ಬಹರೇನ್: ಬಹರೇನ್ ಬಿಲ್ಲವ ಸಮುದಾಯದ ಹಿರಿಯನಿಗೆ ಶುಭವಿದಾಯ |
ಪ್ರಕಟಿಸಿದ ದಿನಾಂಕ : 2008-06-18
ಸ್ವದೇಶಕ್ಕೆ ಹೊರಟುನಿಂತ ಹಿರಿಯಣ್ಣನಿಗೆ ಭಾವಪೂರ್ಣ ವಿದಾಯ
ಮನಾಮಾ, ಜೂನ್ 18: ಸುಮಾರು ಮೂರು ದಶಕಗಳಷ್ಟು ಕಾಲ ಬಹರೇನ್ ದ್ವೀಪರಾಷ್ಟ್ರದಲ್ಲಿ ನೆಲೆಸಿ ಇಲ್ಲಿನ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿದು ಅನಿವಾಸಿ ಬಿಲ್ಲವ ಸಮುದಾಯದವರ ಸಂಘಟನೆಯಾದ -ಗುರುಸೇವಾ ಸಮಿತಿ-ಯ ನಿಕಟಪೂರ್ವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಇದೀಗ ನಿವೃತ್ತ ಜೀವನ ಸ್ವದೇಶದಲ್ಲಿ ನಡೆಸುವ ಉದ್ದೇಶದಿಂದ ತಾಯ್ನಾಡಿಗೆ ಮರಳಿ ಹೊರಟಿರುವ ಕಂಕನಾಡಿ ವಿಶ್ವನಾಥ್ ಅಮೀನ್ ಅವರಿಗೆ ಗುರುಸೇವಾ ಸಮಿತಿಯ ಸದಸ್ಯರು ಭಾವಪೂರ್ಣ ವಿದಾಯ ಕೋರಿದರು. ಇಲ್ಲಿನ ವೃಂದಾವನ ಹೋಟೆಲ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಶ್ವನಾಥ್ ಅವರಿಗೆ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಹಾರ್ದಿಕವಾಗಿ ಬೀಳ್ಕೊಡಲಾಯಿತು.
ಗುರುಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ನೈಂಪಳ್ಳಿಯವರು ನೆರೆದ ಬಿಲ್ಲವ ಬಾಂಧವರನ್ನು ಸ್ವಾಗತಿಸಿದರೆ ಅಧ್ಯಕ್ಷರಾದ ಶ್ರೀ ರಾಜ್ ಕುಮಾರ್ ರವರು ವಿಶ್ವನಾಥ ಅಮೀನ್ ಅವರು ಬೆಳೆದು ಬಂದ ದಾರಿ ಹಾಗೂ ಸಾಧಿಸಿದ ಸಾಧನೆಗಳ ಪರಿಚಯ ನೀಡಿ ಸ್ಮರಣಿಕೆಯೊಂದಿಗೆ ಗೌರವಿಸಿ ಶುಭಕೋರಿದರು. ಆ ಬಳಿಕ ಮಾತನಾಡಿದ ಅಮೀನ್ ಅವರು ಬಿಲ್ಲವ ಸಂಘಟನೆಯಾದ ಗುರುಸೇವಾ ಸಮಿತಿಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದು ತಮಗೆ ಅತೀವ ಹರ್ಷ ತಂದಿದೆ, ಈ ಸಂಘಟನೆಯ ಮೂಲಕ ಬಿಲ್ಲವ ಬಳಗದ ಭ್ರಾತೃತ್ವ ಹಾಗೂ ಸಮುದಾಯದ ಏಳ್ಗೆಯಾಗಲಿ ಎಂದು ಹಾರೈಸಿದರು. ಗುರುಸೇವಾ ಸಮಿತಿಯ ಹಿರಿಯ ಸದಸ್ಯರಾದ ಶಂಕರ್ ಜತ್ತನ್ನ, ಎಸ್.ಎಸ್. ಸಾಲ್ಯಾನ್ ಸಹಿತ ಇತರ ಹಿರಿಯರು ಅಮೀನ್ ರವರ ಬಗ್ಗೆ ಕೆಲವು ಮಾತನಾಡಿ ಶುಭಕೋರಿದರು.
ಶ್ರೀಯುತ ವಿಶ್ವನಾಥ ಅಮೀನ್ ರವರು ಸುಮಾರು ಮೂರು ದಶಕಗಳಿಂದ ಇಲ್ಲಿ ನೆಲೆಸಿದ್ದು ಇಲ್ಲಿನ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದಾರೆ. ಇವರು ಕನ್ನಡ ಸಂಘದ ಅಧ್ಯಕ್ಷರಾಗಿ ಹಾಗೂ ಗುರುಸೇವಾ ಸಮಿತಿಯ ಎರೆಡು ಅವಧಿಗಳಲ್ಲಿ ಅಧ್ಯಕ್ಷರಾಗಿ ಸಹಾ ಸೇವೆ ಸಲ್ಲಿಸಿದ್ದಾರೆ.
ಸುಮಾರು ಮುನ್ನೂರಕ್ಕೂ ಮಿಗಿಲಾದ ಸದಸ್ಯರನ್ನು ಹೊಂದಿರುವ ಗುರುಸೇವಾ ಸಮಿತಿಯು ಇಲ್ಲಿನ ಅನಿವಾಸಿ ಬಿಲ್ಲವ ಸಮುದಾಯ ಹಾಗೂ ನಾಡಿನ ಬಿಲ್ಲವ ಸಮುದಾಯದ ಕಷ್ಟನಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ 2003 ರಿಂದ ಅಸ್ತಿತ್ವಕ್ಕೆ ಬಂದಿದ್ದು ಇದೀಗ ಯಶಸ್ವಿಯಾಗಿ ಮೂರು ವರುಷಗಳನ್ನು ಪೂರೈಸಿದೆ. ಇತ್ತೀಚೆಗೆ ನೂತನ ಆಡಳಿತ ಮಂಡಳಿಯನ್ನು ಚುನಾಯಿಸಲಾಗಿದ್ದು ಅದರ ಪ್ರಥಮ ಸ್ವಾಗತ ಕಾರ್ಯಕ್ರಮವು ಸ್ಥಳೀಯ ಪ್ಯಾಪಿಲಾನ್ ರೆಸ್ಟೋರೆಂಟ್ ಹೋಟೆಲ್ ಸಭಾಂಗನದಲ್ಲಿ ಜರುಗಲಿದ್ದು ಬಹರೇನಿನಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಬಾಲಕೃಷ್ಣ ಶೆಟ್ಟಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ವರದಿಯ ವಿವರಗಳು |
 |
ಕೃಪೆ : ಚಿತ್ರ-ವರದಿ ಕಮಲಾಕ್ಷ ಅಮೀನ್, ಬಹರೇನ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-18
|
|
|