ಹಾಸನ ಜಿಲ್ಲೆಯಲ್ಲಿ 13 ಹೊಸ ಪ್ರಕರಣ.ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆ



ಹಾಸನ, :- ಜಿಲ್ಲೆಯಲ್ಲಿ ಹೊಸದಾಗಿ ಮತ್ತೆ 13 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ 112 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಸುದ್ಧಿಗೋಷ್ಠಿ ನಡೆಸಿದ ಅವರು ಇಂದು ವರದಿಯಾದ ಎಲ್ಲಾ ಪಾಸಿಟೀವ್ ಪ್ರಕರಣಗಳಿಗೆ ಮಹಾರಾಷ್ಟ್ರದಿಂದ ಆಗಮಿಸಿದ ಹಿನ್ನಲೆ ಹೊಂದಿದ್ದು, ಎಲ್ಲರೂ ಚನ್ನರಾಯಪಟ್ಟಣ ತಾಲ್ಲೂಕಿಗೆ ಸೇರಿದವರಾಗಿದ್ದಾರೆ. ಸೋಂಕು ಪತ್ತೆಯಾದ ಎಲ್ಲರನ್ನೂ ನಗರದ ಕೋವಿಡ್ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ದಾಖಲಾಗಿರುವ ಎಲ್ಲರೂ ಆರೋಗ್ಯಯುತವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಒಟ್ಟಾರೆ ಈವರಗೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 80, ಹೊಳೆನರಸೀಪುರ 16, ಆಲೂರು 3, ಹಾಸನ 9, ಅರಕಲಗೂಡು 3 ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ 1 ಕೋರೋನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ವಿವರ ನೀಡಿದರು.

ನಗರದ ಉತ್ತರಬಡಾವಣೆ ಹಾಗೂ ಬಿ. ಕಾಟೀಹಳ್ಳಿ ಪ್ರದೇಶಗಳನ್ನು ನಿರ್ಬಂಧಿತ ವಲಯಗಳನ್ನಾಗಿ ಗುರುತಿಸಲಾಗಿದ್ದು, ಉತ್ತರ ಬಡಾವಣೆಯ ಸೋಂಕಿತರ ಸಂಪರ್ಕದಲ್ಲಿದ್ದ ಐವರು ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಎಲ್ಲವೂ ನೆಗೆಟೀವ್ ಎಂದು ವರದಿ ಬಂದಿದೆ. ಬಿ. ಕಾಟೀಹಳ್ಳಿಯಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 21 ಜನರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. 17 ಮಂದಿಯ ವರದಿ ನೆಗೆಟೀವ್ ಬಂದಿದ್ದು, ನಾಲ್ವರ ವರದಿ ನಿರೀಕ್ಷಣೆಯಲ್ಲಿದೆ ಎಂದು ಹೇಳಿದರು.

ಸರ್ಕಾರದ ಆದೇಶದಂತೆ ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ 28 ದಿನಗಳವರೆಗೆ ನಿರ್ಬಂಧವನ್ನು ಮುಂದುವರೆಸಬೇಕು. ಈ ನಿಟ್ಟಿನಲ್ಲಿ ಆ ಪ್ರದೇಶದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಂಟೈನ್‍ಮೆಂಟ್ ಜೋನ್ ಆ್ಯಪ್ ಮೂಲಕ ನಿರ್ಬಂಧಿತ ಪ್ರದೇಶದ ಪ್ರತಿಯೊಂದು ಮನೆಗಳನ್ನು ಗುರುತಿಸಿ ಮನೆ ಮನೆ ಭೇಟಿ ನೀಡಿ ಪ್ರತಿನಿತ್ಯ ಅವರ ಆರೋಗ್ಯ ಲಕ್ಷಣಗಳ ವರದಿ ಪಡೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಮೇ.28 ರಂದು ಪಶ್ವಿಮ ಬಂಗಾಳಕ್ಕೆ ಹೋಗುವವರಿಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಹಾಸನದಿಂದ ಸುಮಾರು 945 ಜನ ಹಾಗೂ ಕೊಡಗಿನಿಂದ ಸುಮಾರು 550 ಜನ ಪ್ರಯಾಣಿಸಲಿದ್ದಾರೆ ಎಂದು ಆರ್.ಗಿರೀಶ್ ತಿಳಿಸಿದರು.

ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಒಬ್ಬರಿಗೆ ನೆಗೆಟೀವ್ ವರದಿ ಬಂದಿದ್ದು, ಎರಡು ಬಾರಿ ಪರೀಕ್ಷೆ ನಡೆಸಿ ವರದಿ ಬಂದ ನಂತರ ಗುಣಮುಖರಾಗಿರುವುದನ್ನು ಖಾತರಿಪಡಿಸಿಕೊಂಡು ಬಿಡುಗಡೆ ಮಾಡಲಾಗುವುದು ಎಂದರು.

ಸಹಾಯವಾಣಿ ಸಂಪರ್ಕಿಸಲು ಸೂಚನೆ
ಜಿಲ್ಲೆಗೆ ಹೊರರಾಜ್ಯಗಳಿಂದ ಬರುತ್ತಿರುವವರಿಂದಲೇ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ, ಯಾವುದೇ ರೀತಿಯ ಅನುಮತಿ ಇಲ್ಲದೆ ಯಾರಾದರೂ ಬಂದಿದ್ದರೆ, ಅಂತಹವರ ಬಗ್ಗೆ ಸಾರ್ವಜನಿಕರು ದೂರವಾಣಿ ಸಂಖ್ಯೆ 08172-2611 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ಅವರು ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅನಗತ್ಯ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಲ್ಲದೇ, ಈಗಾಗಲೇ ಒಬ್ಬರ ಮೇಲೆ ಪ್ರಕರಣ ದಾಖಲಾಗಿದೆ ಎಂದರು.

Comments