ಅಂದಲಗಿ ಕಂಟೋನ್ಮೆಂಟ್-ಬಫರ್ ಜೋನ್‍ಗಳ ಮೇಲೆ ಅಧಿಕಾರಿಗಳ ನಿರಂತರ ನಿಗಾಜನರಿಗೆ ಆರೋಗ್ಯ ಜಾಗೃತಿ ಜೊತೆಗೆ ಮೂಲ ಸೌಕರ್ಯಗಳ ವ್ಯವಸ್ಥೆ


ಹಾವೇರಿ: ಕೋವಿಡ್ ಪಾಸಿಟಿವ್  ಪ್ರಕರಣದ ಹಿನ್ನೆಲೆಯಲ್ಲಿ (ಮೇ 11) ಸೀಲ್‍ಡೌನ್ ಮಾಡಲಾದ ಅಂದಲಗಿ ಗ್ರಾಮದ ಬಫರ್ ಜೋನ್ ಹಾಗೂ ಕಂಟೋನ್ಮೆಂಟ್ ಪ್ರದೇಶದ ಮೇಲೆ ಅಧಿಕಾರಿಗಳು ತೀವ್ರ ನಿಗಾವಹಿಸಿದ್ದು ಯಾವುದೇ ಸೋಂಕು ಮರುಕಳಿದದಂತೆ  ಆರೋಗ್ಯ ತಪಾಸಣೆ, ಸ್ವಚ್ಛತೆ, ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಪಡಿತರ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕೈಗೊಂಡಿದ್ದಾರೆ.
  ಕಂಟೋನ್ಮೆಂಟ್ ಏರಿಯಾ ಘಟನಾ ಕಮಾಂಡರ್ ಆಗಿ ನಿಯೋಜಿತಗೊಂಡಿರುವ ಸವಣೂರು ಉಪವಿಭಾಗಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ ಮೇಲ್ವಿಚಾರಣೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳು ದಿನದ 24 ಗಂಟೆ ಕಂಟೋನ್ಮೆಂಟ್ ಏರಿಯಾದಲ್ಲಿ ಯಾವುದೇ ವ್ಯಕ್ತಿಗಳು ಒಳಬರದಂತೆ ಹಾಗೂ ಹೊರ ಹೋಗದಂತೆ ತೀವ್ರ ನಿಗಾವಹಿಸಿದ್ದಾರೆ. 
  P-853 ಸೋಂಕಿತನ ಅಂದಲಗಿ ಗ್ರಾಮದ ಮನೆಯ 300 ಮೀಟರ್ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಮನೆಯ ಏಳು ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಘೋಷಿಸಲಾಗಿದೆ. ಸದರಿ ಗ್ರಾಮವನ್ನು ಸೀಲ್‍ಡೌನ್ ಮಾಡಲಾಗಿದೆ. ಅಂದಲಗಿ ಮತ್ತು ಮುದ್ದಿನಕೊಪ್ಪ ಗ್ರಾಮಗಳಲ್ಲಿ ಎರಡು ಚೆಕ್‍ಪೋಸ್ಟ್ ನಿರ್ಮಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೋಂಕು ಕಂಡುಬಂದ ವ್ಯಕ್ತಿಯ ಮನೆಯ ಸುತ್ತಮುತ್ತಲೂ ಪ್ರದೇಶ ಹಾಗೂ ಗ್ರಾಮದ ಸುತ್ತಮುತ್ತ ನಿತ್ಯ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ. ಗಟಾರ ಸ್ವಚ್ಛತೆ, ಮೆಲಥಾನ್ ಸಿಂಪರಣೆ, ಐಪ್ಲೋರೈಡ್ ಸಿಂಪರಣೆ ಕೈಗೊಳ್ಳಲಾಗುತ್ತಿದೆ.
ಕಂಟೋನ್ಮೆಂಟ್ ವ್ಯಾಪ್ತಿಯಲ್ಲಿ 161 ಕುಟುಂಬಗಳು ವಾಸವಿವೆ. ಈ ಕುಟುಂಬಗಳ 941 ಜನರ ಆರೋಗ್ಯ ತಪಾಸಣೆ ಕೈಗೊಳ್ಳಲಾಗಿದೆ. ಈ ಪೈಕಿ ಐದು ವರ್ಷದೊಳಗಿನ 130 ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರು 75 ಜನ, ಬಾಣಂತಿಯರು ಐದು ಜನ, ಗರ್ಭಿಣಿಯರು ಒಂಭತ್ತು ಜನ ಹಾಗೂ 14 ಜನ ಸಕ್ಕರೆ ಕಾಯಿಲೆ, 19 ಜನ ಬಿಪಿ  ಕಾಯಿಲೆ ಹೊಂದಿದ್ದಾರೆ. ಈ ಪೈಕಿ 68 ಜನರ ಗಂಟಲು ದ್ರವ್ಯ ಮಾದರಿ ಪರೀಕ್ಷೆ ಕೈಗೊಳ್ಳಲಾಗಿದೆ. ಸೋಂಕಿತನ ಪ್ರಾಥಮಿಕ ಸಂಪರ್ಕದ 17 ಜನರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ದ್ವಿತೀಯ ಸಂಪರ್ಕದ 31 ಜನರನ್ನು ಹೋಂ ಕ್ವಾರಂಟೈನ್‍ನಲ್ಲಿ ಇರಿಸಿ ವೈದ್ಯಾಧಿಕಾರಿಗಳ ನಿರಂತರ ನಿಗಾ ವಹಿಸಲಾಗಿದೆ. 
ಅಂದಲಗಿ ಗ್ರಾಮಸ್ಥರಿಗೆ ಉಚಿತ ಪಡಿತರ ನೀಡಲಾಗಿದೆ. ಎರಡು ದಿನಸಿ ಅಂಗಡಿಗಳು, ತರಕಾರಿ ಅಂಗಡಿಗಳು, ಹಾಲು ವಿತರಕರಿಗೆ ಪಾಸ್‍ಗಳನ್ನು ನೀಡಿ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮವಹಿಸಲಾಗಿದೆ. ಮಾನ್ಯ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಇಲ್ಲಿನ 161 ಕುಟುಂಬಗಳಿಗೆ ಉಚಿತ ಆಹಾರ ಕಿಟ್‍ಗಳನ್ನು ಪೂರೈಸಿದ್ದಾರೆ. ಗ್ರಾಮದಲ್ಲಿ 24 ತಾಸು ಕಾರ್ಯನಿರ್ವಹಿಸುವಂತೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಇಲ್ಲಿಯ ಜನರು ಸಹಾಯವಾಣಿ ಸಂಪರ್ಕಿಸಿದರೆ ವೈದ್ಯಕೀಯ ನೆರವು ಸೇರಿದಂತೆ ಯಾವುದೇ ತರದ ನೆರವು ಒದಗಿಸಲು ಅಧಿಕಾರಿಗಳು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕೋವಿಡ್ ಜಾಗೃತಿ, ಮುನ್ನೆಚ್ಚರಿಕೆ ಕ್ರಮಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಕುರಿತಂತೆ ಹಾಗೂ ಆತ್ಮವಿಶ್ವಾಸದಿಂದ ಪರಿಸ್ಥಿತಿಯನ್ನು ಎದುರಿಸುವಂತೆ ಮನೆ ಮನೆಗೂ ಕರಪತ್ರ, ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಿ ಆತ್ಮ ವಿಶ್ವಾಸ ತುಂಬಿಸುವ ಕೆಲಸ ನಡೆಸಿದೆ.

Comments