ಉಡುಪಿಯಲ್ಲಿ ಇಂದು 18 ಮಂದಿ ಕೊರೊನಾ ಪಾಸಿಟಿವ್:ಮೂವರು ಪೊಲೀಸ್ ಸಿಬ್ಬಂದಿಗೆ ಸೋಂಕು ಪತ್ತೆ


ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇಂದು 18 ಮಂದಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ ಮೂರು ಮಂದಿ ಪೊಲೀಸ್ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು ಒಟ್ಟು 18 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಇವರಲ್ಲಿ 13 ಮಂದಿ ಮಹಾರಾಷ್ಟ್ರ ರಾಜ್ಯದ ವಿವಿದೆಡೆಗಳಿಂದ ಜಿಲ್ಲೆಗೆ ಮರಳಿದವರಾದರೆ, ಇಬ್ಬರು ಕಂಟೈನ್‌ಮೆಂಟ್ ರೆನ್‌ನಲ್ಲಿ ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ಇಬ್ಬರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ವರದಿ ತಿಳಿಸಿದೆ.ಇವರಲ್ಲಿ ಹತ್ತು ವರ್ಷ ಪ್ರಾಯದೊಳಗಿನ ಮೂವರು ಗಂಡು ಮಕ್ಕಳಿದ್ದು, ಮೂವರು ಮುಂಬಯಿಯಿಂದ ತಮ್ಮ ಹೆತ್ತವರೊಂದಿಗೆ ಬಂದವರು. ಉಳಿದಂತೆ ಎಂಟು ಮಂದಿ ಪುರುಷರು ಹಾಗೂ ಏಳು ಮಂದಿ ಮಹಿಳೆಯರು ಕೊರೋನ ಸೋಂಕಿಗೆ ತುತ್ತಾಗಿದ್ದಾರೆ.

ಮೂವರು ಪೊಲೀಸ್ ಸಿಬ್ಬಂದಿಗೆ ಸೋಂಕು ಪತ್ತೆಯಾಗಿದೆ.ಮೂರು ಠಾಣೆಗಳ ಎಲ್ಲಾ ಅಧಿಕಾರಿಗಳು, ಪೊಲೀಸರು ಹಾಗೂ ಇತರ ಸಿಬ್ಬಂದಿಗಳನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಸದ್ಯಕ್ಕೆ ಮೂರು ಠಾಣೆಗಳ ಕಟ್ಟಡಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಬ್ರಹ್ಮಾವರ, ಅಜೆಕಾರು ಪೊಲೀಸ್ ಠಾಣೆಗಳಲ್ಲದೇ, ಕಾರ್ಕಳ ಗ್ರಾಮಾಂತರ ಠಾಣೆ ಇರುವ ಕಟ್ಟಡದಲ್ಲೇ ಕಾರ್ಕಳ ನಗರ ಹಾಗೂ ವೃತ್ತ ನಿರೀಕ್ಷಕರ ಕಚೇರಿಗಳೂ ಇದ್ದು ಅವುಗಳನ್ನು ಸಹ ಮುಚ್ಚಲಾಗಿದೆ.ಈ ಕಟ್ಟಡಗಳಿಗೆ ಸಂಪೂರ್ಣ ಸ್ಯಾನಿಟೈಸರ್ ಸಿಂಪಡಣೆ ಮಾಡಿದ ಬಳಿಕ ಎರಡು ದಿನ ಬಿಟ್ಟು ಈ ಠಾಣೆಗಳು ಕಾರ್ಯಾರಂಭ ಮಾಡಲಿವೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಕೊರೋನ ಪಾಸಿಟಿವ್ ಬಂದ ಮೂವರು ಸಿಬ್ಬಂದಿಗಳ ಸಂಪರ್ಕಿತರ ಪಟ್ಟಿಯನ್ನು ತಯಾರಿಸುತಿದ್ದೇವೆ. ಅವರ ಕೊರೋನ ಸಂಪರ್ಕದ ಬಗ್ಗೆ ಮಾಹಿತಿಗಳನ್ನೂ ಕಲೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದರು. ಮೂವರನ್ನು ಈಗ ಉಡುಪಿಯ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments