ಬಹರೇನ್: ಗುರುಸೇವಾ ಸಮಿತಿಯ ಹೊಸ ಕಾರ್ಯಕಾರಿ ಸಮಿತಿ ನೇಮಕ |
ಪ್ರಕಟಿಸಿದ ದಿನಾಂಕ : 2008-06-25
ಹೊಸ ಸಂಕಲ್ಪಗಳೊಂದಿಗೆ ಸಮಿತಿಯನ್ನು ಮುನ್ನಡೆಸುವ ಹುರುಪಿನಲ್ಲಿ ಹೊಸ ಸದಸ್ಯರು
ಮನಾಮಾ, ಜೂನ್ 26: ಬಹರೇನ್ ಗುರುಸೇವಾ ಸಮಿತಿಯ ೨೦೦೮-೨೦೦೯ ಸಾಲಿನ ಹೊಸ ಕಾರ್ಯಕಾರಿ ಸಮಿತಿ ನೇಮಕವಾಗಿದ್ದು ಜೂನ್ ೧೯ ರಂದ ನಗರದ ಪ್ಯಾಪಿಲಾನ್ ರೆಸ್ಟೋರೆಂಟ್ ನಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಕಾರ್ಯಾಚರಣೆಗೆ ತೊಡಗಿತು.
ಹಲವು ಮನರಂಜನಾ ಕಾರ್ಯಕ್ರಮಗಳು ಮಾತೃಭಾಷೆ ತುಳುವಿನಲ್ಲಿ ಪ್ರಸ್ತುತಗೊಂಡಿದ್ದು ವಿಶೇಷವಾಗಿತ್ತು.
ಸಂಜೆ ನಿಗದಿತ ಸಮಯಕ್ಕೆ ತೊಡಗಿದ ಕಾರ್ಯಕ್ರಮವು ಅಧ್ಯಕ್ಷರಾದ ರಾಜ್ ಕುಮಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆಗೊಂಡಿತು. ಖ್ಯಾತ ಉದ್ಯಮಿ ಶ್ರೀ ಸುಧಾಕರ ಶೆಟ್ಟಿಯವರು ವಿಶೇಷ ಅತಿಥಿಗಳಾಗಿ ಆಹ್ವಾನಿತರಾಗಿದ್ದರು. ಅವರು ಈ ಸಮಾರಂಭದ ಓರ್ವ ಪ್ರಾಯೋಜಕರೂ ಆಗಿದ್ದರು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಸಮಿತಿಯ ಹೊಸ ಸದಸ್ಯರನ್ನು ಸಭೆಗೆ ಪರಿಚಯಿಸಲಾಯಿತು. ಸಮಿತಿಯ ಚಟುವಟಿಕೆಯ ಆಗರ ಶ್ರೀಮತಿ ಚಂದ್ರಲೇಖಾ ಅವರು ನಿರೂಪಣೆ ನೀಡಿದರು. ಆ ಬಳಿಕ ಮಾತನಾಡಿದ ಅಧ್ಯಕ್ಷರು ಸಮಿತಿಯು ಹೊಸ ಚಟುವಟಿಕೆಗಳೊಂದಿಗೆ ಕಾರ್ಯತತ್ಪರರಾಗಲು ಕರೆ ನೀಡಿದರು.
ಆ ಬಳಿಕ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಕನ್ನಡ, ಹಿಂದಿ ಹಾಗೂ ತುಳು ಹಾಡು ಮತ್ತು ಕಿರುರೂಪಕಗಳನ್ನು ಪ್ರದರ್ಶಿಸಲಾಯಿತು. ಅಧಿಕ ಸಂಖ್ಯೆಯಲ್ಲಿ ಹಾಜರಿದ್ದ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಲ್ಲಿ ಸಹಕರಿಸಿದರು. ಅಂತಿಮವಾಗಿ ರಾಫೆಲ್ ಡ್ರಾ ಮೂಲಕ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಇಂತಹ ಕಾರ್ಯಕ್ರಮ ಬೇಗನೇ ಇನ್ನೊಂದು ಜರುಗಲಿ ಎಂಬ ಹಾರೈಕೆಯಿಂದ ಕಾರ್ಯಕ್ರಮ ಮುಕ್ತಾಯ ಕಂಡಿತು.
ವರದಿಯ ವಿವರಗಳು |
 |
ಕೃಪೆ : ಗುರುಸೇವಾ ಸಮಿತಿ ಬಹರೇನ್ ಪ್ರಕಟನೆ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-25
|
|
|