ಚಾಮರಾಜನಗರ:ಜೂನ್ 1 ರಿಂದ ಖಾಸಗಿ ಬಸ್ ಸಂಚಾರ ಸೇವೆ ಆರಂಭ : ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿಚಾಮರಾಜನಗರ, :- ಜೂನ್ 1 ರಿಂದ ಜಿಲ್ಲೆಯ ವಿವಿಧ ಭಾಗಗÀಳಿಗೆ ಹಾಗೂ ಅಂತರಜಿಲ್ಲೆಗೆ ಶೇ. 50 ರಷ್ಟು ಖಾಸಗಿ ಬಸ್ ಸಂಚಾರ ಸೇವೆಯನ್ನು ಆರಂಭಿಸಲು ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಪ್ರಾರಂಭಿಸುವ ಸಂಬಂಧ ಖಾಸಗಿ ಬಸ್ ಮಾಲೀಕರ, ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಹಿತದೃಷ್ಟಿಯಿಂದ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡಿದ್ದ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಜಿಲ್ಲೆಯಾದ್ಯಂತ ಕೆ.ಎಸ್.ಆರ್.ಟಿಸಿ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಕೆ.ಎಸ್.ಆರ್,.ಟಿ.ಸಿ ಬಸ್‍ಗಳು ಜಿಲ್ಲೆ ಹಾಗೂ ಅಂತರಜಿಲ್ಲೆಗೆ ಈಗಾಗಲೇ ಸಂಚರಿಸುತ್ತಿದ್ದು, ಹಾಗೆಯೇ ಸಾರ್ವಜನಿಕರ ಅನುಕೂಲಕ್ಕಾಗಿ ಖಾಸಗಿ ಬಸ್‍ಗಳು ಸಹ ಜೂನ್ 1ರಿಂದ ಸಂಚರಿಸಲು ಅನುಮತಿ ನೀಡಲಾಗಿದೆ ಎಂದರು.

ಕೆ.ಎಸ್.ಆರ್.ಟಿ.ಸಿ ಬಸ್‍ಗಳಿಗೆ ನೀಡಿರುವ ಸೂಚನೆ, ಮಾರ್ಗಸೂಚಿಗಳನ್ನು ಖಾಸಗಿ ಬಸ್‍ಗಳ ಸಂಚಾರಕ್ಕೂ ನೀಡಲಾಗಿದ್ದು, ಜಿಲ್ಲೆಯಲ್ಲಿ ಶೇ. 50ರಷ್ಟು ಖಾಸಗಿ ಬಸ್‍ಗಳ ಸಂಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಖಾಸಗಿ ಬಸ್‍ಗಳ ಸೇವೆಯನ್ನು ಹೆಚ್ಚಿಸಲಾಗುವುದು. ನಂತರ ಬಸ್ ಸಂಚಾರ ಸೇವೆಗಳು ಸಹಜ ಸ್ಥಿತಿಗೆ ಬರಲಿವೆ ಎಂದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ವಿವಿಧ ಭಾಗಗಳಿಗೆ ಖಾಸಗಿ ಬಸ್‍ಗಳು ಸಂಚರಿಸಲಿದ್ದು, ಅಂತರಜಿಲ್ಲೆ ಮೈಸೂರಿಗೆ ಸಂಚರಿಸಲು ಮಾತ್ರ ಖಾಸಗಿ ಬಸ್‍ಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಬಸ್‍ಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರಮುಖ ಆದ್ಯತೆ ನೀಡಬೇಕು. ಮಾಸ್ಕ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನು ಬಳಸುವಂತೆ ಪ್ರಯಾಣಿಕರಿಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಹೇಳಿದರು.

ಖಾಸಗಿ ಬಸ್‍ಗಳಲ್ಲಿ ಸಂಚರಿಸುವ ಚಾಲಕ, ನಿರ್ವಾಹಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮುಖಗವಸು ಧರಿಸುವುದಲ್ಲದೇ ಸ್ಯಾನಿಟೈಸರ್ ಬಳಸುವಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಯಾಣಿಕರು ಸುರಕ್ಷಿತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಬಸ್‍ಗಳಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಲು ಅವಕಾಶ ನೀಡಬಾರದು ಬಸ್ ಹತ್ತುವಾಗ ಮತ್ತು ಇಳಿಯುವಾಗ ಸಾಮಾಜಿಕ ಅಂತರದ ಬಗ್ಗೆ ಪಾಲನೆ ಮಾಡಬೇಕು. ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ರವಿ ಅವರು ಸೂಚಿಸಿದರು.

ಶೀತ, ಕೆಮ್ಮು, ನೆಗಡಿ ಹಾಗೂ ಜ್ವರದ ಲಕ್ಷಣಗಳು ಇರುವವರಿಗೆ ಬಸ್‍ಗಳಲ್ಲಿ ಸಂಚರಿಸಲು ಅವಕಾಶ ನೀಡಬಾರದು. ಆದರೂ ಸಹ ಪ್ರಯಾಣಿಕರಿಗೆ ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಬೇಕು. ಶೀತ, ಕೆಮ್ಮು, ನೆಗಡಿ ಇರುವ ವ್ಯಕ್ತಿಗಳು ಕೆಮ್ಮುವಾಗ, ಸೀನುವಾಗ ಇತರರಿಂದ ದೂರವಿರುವಂತಹ ಜಾಗೃತಿ ಫಲಕಗಳನ್ನು ಖಾಸಗಿ ಬಸ್‍ಗಳಲ್ಲಿ ಅಳವಡಿಸಿಬೇಕು. ಜನರು ಕಿಟಕಿಯ ಬದಿಯಲ್ಲಿ ಎಲ್ಲೆಂದರಲ್ಲಿ ಉಗುಳದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಸಂಚರಿಸುವ ಖಾಸಗಿ ಬಸ್‍ಗಳಿಗೆ ಪ್ರತಿದಿನ 2 ಬಾರಿ ಕಡ್ಡಾಯವಾಗಿ ಸ್ಯಾನಿಟೈಜೇಷನ್ ಮಾಡಬೇಕು. ಸ್ಯಾನಿಟೈಜೇಷನ್ ದ್ರಾವಣವನ್ನು ಬಳಸುವ ವಿಧಾನಗಳ ಕ್ರಮಬದ್ದ ಮಾಹಿತಿಯನ್ನು ನಗರಸಭೆ ಅಧಿಕಾರಿ, ಸಿಬ್ಬಂದಿಯಿಂದ ಪಡೆಯಬೇಕು. ಅಲ್ಲದೇ ಎಲ್ಲಾ ಖಾಸಗಿ ಬಸ್ ಗಳಲ್ಲಿಯೂ ಥರ್ಮಲ್ ಸ್ಕ್ಯಾನರ್ ಅನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಬಸ್ ಚಾಲಕ ಮತ್ತು ನಿರ್ವಾಹಕರಿಗೆ ಐ.ಡಿ. ಕಾರ್ಡ್, ಸಮವಸ್ತ್ರವನ್ನು ನೀಡಬೇಕು. ಪ್ರತಿಯೊಬ್ಬರಿಗೂ ಪಾಯಿಂಟ್ ಟು ಪಾಯಿಂಟ್ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆಮಾಡಿ ಪ್ರಯಾಣಿಸಲು ಅನುಕೂಲ ಮಾಡಿಕೊಡಬೇಕು. ಪ್ರಯಾಣಿಕರಿಗೆ ಟೀಕೆಟ್ ನೀಡಲು ಕಡ್ಡಾಯವಾಗಿ ಫಾಸ್ಟ್ ಮಿಷನ್ ಬಳಸುವಂತೆ ಸೂಚಿಸಬೇಕು. ಈ ಎಲ್ಲಾ ಕ್ರಮಗಳ ಕುರಿತು ಖಾಸಗಿ ಬಸ್ ಚಾಲಕರು ನಿರ್ವಾಹಕರು ಸೇರಿದಂತೆ ಎಲ್ಲಾ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಬೇಕು. ಆಗ ಮಾತ್ರ ಎಲ್ಲರೂ ಜವಾಬ್ದಾರಿಯುತ ಕಾರ್ಯನಿರ್ವಹಣೆಗೆ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ. ರವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಕೆ. ಸುರೇಶ್, ಪೊಲೀಸ್ ಅಧಿಕಾರಿಗಳು, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷರಾದ ಕೆ.ಎಂ. ಅನ್ವರ್ ಪಾಷ, ಉಪಾಧ್ಯಕ್ಷರಾದ ವಿಜಯ ಕೃಷ್ಣ, ಕಾರ್ಯದರ್ಶಿಗಳಾದ ಮುರುಳಿ ಕೃಷ್ಣ, ಎಚ್.ವಿ. ತ್ಯಾಗರಾಜ್ ಸಭೆಯಲ್ಲಿ ಹಾಜರಿದ್ದರು.

Comments