ಬೇಡಿಕೆ ಇರುವ ಎಲ್ಲರಿಗೂ ಜಾಬ್ ಕಾರ್ಡ್ ನೀಡಿ; ಕೃಷಿಬದು, ಕೃಷಿಹೊಂಡ ನಿರ್ಮಾಣಕ್ಕೆ ಆದ್ಯತೆ ಕೊಡಿ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ



ಹುಬ್ಬಳ್ಳಿ: ಬೇಡಿಕೆ ಇರುವ ಎಲ್ಲರಿಗೂ ಎಂಜಿಎನ್‍ಆರ್‍ಇಜಿ ನಿಯಮಗಳಿಗೆ ಅನುಗುಣವಾಗಿ ಜಾಬ್‍ಕಾರ್ಡ್ ನೀಡಿ, ರೈತರ ಜಮೀನುಗಳಲ್ಲಿ ಕೃಷಿಬದು ಹಾಗೂ ಕೃಷಿಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಹೇಳಿದರು.

ಅವರು ಇಂದು ಬೆಳಿಗ್ಗೆ ಹುಬ್ಬಳ್ಳಿ ಪ್ರವಾಸಿ ಮಂದಿರದಲ್ಲಿ ಜರುಗಿದ ಪಂಚಾಯತರಾಜ್ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೃಷಿಗೆ ಫಲವತ್ತಾದ ಭೂಮಿ ಮತ್ತು ನೀರು ಅಗತ್ಯ. ಎಂ.ಜಿ.ಎನ್.ಆರ್.ಇ.ಜಿ. ಯೋಜನೆಯಲ್ಲಿ ರೈತರಿಗೆ ಅಗತ್ಯ ಉದ್ಯೋಗ ಕಲ್ಪಿಸುವುದರೊಂದಿಗೆ ಜಮೀನುಗಳಲ್ಲಿ ಕೃಷಿಬದು ನಿರ್ಮಾಣ ಹಾಗೂ ಕೃಷಿಹೊಂಡಗಳನ್ನು ಮಾಡುವ ಮೂಲಕ ಅಂತರಜಲ ಹೆಚ್ಚಿಸಬೇಕು. ಉತ್ತಮವಾದ ಮಳೆ ಆಗುತ್ತಿರುವುದರಿಂದ ಕೃಷಿಗೆ ಪೂರಕವಾದ ಕಾರ್ಯಗಳನ್ನು ರೈತರು ಅನುಸರಿಸುವಂತೆ ಅಧಿಕಾರಿಗಳು ಮನವರಿಕೆ ಮಾಡಿಕೊಡಬೇಕೆಂದು ಸಚಿವರು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಕೃಷಿಬದು, ಕೃಷಿಹೊಂಡ ಹಾಗೂ ಚೆಕ್‍ಡ್ಯಾಮ್‍ಗಳ ನಿರ್ಮಾಣ ಮತ್ತು ಪ್ರಗತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಜಿಲ್ಲೆ ಇತರ ಜಿಲ್ಲೆಗಳಿಗೆ ಮಾದರಿಯಾಗಲಿದೆ ಎಂದು ತಿಳಿಸಿದರು.

ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಇದರಿಂದ ಬಹು ಜನರಿಗೆ ಉಪಯೋಗವಾಗುತ್ತದೆ. ಇಲಾಖೆಗೆ ವಿವಿಧ ಯೋಜನೆಗಳಿಗಾಗಿ ಬಿಡುಗಡೆಯಾದ ಅನುದಾನ ಪೂರ್ಣ ಬಳಕೆ ಆಗುವಂತೆ ಮತ್ತು ಅದು ಸಾರ್ಧಕ ರೀತಿಯಲ್ಲಿ ವೆಚ್ಚವಾಗುವಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ. ಸತೀಶ್ ಮಾತನಾಡಿ, ಜಿಲ್ಲೆಯಲ್ಲಿ 1,38,880 ಉದ್ಯೋಗ ಚೀಟಿ ವಿತರಿಸಲಾಗಿದ್ದು, 3,49,764 ಕಾರ್ಮಿಕರು ಇದ್ದಾರೆ. ಇದರಲ್ಲಿ 63,039 ಉದ್ಯೋಗ ಚೀಟಿ ಮತ್ತು 1,26,352 ಜನ ಸಕ್ರಿಯವಾದ ಕಾರ್ಮಿಕರಿದ್ದಾರೆ. 1,57,403 ಜನ ಮಹಿಳಾ ಕಾರ್ಮಿಕರಿದ್ದು, ಇದರಲ್ಲಿ 54,483 ಜನ ಸಕ್ರಿಯ ಮಹಿಳಾ ಕಾರ್ಮಿಕರಿದ್ದಾರೆ. 626 ಹೊಸ ಉದ್ಯೋಗ ಚೀಟಿ ವಿತರಿಸಲಾಗಿದೆ ಎಂದು ಹೇಳಿದರು.

ಕೃಷಿಬದು ನಿರ್ಮಾಣ ಅಭಿಯಾನದಲ್ಲಿ ಜಿಲ್ಲೆಯ ರೈತರ ಜಮೀನುಗಳಲ್ಲಿ ಗ್ರಾಮಪಂಚಾಯತ್‍ಗಳಿಂದ 31,136 ಮತ್ತು ಕೃಷಿ ಇಲಾಖೆಯಿಂದ 7,325 ಸೇರಿ ಒಟ್ಟು 38,461 ಕೃಷಿ ಬದುಗಳನ್ನು ನಿರ್ಮಿಸಲಾಗಿದೆ. ಮತ್ತು ಗ್ರಾಮ ಪಂಚಾಯತ್‍ಗಳಿಂದ 384 ಹಾಗೂ ಕೃಷಿ ಇಲಾಖೆಯಿಂದ 105 ಹೀಗೆ ಒಟ್ಟು 489 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಸಿಇಓ ತಿಳಿಸಿದರು.

ಜಲಾಮೃತ ಯೋಜನೆಯಲ್ಲಿ 2019-20 ನೇ ಸಾಲಿನಲ್ಲಿ ಹುಬ್ಬಳ್ಳಿ ಹಾಗೂ ನವಲಗುಂದ ತಾಲೂಕಿನ ಒಟ್ಟು 19 ಕೆರೆಗಳ 111.24 ಹೆಕ್ಟೇರ್ ಭೂಮಿಯಲ್ಲಿ 4,76,460 ಘನ ಮೀಟರ್ ಹೂಳು ತೆಗೆಯಲಾಗಿದ್ದು, ರೂ.145.87 ಲಕ್ಷ ವೆಚ್ಚ ಮಾಡಲಾಗಿದೆ. 2020-21 ನೇ ಸಾಲಿಗೆ ಜಿಲ್ಲೆಯ ಎಲ್ಲ ತಾಲೂಕಿನ 70 ಕೆರೆಗಳ ಸುಮಾರು 561.71 ಹೆಕ್ಟೇರ್ ಭೂಮಿ ಹೂಳೆತ್ತುವ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಡಾ.ಬಿ.ಸಿ. ಸತೀಶ್ ಹೇಳಿದರು.

2019-20 ನೇ ಸಾಲಿಗೆ ಕುಡಿಯುವ ನೀರು ಸರಬರಾಜ ಸಂಬಂಧಿಸಿದ 332 ಕಾಮಗಾರಿಗಳಿಗೆ ಅನುಮೋದನೆ ಪಡೆದಿದ್ದು, 216 ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು 116 ಕಾಮಗಾರಿ ಪ್ರಗತಿಯಲ್ಲಿವೆ.

ಜಲಜೀವನ ಮೀಷನ್ ಯೋಜನೆಗಾಗಿ 2020-21 ನೇ ಸಾಲಿಗಾಗಿ 57 ಗ್ರಾಮಗಳಿಗೆ ಸಂಪೂರ್ಣ ಕುಡಿಯುವ ನೀರಿನ ಕಾರ್ಯಕ್ರಮ ಕೈಗೊಳ್ಳಲು 7,350 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಲ್ಲಿಸಲಾಗಿದ್ದು, 41,574 ಮನೆಗಳಿಗೆ ಕುಡಿಯುವ ನೀರಿನ ನಳ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಸಿಇಓ ಡಾ.ಬಿ.ಸಿ. ಸತೀಶ್ ತಿಳಿಸಿದರು.

ಎನ್.ಡಿ.ಆರ್.ಎಫ್ ಮತ್ತು ಎಸ್‍ಡಿಆರ್‍ಎಫ್ ಮಾರ್ಗ ಸೂಚಿಗಳನ್ವಯ ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ 147.55 ಲಕ್ಷ ರೂ.ಗಳ ಅನುದಾನದಲ್ಲಿ 103 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪಂಚಾಯತ್ ರಾಜ್ ಇಂಜಿನೀಯರಿಂಗ್ ಇಲಾಖೆಯ ಮೂಲಕ ವಿವಿಧ ಏಜೆನ್ಸಿಗಳಿಂದ 72 ನೆರೆ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 60 ಕಾಮಗಾರಿಗಳು ಪೂರ್ಣಗೊಂಡಿದ್ದು, 12 ಪ್ರಗತಿಯಲ್ಲಿವೆ ಮತ್ತು ವಿಶೇಷ ಅನುದಾನದಲ್ಲಿ ಕಲಘಟಗಿ ಹಾಗೂ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ 145 ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದ್ದು, 80 ಕಾಮಗಾರಿಗಳು ಮುಕ್ತಾಯವಾಗಿದ್ದು, 65 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಿಇಓ ಸಭೆಗೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ ಮಾತನಾಡಿ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ 2019-20ನೇ ಸಾಲಿಗೆ 16,691 ಮತ್ತು 2020-21 ನೇ ಸಾಲಿಗೆ 1,738 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಒಟ್ಟು 2,302 ಲಕ್ಷ ರೂ.ಗಳ ಆರ್ಥಿಕ ಸಾಧನೆ ಮಾಡಲಾಗಿದೆ. ಅಂಗನವಾಡಿಗಳಲ್ಲಿ ನೂತನವಾಗಿ 37 ಶೌಚಾಲಯ ನಿರ್ಮಿಸಲಾಗಿದ್ದು, 168 ಹಳೇ ಶೌಚಾಲಯಗಳನ್ನು ದುರಸ್ತಿ ಮಾಡಲಾಗಿದೆ. ಶಾಲೆಗಳಲ್ಲಿ ಹೊಸದಾಗಿ 52 ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, 2 ಕಾಮಗಾರಿಗಳು ಮುಕ್ತಾಯವಾಗಿದ್ದು, 50 ಪ್ರಗತಿಯಲ್ಲಿವೆ. ಘನ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಮಾತನಾಡಿ, ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆ, ಕುಡಿಯುವ ನೀರಿನ ಕಾಮಗಾರಿ, ನೆರೆ ಪರಿಹಾರ ಕಾಮಗಾರಿಗಳ ಪ್ರಗತಿ ಕುರಿತು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಕುಸುಮಾವತಿ ಶಿವಳ್ಳಿ, ಜಿಲ್ಲಾ ಪಂಚಾಯತ್ ಉಪಾಧ್ಯಕ ಶಿವಾನಂದ ಕರಿಗಾರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ದೀಪಕ್ ಮಡಿವಾಳರ, ಕೃಷಿ ಇಲಾಖೆ ಜಂಟಿನಿರ್ದೇಶಕ ರಾಜಶೇಖರ್ ಐ.ಬಿ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ರಾಮಚಂದ್ರ ಕೆ.ಎಂ. ಸೇರಿದಂತೆ ಆರ್.ಡಿ.ಪಿ.ಆರ್., ಲೋಕೊಪಯೋಗಿ, ಸಣ್ಣ ನೀರಾವರಿ, ಅರಣ್ಯ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Comments