ಲಾಕ್ ಡೌನ್ ಎಫೆಕ್ಟ್; ಮಂಗಳೂರಿನ ತಲಪಾಡಿಯ ಕೇರಳ ಕರ್ನಾಟಕ ಗಡಿಯಲ್ಲಿ ನಡೆಯಿತು ಮದುವೆ ಪ್ರಯತ್ನ



ಮಂಗಳೂರು: ಮದುವೆಗೆ ನಿಶ್ಚಯವಾದರೂ   ಜಿಲ್ಲಾಡಳಿತದ ಪಾಸ್ ಸಿಗದೇ ನೊಂದು ವಧು ವರರು ಕರ್ನಾಟಕ ಕೇರಳ ಗಡಿಭಾಗ ತಲಪಾಡಿಯಲ್ಲೇ  ತಾಳಿಕಟ್ಟಲು ಮುಂದಾದ ಘಟನೆ  ನಡೆದಿದೆ.


 ಕಾಸರಗೋಡು ಮುಳ್ಳೇರಿಯಾ ನಿವಾಸಿ ಪುಷ್ಪರಾಜ್ ಅವರ ವಿವಾಹ ಮಂಗಳೂರಿನ ವಿಮಲಾ ಎಂಬವರ ಜೊತೆ
ಸೋಮವಾರ ಮಂಗಳೂರಿನಲ್ಲಿ  ನಡೆಯಲು ನಿಶ್ಚಯವಾಗಿತ್ತು. ಆದರೆ ಲಾಕ್ ಡೌನ್ ನಿಂದ  ಕರ್ನಾಟಕ-ಕೇರಳ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿರುವುದರಿಂದ ಮದುವೆಯಾಗಲು  ಪಾಸ್‍ಗಾಗಿ ಪುಷ್ಪರಾಜ್ ಹಲವು ಬಾರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಾಸರಗೋಡು ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ನಿಗದಿಪಡಿಸಿದ ಮುಹೂರ್ತ ಬದಲಾಯಿಸಲು ಮನಸ್ಸು ಮಾಡದ ಎರಡೂ ಕಡೆಯವರು ಸೋಮವಾರ ದಿಬ್ಬಣ ಸಮೇತ ತಲಪಾಡಿ ಗಡಿಗೆ ಬಂದಿದ್ದರು.
ಬೆಳಗ್ಗೆ 11 ಗಂಟೆಗೆ ವಿವಾಹ ಮುಹೂರ್ತ ನಿಗದಿಯಾಗಿದ್ದರೂ ಎರಡು ಕಡೆಯ ಅಧಿಕಾರಿಗಳು  ಒಪ್ಪಿಗೆ ನೀಡಲಿಲ್ಲ. ಜಿಲ್ಲಾಡಳಿತ ಮಣಿಯದ ಹಿನ್ನೆಲೆಯಲ್ಲಿ ವಧೂವರರು ಗಡಿಯಲ್ಲೇ ತಾಳಿ ಕಟ್ಟಲು ತೀರ್ಮಾನಿಸಿದರು. ಕೊನೆಗೂ ಇದು ಸಾಧ್ಯವಾಗದಿದ್ದಾಗ ಜಿಲ್ಲಾಡಳಿತ ಮಧ್ಯಾಹ್ನ ಬಳಿಕ ಪಾಸ್ ನೀಡಿತು. ಸಂಜೆ ವಧುವನ್ನು ಮುಳ್ಳೇರಿಯಾದ ವರನ ಮನೆಗೆ ಕರೆದುಕೊಂಡು ರಾತ್ರಿ ವಿವಾಹ ನೆರವೇರಿಸಲಾಯಿತು. ನಂತರ ವಧೂವರರಿಬ್ಬರಿಗೂ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.

Comments