ಜೆದ್ದಾ: ಸೌದಿ ನಾಗರಿಕರಂತ ಸೋಗು ಹಾಕಿ ನೌಕರಿ ಗಿಟ್ಟಿಸಿದ ಯೆಮನಿ ಪೋರರು |
ಪ್ರಕಟಿಸಿದ ದಿನಾಂಕ : 2008-06-20
ಖಾಸಗಿ ಸಂಸ್ಥೆಗಳಲ್ಲಿ ಆರು ತಿಂಗಳು ಮಾಡಿದ್ದ ಉದ್ಯೋಗ : ಸಧ್ಯ ಮಾವನ ಮನೆಯಲ್ಲಿ
ಜೆದ್ದ, ಜೂನ್ 20 ಸೌದಿ ಅರೇಬಿಯಾದಲ್ಲಿ ನಾಗರಿಕರಿಗೆ ಹೆಚ್ಚಿನ ಸೌಲಭ್ಯಗಳಿದ್ದು ಅವುಗಳ ದುರುಪಯೋಗ ಪಡೆದುಕೊಳ್ಳುವ ಇರಾದೆಯಿಂದ ನಾಲ್ವರು ಯೆಮನಿ ಯುವಕರು ಸೌದಿ ಗುರುತಿನ ಪತ್ರವನ್ನು ನಕಲಿಸಿ ಸೌದಿ ಪೌರರಂತೆ ಸೋಗು ಹಾಕಿ ಉದ್ಯೋಗ ಗಿಟ್ಟಿಸಿಕೊಂಡಿದ್ದು ವರದಿಯಾಗಿದೆ.
ಸೌದಿ ಅರೇಬಿಯಾದ ವಿಶೇಷ ತನಿಖಾ ದಳ The Financial Crimes Combat Unit (FCCU) ಕ್ಕೆ ಸಿಕ್ಕಿದ ಚಿಕ್ಕ ಸುಳಿವೊಂದರ ಬೆನ್ನು ಹತ್ತಿ ಕಳೆದ ಆರು ತಿಂಗಳಿಂದ ಖಾಸಗಿ ಸಂಸ್ಥೆಯಲ್ಲಿ ಸೌದಿ ಪೌರರಂತೆ ಸೋಗು ಹಾಕಿಕೊಂಡಿದ್ದ ನಾಲ್ವರನ್ನೂ ಬಂಧಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಸೌದಿ ಪೋಲೀಸ್ ಇಲಾಖೆಯ ಸಿ.ಐಡಿ ವಿಭಾಗದ ವಿಶೇಷ ದಳವಾಗಿರುವ ಈ ದಳದ ಅಧಿಕಾರಿಗಳು ನಾಲ್ವರನ್ನೂ ವಿಚಾರಣೆಗೆ ಗುರಿಪಡಿಸಿದಾಗ ಸೌದಿ ಪೌರರಿಗೆ ನೀಡಲಾಗುವ ಹೆಚ್ಚಿನ ವೇತನದ ಆಮಿಶದಿಂದ ಈ ಕೃತ್ಯವನ್ನು ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ಕೊಂಚ ಕಾಲ ಕಳೆದ ಬಳಿಕ ಬ್ಯಾಂಕ್ ಹಾಗೂ ಇನ್ನಿತರ ಹಣಕಾಸು ಸಂಸ್ಥೆಗಳ ವಿಶ್ವಾಸ ಗಿಟ್ಟಿಸಿಕೊಂಡು ದೊಡ್ಡ ಮೊತ್ತದ ಹಣವನ್ನು ಸಾಲವನ್ನಾಗಿ ಪಡೆದು ಯೆಮೆನ್ ದೇಶಕ್ಕೆ ಹಿಂತಿರುಗಿ ಪರಾರಿಯಾಗುವ ಯೋಜನೆಯನ್ನೂ ಅವರು ವಿಚಾರಣೆಯಲ್ಲಿ ಬಹಿರಂಗಪಡಿಸಿದ್ದಾರೆ.
ಆ ಬಳಿಕ ನಾಲ್ವರನ್ನೂ ಬಂಧಿಸಿ ಹೆಚ್ಚಿನ ವಿಚಾರಣೆ ಹಾಗೂ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ ಎಂದು ಜೆದ್ದಾ ಪೋಲೀಸ್ ವಿಭಾಗದ ಅಧಿಕಾರಿಯಾಗಿರುವ ಕರ್ನಲ್ ಮಿಸ್ಫರ್ ಅಲ್ ಜೇ ಐದ್ ಅವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಅಲ್ ಮದೀನಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-20
|
|
|