ಮಂಗಳೂರಿನಲ್ಲಿ ಮಗುಚಿದ ದೋಣಿ; 9 ಮಂದಿ ಮೀನುಗಾರರ ರಕ್ಷಣೆ
ಮಂಗಳೂರು :  ಹಳೆ ಬಂದರು ಧಕ್ಕೆಯ ಅಳಿವೆ ಬಾಗಿಲು ಬಳಿ ಮಂಗಳವಾರ ಬೆಳಗ್ಗೆ ಅರಸು ಹೆಸರಿನ ಮೀನುಗಾರಿಕಾ ದೋಣಿ ತಡೆಗೋಡೆ ಕಲ್ಲುಗಳಿಗೆ ಡಿಕ್ಕಿ ಹೊಡೆದು ಮಗಿಚಿದ ಘಟನೆ ಸಂಭವಿಸಿದ್ದು, ದೋಣಿಯಲ್ಲಿದ್ದ ಎಲ್ಲ 9 ಜನರನ್ನು ಕರಾವಳಿ ಕಾವಲು ಪೊಲೀಸ್ ಪಡೆಗೆ ಸೇರಿದ ಕರಾವಳಿ ನಿಯಂತ್ರಣ ದಳದ ಪೊಲೀಸರು ಮತ್ತು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ದೋಣಿ ಮಾಲಕ ಮಂಗಳಾದೇವಿ ನಿವಾಸಿ ರಾಜೇಶ್, ಮೀನುಗಾರಿಕಾ ಕಾರ್ಮಿಕರಾದ ಪಡುಬಿದ್ರಿಯ ಧೀರಜ್ ಮತ್ತು ದೀಕ್ಷಿತ್, ಬೆಳಗಾವಿಯ ಕೃಷ್ಣ ಸಂದೀಪ್, ತಮಿಳುನಾಡಿನ ಪಾಂಡ್ಯ ರಾಜ್ ಮತ್ತು ಶಾಂತವೇಳು, ಗುಜರಾತಿನ ಉಮರ್, ಛತ್ತೀಸಗಢದ ಮಿಥುನ್, ಒರಿಸ್ಸಾದ ಕುಮಾರ್  ಅಪಾಯದಿಂದ ಪಾರಾದವರು ಎಂದು ತಿಳಿದುಬಂದಿದೆ.

ಹಳೆ ಬಂದರಿನಿಂದ ಸೋಮವಾರ ರಾತ್ರಿ ಹಳೆ ಬಂದರಿನಿಂದ ಹೊರಟಿದ್ದ ಈ ದೋಣಿಯಲ್ಲಿ ರಾತ್ರಿ ವೇಳೆ ಮೀನು ಹಿಡಿದು ಮಂಗಳವಾರ ಮುಂಜಾನೆ ವಾಪಸ್ ಬರುತಿದ್ದಾಗ ಮುಂಜಾನೆಅಳಿವೆ ಬಾಗಿಲು ಬಳಿ ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ದೋಣಿಯ ಒಳಗೆ ನೀರು ತುಂಬಿದ್ದು,  ಸುದ್ದಿ ತಿಳಿದ ಕರಾವಳಿ ಕಾವಲು ಪಡೆಗೆ ಸೇರಿದ ಕರಾವಳಿ ನಿಯಂತ್ರಣ ದಳದ ಪೊಲೀಸ್ ಸಿಬ್ಬಂದಿ ಹರ್ಷತ್ ಮತ್ತು ರಾಜೇಶ್ ಅವರು ಸ್ಥಳಕ್ಕೆ ತೆರಳಿ ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಇದ್ದವರನ್ನು ರಕ್ಷಿಸಿದರು

Comments