ಬಹರೇನ್: ಬಂಟ್ಸ್ ಮಹಿಳಾ ದಿನ : ಉತ್ಸಾಹ ಉಲ್ಲಾಸ ಭರಿತ ಸಂತಸದ ದಿನ |
ಪ್ರಕಟಿಸಿದ ದಿನಾಂಕ : 2008-06-13
ಬಹರೇನ್ ಕನ್ನಡ ಸಂಘದ ವಿಶೇಷ ಮಹಿಳಾ ಕಾರ್ಯಕ್ರಮ
ಬಹರೇನ್, ಜೂನ್ 13: ಬಹರೇನ್ ಕನ್ನಡ ಸಂಘ ಇತ್ತೀಚೆಗೆ ತನ್ನ ಮಹಿಳಾ ಸದಸ್ಯರಿಗೆಂದೇ ವಿಶೇಷವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಹಿಳೆಯರು ಹಾಗೂ ಮಕ್ಕಳು ಈ ಸದಾವಕಾಶವನ್ನು ಸದುಪಯೋಗಿಸಿಕೊಂಡರು. ಮಹಿಳಾ ದಿನ ಎಂದೇ ಆಚರಿಸಲಾದ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಹಲವಾರು ಆಟೋಟ ಸ್ಪರ್ಧೆಗಳನ್ನು ಆಯೋಜಿಸಿದ್ದು ಭಾಗವಸಿದ್ದ ಸದಸ್ಯರೆಲ್ಲರೂ ಸಂಭ್ರಮಪಟ್ಟರು. ಬಣ್ಣ ತುಂಬುವಿಕೆ, ಚಿತ್ರ ಬಿಡಿಸುವಿಕೆ, ಅಂತಾಕ್ಷರಿ, ಏಕಪಾತ್ರಾಭಿನಯ, ಆಡ್ ಮ್ಯಾಡ್ ರೌಂಡ್ ಇತ್ಯಾದಿ ಆಟೋಟಗಳು ಹಿರಿಯರನ್ನು ಮಕ್ಕಳನ್ನಾಗಿಸುವಲ್ಲಿ ಸಫಲವಾದವು. ಈ ಆಟೋಟಗಳ ಹಿಂದಿನ ರೂವಾರಿ ಸುಜ್ಯೋತಿ ಹಾಗೂ ಸಂಗಡಿಗರಾದ ಪ್ರಮಿಳಾ, ನಿಶಾ, ವೈಶಾಲಿ, ಕವಿತಾ ಹಾಗೂ ವಿಜಯ ಉತ್ತಮವಾಗಿ ಆಯೋಜಿಸಿ ಎಲ್ಲರ ಮನ ಗೆದ್ದರು.
ವಿಜೇತರಿಗೆ ಹಲವಾರು ಬಹುಮಾನಗಳನ್ನು ಆಯೋಜಿಸಲಾಗಿದ್ದು ಚಿತ್ರ ಬಿಡಿಸುವಿಕೆಯಲ್ಲಿ ಅವಿನಾಶ್ ಹಾಗೂ ಅಭಿಶೇಕ್ ಬಹುಮಾನಗಳನ್ನು ಗೆದ್ದುಕೊಂಡರು. ಬಣ್ಣ ತುಂಬುವ ಸ್ಪರ್ಧೆಯಲ್ಲಿ ಅಭಯ್ ಹಾಗೂ ಪ್ರಾಚಿ, ಉತ್ತಮ ಉಡುಗೆ ಧರಿಸಿದ ಮಹಿಳೆಗೆ ಸಲ್ಲುವ ಬಹುಮಾನ ಪದ್ಮಾ ಜೆ ಶೆಟ್ಟಿಯವರ ಪಾಲಾದರೆ, ಅತ್ಯುತ್ತಮ ಪ್ರದರ್ಶನ ನೀಡಿದ ಬಹುಮಾನಕ್ಕೆ ಪ್ರತಿಮಾ ಎ. ಶೆಟ್ಟಿಯವರು ಪಾತ್ರರಾದರು. ಮೇಣದ ಬತ್ತಿ ಬೆಳಗುವಿಕೆಯ ಸ್ಪರ್ಧೆಯಲ್ಲಿ ಸಮೀಪಾ ಜೆ ಶೆಟ್ಟಿ ಹಾಗೂ ಸಂಖ್ಯೆಯನ್ನು ಊಹಿಸಿ ಸ್ಪರ್ಧೆಯಲ್ಲಿ ನೀಡಲಾಗುವ ಬಹುಮಾನ ವೀಣಾ ವಿ. ಶೆಟ್ಟಿಯವರು ತಮ್ಮದಾಗಿಸಿಕೊಂಡರು.
ಸಂಭ್ರಮ, ಉಲ್ಲಾಸದ ಈ ಕಾರ್ಯಕ್ರಮಕ್ಕೆ ಪದ್ಮಾ ಜೆ. ಶೆಟ್ಟ್ಯ್, ಆಶ ಎಸ್. ಶೆಟ್ಟಿ, ಹೇಮಲತಾ ಎಸ್. ಶೆಟ್ಟಿಯವರು ಮುಖ್ಯ ಪ್ರಾಯೋಜಕರಾಗಿದ್ದರು ಹಾಗೂ ಸ್ನೇಹಾ ಎ. ರೈ ಕಾರ್ಯಕ್ರಮದ ಉಪಪ್ರಾಯೋಜಕರಾಗಿದ್ದರು.
ಒಂದೇ ಬಳಗದ ಮಹಿಳೆಯರು ಒಂದೆಡೆ ಸೇರುವುದು ದುಸ್ತರವಾದ ಇಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮವು ನಿಗದಿತವಾಗಿ ನಡೆಯುತ್ತಿರಬೇಕೆಂಬ ಹಂಬಲದಿಂದ ಒಬ್ಬರನ್ನೊಬ್ಬರು ಬೀಳ್ಕೊಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯ ಕಂಡಿತು.
ವರದಿಯ ವಿವರಗಳು |
 |
ಕೃಪೆ : ದೈಜಿ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-06-13
|
|
|