ಉದ್ಯೋಗಕ್ಕಾಗಿ ಬಂದವರು ಒಂಟೆಕಾವಲಿಗೆ: ಭಾರತೀಯದ ಅಳಲು |
ಪ್ರಕಟಿಸಿದ ದಿನಾಂಕ : 2007-12-14
ದೋಹಾ, ಡಿಸೆಂಬರ್ ೧೪: ಉತ್ತಮ ಉದ್ಯೋಗದ ಆಮಿಷ ತೋರಿಸಿ ಕತರ್ ಗೆ ಬಂದ ಭಾರತೀಯರಿಬ್ಬರನ್ನು ಅವರಿಗೆ ಮಾತುಕೊಟ್ಟಿದ್ದ ಕೆಲಸವನ್ನು ನೀಡದೇ ಒಂಟೆಕಾವಲು ಕಾಯಲು ಮರುಭೂಮಿಗೆ ರವಾನಿಸಿದ ಘಟನೆ ವರದಿಯಾಗಿದೆ. ಕೇರಳದ ವಡಕ್ಕಾಂಜೇರಿ ಸಮೀಪದ ಗ್ರಾಮವೊಂದರ ನಿವಾಸಿಗಳಾಗಿರುವ ಸುಲೇಮಾನ್ ಮತ್ತು ಜಾಫರ್ ಎಂಬ ಇಬ್ಬರು ಭಾರತೀಯರನ್ನು ಕೇರಳದ ಏಜೆಂಟರೊಬ್ಬರು ಒಳ್ಳೆಯ ಕೆಲಸದ ಆಮಿಷ ತೋರಿಸಿ ಪ್ರತಿ ವ್ಯಕ್ತಿಗೆ ೬೦,೦೦೦ ರೂಪಾಯಿಗಳನ್ನು ಪಡೆದುಕೊಂಡು ಕತರಿಗೆ ಕಳಿಸಿದ್ದರು. ಆದರೆ ಕತರ್ ತಲುಪಿದ ಇಬ್ಬರಿಗೂ ಅವರನ್ನು ಕೆಲಸಕ್ಕೆ ತೆಗೆದುಕೊಂಡವರು ವೀಸಾ ಸ್ಟಾಂಪ್ ಲಗತ್ತಿಸಾ ಬಳಿಕ ಕತಾರ್ ಸೌದಿ ಗಡಿಯಲ್ಲಿರುವ, ಸೌದಿ ಅರೇಬಿಯಾಕ್ಕೆ ಸೇರಿದ ಅಲ್ ಹಸಾದಿಂದ ೮೦ ಕಿ.ಮಿ. ದೂರವಿರುವ ಅಲ್ ಸಾದಿಯಾ ಎಂಬಲ್ಲಿ ಬರೆಯ ಒಂದು ಟೆಂಟ್ ಮಾತ್ರವಿರುವ ಸ್ಥಳದಲ್ಲಿ ಕನಿಷ್ಟ ಸೌಲಭ್ಯಗಳನ್ನು ಮಾತ್ರ ಒದಗಿಸಿ ಒಂಟೆಗಳನ್ನು ಕಾವಲು ಕಾಯಲು ಕಳಿಸಲಾಗಿದೆ. ಯಾವಾಗಲೋ ಒಮ್ಮೆ ಅಗತ್ಯವಸ್ತುಗಳನ್ನು ನೀಡುವ ಇವರ ಮಾಲಿಕರ ಬಳಿ ಸಂಬಳ ಕೇಳಿದರೆ ಹಲ್ಲೆ ನಡೆಸುತ್ತಾರೆಂದು ಅವರು ದೂರಿದ್ದಾರೆ.
ಏಳುನೂರು ರಿಯಾಲ್ ಸಂಬಳ ನಿಗದಿಗೊಳಿಸಿ ಬಂದ ಇವರಿಗೆ ಕಳೆದ ಎರೆಡು ತಿಂಗಳಿಂದ ಒಂದು ತಿಂಗಳ ಸಂಬಳ ಮಾತ್ರ ಸಿಕ್ಕಿದೆ. ನಗರದ ಯಾವುದೇ ಸಂಪರ್ಕವಿಲ್ಲದ ಇವರಿಗೆ ಮರುಭೂಮಿಯ ಮಧ್ಯದ ಒಂಟಿಜೀವನ ಅಸಾಧ್ಯವಾಗಿದೆ. ಆಕಸ್ಮಿಕವಾಗಿ ಇವರಲ್ಲೊಬ್ಬರು ಕತರ್ ನಲ್ಲಿರುವ ಸಮಾಜ ಸೇವಕರ ಮೊಬೈಲಿಗೆ ಮಿಸ್ ಕಾಲ್ ಕೊಡಲು ಸಾಧ್ಯವಾಗಿತ್ತು. ಬಳಿಕ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿದ ಸಮಾಜ ಸೇವಕರು ಇವರ ಅಳಲನ್ನು ಆಲಿಸಿ ಭಾರತೀಯ ದೂತಾವಾಸಕ್ಕೆ ಇವರ ಬಗ್ಗೆ ದೂರು ನೀಡಿದ್ದಾರೆ.
ಇಂತರ ಹಲವಾರು ಪ್ರಕರಣಗಳು ದಾಖಲಾಗಿದ್ದು, ಇಂತಹ ಒಂದು ಸ್ಥಳದಿಂದ ಭಾರತೀಯರಾದ ಬಾಲನ್ ಎಂಬುವರು ಪರಾರಿಯಾಗಿದ್ದಾರೆ. ಮರುಭೂಮಿಯ ನಡುವೆ ಇರುವ ಸಾದಿಯಾದಿಂದ ಬಾಲನ್ ಜೀವಸಹಿತ ಹೊರಬಿದ್ದಿರುವ ಯಾವ ಪುರಾವೆ ಇನ್ನೂ ಸಿಕ್ಕಿಲ್ಲ. ಬಾಲನ್ ಕಣ್ಮರೆ ಪ್ರಕರಣ ಸಹಿತ ಇತರ ಪ್ರಕರಣಗಳ ಬಗ್ಗೆ ಭಾರತೀಯ ದೂತಾವಾಸದಲ್ಲಿ ಮಾತುಕತೆಗಳು ನಡೆಯುತ್ತಿವೆ. ಉಳಿದ ವಿವರಗಳು ಸಧ್ಯದಲ್ಲಿಯೇ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ವರದಿಯ ವಿವರಗಳು |
 |
ಕೃಪೆ : ದಿ ಪೆನಿನ್ಸುಲಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2007-12-14
|
|
|