್ಲಡ್ಕದ ನಿಶಾಂತ್ ಎಂಬ ಯುವಕನನ್ನು ಗೂಡಿನಬಳಿಯ ಈಜುಪಟುಗಳಾದ ಶಮೀರ್, ಮುಕ್ತಾರ್, ಮುಹಮ್ಮದ್, ತೌಸೀಫ್, ಝಾಹಿದ್, ಆರಿಫ್ ಎಂಬವರು ತಮ್ಮ ಜೀವದ ಹಂಗು ತೊರೆದು ನದಿಗೆ ಹಾರಿ ಯುವಕನನ್ನು ದಡಕ್ಕೆ ತಂದರು. ಬಳಿಕ ಆತನ ರಕ್ಷಣೆಗೆ ನಾನಾ ಪ್ರಯತ್ನ ಮಾಡಿದರು. ಬಾಯಿಯ ಮೂಲಕ ಉಸಿರಾಟ ನೀಡುವ ಪ್ರಯತ್ನವೂ ಮಾಡಿದರು. ಆದರೆ ದುರದೃಷ್ಟವಶಾತ್ ಯುವಕ ಬದುಕಲಿಲ್ಲ. ಈ 6 ಮಂದಿ ಯುವಕರು ಮಾಡಿದ ಸಾಧನೆ ಮೂಲಕ ಸೌಹಾರ್ದತೆ, ಏಕತೆಗೆ ಮಾದರಿಯಾಗಿ ನಿಂತಿದೆ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು 6 ಮಂದಿ ಯುವಕರನ್ನು ಅಭಿನಂದಿಸಿ, ಶುಭ ಹಾರೈಸಿದರು. ದ.ಕ. ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಸಾಧಕರಿಗೆ ಸನ್ಮಾನದ ಜತೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಭೋದಯ ಆಳ್ವ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಲುಕ್ಮಾನ್, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸುಹೈಲ್ ಕಂದಕ್, ಕಾರ್ಪೊರೇಟರ್ ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Comments