ಎ. ಜೆ ಆಸ್ಪತ್ರೆ ಬಗ್ಗೆ ವದಂತಿ; ಸ್ಪಷ್ಟನೆಮಂಗಳೂರು : ಎ.ಜೆ.ಆಸ್ಪತ್ರೆಯಲ್ಲಿ ಹಲವಾರು ಕೊರೋನ ಸೋಂಕು ಪೀಡಿತ ರೋಗಿಗಳಿದ್ದಾರೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಆಧಾರ ರಹಿತವಾಗಿದ್ದು, ಕೊರೋನ ಪಾಸಿಟಿವ್ ರೋಗಿಗಳ ಬಗ್ಗೆ ಪ್ರತಿದಿನ ಸರಕಾರದ ಮೂಲಕ ಅಧಿಕೃತವಾಗಿ ವರದಿ ಪ್ರಕಟವಾಗುತ್ತಿದೆ. ಇಂತಹ ವದಂತಿಗಳನ್ನು ಸಾರ್ವಜನಿಕರು ನಂಬಬಾರದು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕೊವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಸರಕಾರಿ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು. ಜನರಲ್ಲಿ ಭೀತಿ ಮೂಡಿಸಬಾರದಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಎ.ಜೆ. ಆಸ್ಪತ್ರೆಯಲ್ಲಿ ಸರಕಾರ ನೀಡಿರುವ ನಿರ್ದೇಶನದ ಪ್ರಕಾರ ವೈದ್ಯರು, ವೈದ್ಯಕೀಯ ಸಿಬ್ಬಂದಿ,ಆಡಳಿತ ವಿಭಾಗದವರು ಎಲ್ಲಾ ನಿಯಮಾವಳಿಗಳನ್ನು ಅನುಸರಿಸಿ ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸ್ವಯಂ ಸುರಕ್ಷತೆಗಾಗಿ ಆರೋಗ್ಯ ಸಿಬ್ಬಂದಿ  ಪಿಪಿಇ ಕಿಟ್‌ಗಳನ್ನು ಧರಿಸಿರುತ್ತಾರೆ. ಆದುದರಿಂದ ಸೋಂಕು ಪೀಡಿತ ರೋಗಿಗಳು ಆಸ್ಪತ್ರೆಗೆ ಪ್ರವೇಶಿಸಿದರೆ ಸಿಬ್ಬಂದಿಗಳನ್ನು ಕ್ವಾರಂಟೈನ್‌ನಲ್ಲಿ ಇಡಬೇಕಾದ ಅಗತ್ಯವು ಇರುವುದಿಲ್ಲ. ಆದರೂ ಸೋಂಕು ಪೀಡಿತರೋಗಿ ಆಸ್ಪತ್ರೆಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಕರ್ತವ್ಯದಲ್ಲಿ ಇದ್ದ 25 ಸಿಬ್ಬಂದಿಗಳ ಬಗ್ಗೆ ನಿಗಾ ಇರಿಸಲಾಗಿದೆ. ಇವರು ಯಾರೂ ಕೊರೋನ ಪಾಸಿಟಿವ್ ರೋಗಿಗಳಲ್ಲ. ಆದರೂ ಆಸ್ಪತ್ರೆಯ ಬಗ್ಗೆ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗುತ್ತಿದೆ. ಇದರಿಂದ ಆಸ್ಪತ್ರೆಗೆ ಭೇಟಿ ನೀಡುವ ಮತ್ತು ಚಿಕಿತ್ಸೆ ಪಡೆಯುವವರಲ್ಲಿ ಅನಗತ್ಯ ಭೀತಿ ಮೂಡಿಸಿದಂತಾಗುತ್ತದೆ. ಕೊವಿಡ್-19 ಸೋಂಕು ಹರಡುತ್ತಿರುವ ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಕೋವಿಡ್-19 ಸೋಂಕಿನ ವಿರುದ್ಧ ಹೋರಾಟದಲ್ಲಿ ನಿರತರಾಗಿರುವವರಿಗೆ ಚಪ್ಪಾಳೆ ತಟ್ಟುವ ಮೂಲಕ, ದೀಪ ಹಚ್ಚುವ, ಗಂಟೆ ಭಾರಿಸುವ ಮೂಲಕ ಬೆಂಬಲ ನೀಡಿದರೆ ಸಾಲದು, ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸದೆ ಬೆಂಬಲ ನೀಡಬೇಕಾಗಿದೆ. ಕೋವಿಡ್ -19 ವಿರುದ್ಧ ಜನರಲ್ಲಿ ಭೀತಿ ಮೂಡಿಸದೆ ಅದರ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕಾಗಿದೆ ಎಂದು ಎ.ಜೆ.ಆಸ್ಪತ್ರೆಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Comments