ಪಚ್ಚನಾಡಿ ಬಳಿ ಕಸದ ರಾಶಿಗೆ ಬೆಂಕಿ: ದಟ್ಟವಾಗಿ ಆವರಿಸಿದ ವಿಷಪೂರಿತ ಹೊಗೆ


ಮಂಗಳೂರು : ಮಂಗಳೂರಿನ ಡಂಪಿಂಗ್ ಯಾರ್ಡ್ ಗೆ ಹೆಸರುವಾಸಿಯಾಗಿರುವ ನಗರ ಹೊರವಲಯದ ಪಚ್ಚನಾಡಿ ಬಳಿ ಹಾಕಲಾಗಿರುವ ಕಸದ ರಾಶಿಗೆ  ಬೆಂಕಿ ಹತ್ತಿಕೊಂಡು ಉರಿದಿದೆ.

ಕಸದ ರಾಶಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಗೊಂಡು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳಿಗೆ ಹಾಗೂ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಇಲ್ಲಿ ದಿನನಿತ್ಯ ಕಸ ರಾಶಿ ಹಾಕಲಾಗುತ್ತಿದ್ದು, ರಾಶಿ ರಾಶಿ ತಂದು ಹಾಕಲಾಗಿರುವ ಕಸದ ರಾಶಿಗೆ ಬಿರು ಬಿಸಿಲಿಗೆ ಬೆಂಕಿ ಹಿಡಿದಿದೆ.ತ್ಯಾಜ್ಯಕ್ಕೆ ಬಿದ್ದ ಬೆಂಕಿ ನಂದಿಸಲು ಹಿಟಾಚಿ ಮೂಲಕ ಮಣ್ಣು ತಂದು ಸುರಿಯಲಾಗುತ್ತಿದೆ.
ಆದರೆ ಗಾಳಿಯಲ್ಲಿ ಸೇರುತ್ತಿರುವ ವಿಷಪೂರಿತ ಹೊಗೆ ಸಮೀಪದ ನಾಲ್ಕು ವಾರ್ಡ್ ಗಳ ಜನರ ಆತಂಕ ಹೆಚ್ಚಿಸಿದೆ.
ಈ ಪ್ರದೇಶದ ಕೆಲವು ಮನೆಯ ಜನರು ಅಲ್ಲಿಂದ ತೆರವಾಗಿದ್ದರೂ, 2-3 ಮನೆಯವರೂ ಅಲ್ಲೇ ವಾಸವಾಗಿದ್ದಾರೆ.
ಹೀಗಾಗಿ ವಿಷಪೂರಿತ ಹೊಗೆ ಅವರ ಆತಂಕವನ್ನು ಹೆಚ್ಚಿಸಿದೆ. ಇಲ್ಲಿ ಪ್ರತೀ ಬಾರಿ ಬೆಂಕಿ ಬೀಳುತ್ತಿದ್ದು, ಸ್ಥಳೀಯರು ಅಸ್ತಮಾ, ಉಸಿರಾಟದ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

Comments