ಮನೆಗೆ ಹೋಗಲು ದಾರಿ ಮಾಡಿ ಕೊಡಿ ಅಂತ ಪಟ್ಟು ಹಿಡಿದ ಏಕಾಂಗಿ ಪ್ರತಿಭಟಿಸಿದ ವ್ಯಕ್ತಿ


ಬಂಟ್ವಾಳ: ಮನೆಗೆ ಹೋಗಲು ದಾರಿ ಮಾಡಿಕೊಡಿ ಇಲ್ಲದಿದ್ದರೆ ರಸ್ತೆಯಲ್ಲಿಯೇ ಕೂರುತ್ತೇನೆ ಎಂದು ಹಠ ಹಿಡಿದು ರಸ್ತೆಯಲ್ಲಿ ಕಾಲು ನೋವಿಗೆ ಶಸ್ತ್ರಚಿಕಿತ್ಸೆಗೊಳಪಟ್ಟ ವ್ಯಕ್ತಿಯೋರ್ವರು ಏಕಾಂಗಿಯಾಗಿ ಪ್ರತಿಭಟನೆ  ನಡೆಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.


ಬಂಟ್ವಾಳ ಮಯ್ಯರಬೈಲು ನಿವಾಸಿ ಉದಯಕುಮಾರ್ ರಾವ್ ಅವರು ಒಬ್ಬಂಟಿಯಾಗಿ ರಸ್ತೆಯಲ್ಲಿ ಕುಳಿತುಕೊಂಡು ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.ಬಂಟ್ವಾಳದಿಂದ ಪುಂಜಾಲಕಟ್ಟೆಯವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಗಾಗಿ ಎಲ್ಲಾ ನೀರು ಹರಿದು ಹೋಗುವ ಚರಂಡಿಗಳನ್ನು ಮುಚ್ಚಲಾಗಿತ್ತು.ಆ ಬಳಿಕ ಲಾಕ್ ಡೌನ್ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿಯು ನಿಂತು ಹೋಯಿತು.ಮಳೆಗಾಲ ಆರಂಭವಾಗುವ ಮೊದಲು ಈ ಚರಂಡಿಯನ್ನು ತೆರವು ಮಾಡಿಕೊಡುವಂತೆ ಉದಯಕುಮಾರ್ ರಾವ್ ಅವರು ಕಾಮಗಾರಿ ಗುತ್ತಿಗೆದಾರರಲ್ಲಿ ಮನವಿ ಮಾಡಿಕೊಂಡಿದ್ದರು.‘ಮಳೆ ಬರಲು ಆರಂಭವಾದರೆ ನಿಮ್ಮ ಬೇಜವಾಬ್ದಾರಿ ಕಾಮಗಾರಿಯಿಂದ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದೆ ನನ್ನ ಮನೆಯಂಗಳಕ್ಕೆ ನೀರು ನುಗ್ಗುತ್ತದೆ’ ಎಂದು ಕಳೆದ ಒಂದೂವರೆ ತಿಂಗಳಿನಿಂದಲೂ ಹೇಳುತ್ತಲೆ ಬಂದಿದ್ದರು.ಇವರ ಮನೆಯಂಗಳದಲ್ಲಿ ಲಕ್ಷಾಂತರ ರೂ ಬೆಲೆ ಬಾಳುವ ಮದುವೆ ಮಂಟಪ ಅಲಂಕಾರದ ಉಪಕರಣಗಳು ಇವೆ.
ಆದರೆ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಮನೆಯಂಗಳಕ್ಕೆ ಕೆಸರು ನೀರು ನುಗ್ಗಿ ಬೆಲೆ ಬಾಳುವ ಸ್ವತ್ತುಗಳು ನೀರು ಪಾಲಾಗಿವೆ.ಈ ದೂರಿನ ಹಿನ್ನಲೆಯಲ್ಲಿ ಸೋಮವಾರ ಬೆಳಿಗ್ಗೆ ಗುತ್ತಿಗೆದಾರರು ಬಂದು ನೀರು ಹರಿದು ಹೋಗಲು ಚರಂಡಿ ನಿರ್ಮಿಸಿ ಅದಕ್ಕೆ ಮೋರಿ ಹಾಕಿಕೊಡುವ ಭರವಸೆ ನೀಡಿ ಅರ್ಧ ಚರಂಡಿ ಅಗೆದು ವಾಪಾಸು ಹೋಗಿದ್ದರು.ಚರಂಡಿ ಆಳವಾಗಿ ಅಗೆದು ಹೋಗಿದ್ದರಿಂದ ಮೊದಲೇ ಕಾಲು ಶಸ್ತ್ರಚಿಕಿತ್ಸೆಯಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆಸ್ಪತ್ರೆಗೆ ಹೋಗಲು ಚರಂಡಿ ದಾಟಿ ಬರಲು ಕಷ್ಟವಾಗಿತ್ತು.ಹೇಗೋ ಮಾಡಿ ಬೆಳಿಗ್ಗೆ ಮಂಗಳೂರು ಕಂಕನಾಡಿ ಆಸ್ಪತ್ರೆಗೆ ವೈದ್ಯರನ್ನು ಕಾಣಲು ಚರಂಡಿಯ ಮೇಲೆ ತಾತ್ಕಾಲಿಕ ಸೀಟು ಹಾಕಿ ಹೋಗಿದ್ದರು.ವೈದ್ಯರಲ್ಲಿ ಹೋಗಿ ವಾಪಾಸು ಮನೆಗೆ ಬರುವ ವೇಳೆ ಚರಂಡಿಯ ಮೇಲೆ ದಾಟಲು ಹಾಕಿದ್ದ ಸಿಮೆಂಟ್ ಸೀಟು ಕಾಣೆಯಾಗಿತ್ತು.ಕಾಲು ನೋವಿನಿಂದ ವೈದ್ಯರು ನೀಡಿರುವ ಕೋಲು ಬಳಸಿ ನಡೆಯುವ ಉದಯರಾವ್ ಅವರಿಗೆ ಮನೆಗೆ ಹೋಗಲು ಅಸಾಧ್ಯವಾಗಿದ್ರಿಂದ ರೊಚ್ಚಿಗೆದ್ದ ಉದಯ್ ಈ ರೀತಿ ಪ್ರತಿಭಟನೆ ನಡೆಸಿದ್ದಾರೆ.

Comments