ಒಬಾಮಾ ಪ್ರಚಾರಕ್ಕೆ ಭಾರತೀಯನ ಶಕ್ತಿ |
ಪ್ರಕಟಿಸಿದ ದಿನಾಂಕ : 2008-06-19
ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಪ್ರಾಬಲ್ಯ ಎಲ್ಲರಿಗೂ ತಿಳಿದದ್ದೇ. ಅಲ್ಲಿನ ಎಲ್ಲಾ ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಆದರೆ ಹರಿ ಸೇವುಗನ್ ಎಂಬ ಭಾರತೀಯ ಮೂಲದ ವ್ಯಕ್ತಿ ಈಗ ನೂತನ ಸ್ತರಕ್ಕೆ ಭಾರತೀಯರ ಪ್ರತಿಷ್ಠೆಯನ್ನು ಬೆಳೆಸಿದ್ದಾರೆ.
ಹಿಲರಿ ಕ್ಲಿಂಟನ್‌ಳನ್ನು ಹಿಂದಿಕ್ಕಿ ಡೆಮೋಕ್ರಾಟ್ ಪಕ್ಷದ ಮುಂಚೂಣಿಯಾಗಿ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್‍ಧಿಸಿರುವ ಬ್ಯಾರಾಕ್ ಒಬಾಮಾ ಅವರ ಮಾಧ್ಯಮ ವ್ಯವಹಾರದ ಜವಾಬ್ದಾರಿ ಹರಿ ಸೇವುಗನ್‌ಗೆ ಬಂದಿದೆ.
ಕ್ಲಿಂಟನ್ ಮತ್ತು ಒಬಾಮಾ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದ ಕಾಲದಲ್ಲಿ ಹರಿಯನ್ನು ನೇಮಿಸಿಕೊಳ್ಳಲಾಗಿತ್ತು. ಆಗಿನಿಂದ ಅವರು ತೋರಿದ ಸಾಧನೆ ಒಬಾಮಾ ಬಳಗಕ್ಕೆ ಸಂಪೂರ್‍ಣ ಸಮಾಧಾನವಾಗಿದೆ. ಹಿಲರಿ ಕ್ಲಿಂಟನ್ ವಿರುದ್ಧ ಸೆಣಸಾಡಲು ಬೇಕಾಗಿದ್ದ ಎಲ್ಲಾ ಪ್ರಚಾರಗಳನ್ನು ಹರಿ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಈಗ ಹಿಲರಿಯನ್ನು ಒಬಾಮಾ ಹಿಂದಿಕ್ಕಿರುವುದರಿಂದ ಅಂತಿಮ ಎದುರಾಳಿ ರಿಪಬ್ಲಿಕನ್ ಅಭ್ಯರ್‍ಥಿ ಜಾನ್ ಮೆಕ್‌ಕೈನ್ ವಿರುದ್ಧ ಹರಿ ಸೇವುಗನ್ ಕತ್ತಿ ಹರಿತಗೊಳಿಸಿದ್ದಾರೆ. ದೇಶೀ ಮತ್ತು ವಿದೇಶೀ ನೀತಿಯ ವಿಷಯಗಳಲ್ಲಿ ಹರಿ ಅವರು ಸಮರ್‍ಥ ಪ್ರಚಾರಗಳನ್ನು ಒಬಾಮಾಗೆ ಒದಗಿಸುವಲ್ಲಿ ಕಾರ್‍ಯಮಗ್ನರಾಗಿದ್ದಾರೆ.
ಹರಿ ಸೇವುಗನ್ ಅವರು ಇಲ್ಲಿನ ರಾಜಕೀಯಕ್ಕೆ ಹೊಸಬರೇನೂ ಅಲ್ಲ. ಡೆಮೋಕ್ರಾಟ್ ಸ್ಪರ್‍ಧೆಯಲ್ಲಿದ್ದ ಸೆನಟರ್ ಕ್ರಿಸ್ ಡಾಡ್ ಅವರಿಗೆ ಸಂವಹನಾ ನಿರ್‍ದೇಶಕರಾಗಿದ್ದವರು ಇವರೇ.
ರಾಜ್ಯಶಾಸ್ತ್ರ ಮತ್ತು ಹಣಕಸು ವಿಷಯಗಳಲ್ಲಿ ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಹರಿಸೇವುಗನ್ ಅವರ ಪೋಷಕರು ಭಾರತದಿಂದ ವಲಸೆ ಬಂದು ಇಲ್ಲಿ ನೆಲೆಸಿದವರಾಗಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-06-19
|
|
|