ದೋಹಾ: ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವಾಶಿಬಿರ : ಅಪಾರ ಜನಸ್ತೋಮ |
ಪ್ರಕಟಿಸಿದ ದಿನಾಂಕ : 2008-04-26
ಇಂಡಿಯನ್ ಅಸೋಸಿಯೇಶನ್ ಕತರ್ ಆಯೋಜಿಸಿದ್ದ ಆರೋಗ್ಯ ಶಿಬಿರ : ನಾಲ್ಕು ಸಾವಿರಕ್ಕೂ ಹೆಚ್ಚು ಜನರ ಆಗಮನ
ದೋಹಾ, ಏಪ್ರಿಲ್ 26: ಜಮಾತೆ ಇಸ್ಲಾಮಿ ಹಿಂದ್ (ಕೇರಳ)ದ ಅಂಗವಾಗಿರುವ ಇಂಡಿಯನ್ ಅಸೋಸಿಯೇಷನ್ ಕತರ್ (ಐಐಎಕ್ಯೂ) ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕತರ್ ಜಂಟಿಯಾಗಿ ಆಯೋಜಿಸಿದ್ದ 7ನೇ ವಾರ್ಷಿಕ ಉಚಿತ ಆರೋಗ್ಯ ತಪಾಸಣಾ ಶಿಬಿರ ನಿನ್ನೆ 25ನೇ ಏಪ್ರಿಲ್ ಶುಕ್ರವಾರದಂದು ಜಿದಾಫ್ ಫ್ಲೈಓವರ್ ಬಳಿ ಇರುವ ಬಾಯ್ಸ್ ಪ್ರಿಪರೇಟರಿ ಶಾಲೆಯ ಆವರಣದಲ್ಲಿ ಏರ್ಪಡು ಮಾಡಲಾಗಿತ್ತು. ಈ ಶಿಬಿರವು ನ್ಯಾಶನಲ್ ಹೆಲ್ತ್ ಆಥಾರಿಟಿ (ಎನ್.ಹೆಚ್. ಎ.) ಹಾಗೂ ಹಮದ್ ಮೆಡಿಕಲ್ ಕಾರ್ಪೋರೇಶನ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜರುಗಿಸಲಾಗಿತ್ತು. ಕ್ಯೂಟೆಲ್ ಈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕಾ ಸಂಸ್ಥೆಯಾಗಿದೆ.
ಕತರ್ ನಲ್ಲಿಯೇ ಉನ್ನತ ಕಾರ್ಯಕ್ರಮವಾದ ಈ ಶಿಬಿರ ಬೆಳೆಗ್ಗೆ 8:30ಕ್ಕೆ ನಿಗದಿತ ಸಮಯಕ್ಕೆ ಸರಿಯಾಗಿ ಡಾ. ಮೈಕಲ್ ಕೆವಿನ್ ವಾಲ್ಷ್ (ಮುಖ್ಯ ಕಾರ್ಯ ನಿರ್ವಾಹಕ ನಿರ್ದೇಶಕರು, ನ್ಯಾಶನಲ್ ಹೆಲ್ತ್ ಆಥಾರಿಟಿ), ಶ್ರೀ ಆದೆಲ್ ಮುತಾವಾ( ಅಧ್ಯಕ್ಷರು, ಕ್ಯೂಟೆಲ್), ಡಾ. ಹನಾನ್ ಅಲ್ ಕುವಾರಿ (ನಿರ್ವಾಹಕ ನಿರ್ದೇಶಕರು, ಹೆಚ್.ಎಮ್.ಸಿ) ರವರಿಂದ ಉದ್ಘಾಟನೆ ಕಂಡಿತು. ಎಂದಿನಂತೆ ಪವಿತ್ರ ಕುರಾನ್ ಪಠಣದೊಂದಿಗೆ ಪ್ರಾರಂಭವಾದ ಸರಳ ಕಾರ್ಯಕ್ರಮ ಇಂಡಿಯನ್ ಇಸ್ಲಾಮಿಕ್ ಅಸೋಸಿಯೇಷನ್ ಅಧ್ಯಕ್ಷರಾದ ವಿ.ಟಿ. ಅಬ್ದುಲ್ಲಾ ಕೋಯಾರವರ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕತರ್ ವಿಭಾಗದ ಅಧ್ಯಕ್ಷರಾದ ಡಾ. ಸಮೀರ್ ಕಲಂದನ್ ಶಿಬಿರದ ಮುಖ್ಯ ಉದ್ದೇಶ ಹಾಗೂ ವಿಧಾನಗಳನ್ನು ವಿವರಿಸಿದರು.
ಆ ಬಳಿಕ ಮಾತನಾಡಿದ ಕತರ್ ನ ಭಾರತೀಯ ರಾಯಭಾರಿ ಡಾ. ಜಾರ್ಜ್ ಜೋಸೆಫ್ ಅವರು ಇಂಡಿಯನ್ ಇಸ್ಲಾಮಿಕ್ ಅಸೋಸಿಯೇಶನ್ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಂಸ್ಥೆಗಳ ಪದಾಧಿಕಾರಿಗಳ ಸೇವಾಮನೋಭಾವವನ್ನು ಕೊಂಡಾಡಿದರು. ಹೆಚ್ಚಿನ ವೈದ್ಯಕೀಯ ವೆಚ್ಚವನ್ನು ಭರಿಸಲಾಗದವರಿಗೆ ವರದಾನವಾದ ಈ ಶಿಬಿರಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದರು.
ಜನರಿಗೆ ಆರೋಗ್ಯವಂತ ಜೀವನ ನಡೆಸುವ ಮಾಹಿತಿಗಳನ್ನು ನೀಡುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಈ ವರ್ಷದ ಶಿಬಿರ ಮಧುಮೇಹ ರೋಗ ಹಾಗೂ ಹೈಪರ್ ಟೆನ್ಷನ್ ರೋಗಗಳಿಗೆ ಚಿಕಿತ್ಸೆ ನೀಡುವತ್ತ ಹೆಚ್ಚಿನ ಕಾಳಜಿ ವಹಿಸಿತ್ತು. ಮಧುಮೇಹ ಹಾಗೂ ಹೆಚ್ಚಿನ ರಕ್ತದೊತ್ತಡದ ತೊಂದರೆಯಿರುವ ಕಾರ್ಮಿಕರ ಮೂತ್ರಪರೀಕ್ಷೆ, ಪ್ರೊಟೀನ್ ಮತ್ತು ಸೆರೆಟೈನ್ ಅಂಶಗಳ ತಪಾಸಣೆ ಶಿಬಿರದಲ್ಲಿದ್ದ ಪ್ರಯೋಗಾಲಯದಲ್ಲಿ ನಡೆಸಲಾಯಿತು. ಮಹಿತಿ ಹಾಗೂ ಹಣಕಾಸಿನ ತೊಂದರೆಯಿಂದ ಸೂಕ್ತ ವೈದ್ಯಕೀಯ ಸೌಲಭ್ಯ ಪಡೆಯಲಸಾಧ್ಯವಾದ ಕಾರ್ಮಿಕರಿಗೆ ಸೂಕ್ತ ಸಲಹೆಗಳನ್ನು ನೀಡಲಾಯಿತು. ಹೆಲ್ತ್ ಕಾರ್ಡ್ ಇಲ್ಲದಿರುವಿಕೆ, ಕಾನೂನಿನ ತೊಡಕು ಇತ್ಯಾದಿಗಳ ಮಾಹಿತಿಗಳನ್ನು ನೀಡಲಾಯಿತು. ಈ ಮಾಹಿತಿಗಳನ್ನು ಮಾಧ್ಯಮವಿಭಾಗ ಸಮರ್ಪಕವಾಗಿ ಇತರರಿಗೂ ತಲುಪಿಸುವ ಜವಾಬ್ದಾರಿಯನ್ನು ಎತ್ತಿ ಹಿಡಿಯಲಾಯಿತು.
ಸುಮಾರು ಎಂಟುನೂರಕ್ಕೂ ಹೆಚ್ಚು ಸ್ವಯಂಸೇವಕರು ತಮ್ಮ ಇಡಿಯದಿನವನ್ನು ಈ ಶಿಬಿರಕ್ಕಾಗಿ ಮುಡಿಪಾಗಿಸಿದ್ದು ಶ್ಲಾಘನೀಯವಾಗಿತ್ತು. ವೈದ್ಯಕೀಯ ರಂಗದ ಸುಮಾರು ಇನ್ನೂರಕ್ಕೂ ಹೆಚ್ಚು ವೈದ್ಯರು, ದಾದಿಯರು ಹಾಗೂ ಅರೆವೈದ್ಯಕೀಯ ಸೇವಾ ವ್ಯಕ್ತಿಗಳೂ ಇಡಿಯ ದಿನ ತಮ್ಮ ಸೇವೆಯನ್ನು ಸಲ್ಲಿಸಿದರು.
ಶಿಬಿರದ ಇನ್ನೊಂದು ಆಕರ್ಷಣೆಯಾಗಿ ಡೆಲ್ಲಿ ಪಬ್ಲಿಕ್ ಸ್ಕೂಲ್, ಪಾಕಿಸ್ತಾನ ಸ್ಕೂಲ್, ಬಿರ್ಲಾ ಪಬ್ಲಿಕ್ ಸ್ಕೂಲ್, ಶಾಂತಿನಿಕೇತನ ಇಂಡಿಯನ್ ಸ್ಕೂಲ್, ಎಮ್.ಇ.ಎಸ್. , ಐಡಿಯಲ್ ಇಂಡಿಯನ್ ಸ್ಕೂಲ್ ಹಾಗೂ ವೇಲ್ ಕಾರ್ನೆಲ್ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳು ಭಾಗವಹಿಸಿದ್ದ ವೈದ್ಯಕೀಯ ಪ್ರದರ್ಶನ ಗಮನ ಸೆಳೆಯಿತು.
ಈ ಶಿಬಿರದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅರ್ಹ ಕಾರ್ಮಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಸುಮಾರು ನೂರು ವೈದ್ಯರು ಪಾಳಿಯಲ್ಲಿ ಸೇವೆ ಸಲ್ಲಿಸಿದರು. ಬಾರತೀಯರು ಮಾತ್ರವಲ್ಲದೇ ನೇಪಾಳ, ಬಾಂಗ್ಲಾದೇಶ, ಫಿಲಿಪ್ಪೀನ್ಸಿ, ಪಾಕಿಸ್ತಾನ ಹಾಗೂ ಕಲ ಅರಬ್ ಮೂಲದ ಕಾರ್ಮಿಕರೂ ಶಿಬಿರದ ಪ್ರಂiಜನ ಪಡೆದರು.
ಐಸಿಸಿ ಪೂರ್ವ ಅಧ್ಯಕ್ಷರಾದ ಶ್ರೀ ಎಮ್.ಐ. ಫರೀದ್, ತುಳು ಕೂಟದ ಅಧ್ಯಕ್ಷರಾದ ದಿವಾಕರ್ ಪೂಜಾರಿ, ಲೀಗಲ್ ಅಡ್ವೈಜರ್ ನಜೀರ್ ಕೆ ಸಹಿತ ಹಲವು ಗಣ್ಯರು ಶಿಬಿರಕ್ಕೆ ಭೇಟಿ ನೀಡಿದರು. ಶಿಬಿರದಲ್ಲಿ ಉಚಿತ ಊಟ, ಪಾನೀಯ ಹಾಗೂ ನೀರಿನ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅರ್ಹ ರೋಗಿಗಳಿಗೆ ಉಚಿತ ಔಷಧಿಗಳನ್ನೂ ವಿತರಿಸಲಾಯಿತು.
ಇಡಿಯ ದಿನ ನಡೆದ ಕಾರ್ಯಕ್ರಮದ ಅಂತಿಮ ಹಂತವಾಗಿ ಐಐಎ ಅಧ್ಯಕ್ಷರಾದ ಜುಬೈರ್ ಅಬ್ದುಲ್ಲಾ ಅವರು ವಂದನಾರ್ಪಣೆ ಅರ್ಪಿಸುವುದರೊಂದಿಗೆ ಶಿಬಿರ ಸಾರ್ಥಕ ಮುಕ್ತಾಯ ಕಂಡಿತು.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-04-26
|
|
|