ಚಿರತೆ ದಾಳಿಯಿಂದ ಮೃತರಾದ ಗಂಗಮ್ಮ ಅವರ ಮನೆಗೆ ಉಪಮುಖ್ಯಮಂತ್ರಿಗಳ ಭೇಟಿ 7.50 ಲಕ್ಷ ರೂ ಪರಿಹಾರ ಮಂಜೂರಾತಿ ಪತ್ರ ವಿತರಣೆ.


ರಾಮನಗರ, :- ಜಿಲ್ಲೆಯ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕೊಟ್ಟಗಾಣಹಳ್ಳಿಯ 62 ವರ್ಷದ ಮಹಿಳೆ ಚಿರತೆ ದಾಳಿಗೆ ಇತ್ತೀಚೆಗೆ ಮೃತಪಟ್ಟ ಹಿನ್ನಲೆಯಲ್ಲಿ ಉಪ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಐಟಿ &ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಡಾ. ಅಶ್ವಥ್ ನಾರಾಯಣ ಅವರು ಮೃತರ ಮನೆಗೆ ಭೇಟಿ ನೀಡಿ ಸರ್ಕಾರದಿಂದ ಮಂಜೂರು ಮಾಡಿರುವ 7.5 ಲಕ್ಷ ರೂ ಪರಿಹಾರ ಮಂಜೂರಾತಿ ಪತ್ರವನ್ನು ನೀಡಿದರು.
ಮಂಜೂರಾತಿ ಪತ್ರವನ್ನು ಮೃತರಾದ ಗಂಗಮ್ಮ ಅವರ ಸೊಸೆ ಲಕ್ಷಮ್ಮ ಹಾಗೂ ಮಮ್ಮಗ ರವಿಶಂಕರ್ ಅವರಿಗೆ ಹಸ್ತಾಂತರಿಸಿದ ನಂತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.
ನಂತರ ಚಿರತೆ ದಾಳಿ ನಡೆಸಿದ ಸ್ಥಳವನ್ನು ಪರಿಶೀಲಿಸಿ ಚಿರತೆಗಳು ಮನುಷ್ಯನ ಮೇಲೆ ದಾಳಿ ನಡೆಸುವುದು ಅಪರೂಪ. ಇದು ವಿಶೇಷ ಪ್ರಕರಣವಾಗಿದ್ದು ದಾಳಿ ನಡೆಸಿದ ಚಿರತೆಯನ್ನು ಸೆರೆ ಹಿಡಿಯಬೇಕಿದೆ ಎಂದರು.
ಅರಣ್ಯ ಇಲಾಖೆ ವತಿಯಿಂದ ಚಿರತೆ ಸೆರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ.ಸಿ.ಎಫ್ ಎಸ್.ಎನ್.ಹೆಗ್ಡೆ, ಎ.ಸಿ.ಎಫ್ ರಾಮಕೃಷ್ಣಪ್ಪ, ವನ್ಯ ಜೀವಿ ತಜ್ಞ ಸಂಜಯ್ ಗುಬಿ ಅವರಿಂದ ಮಾಹಿತಿ ಪಡೆದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಕ್ರಂ ಅವರು ಉಪಸ್ಥಿತರಿದ್ದರು.

Comments