ಇಂಗ್ಲೆಂಡಿನಲ್ಲೊಂದು ಯುಗಾದಿ ಆಚರಣೆ |
ಪ್ರಕಟಿಸಿದ ದಿನಾಂಕ : 2008-04-23
ಏ. ೧೯ ರಂದು ರೆಡ್ಡಿಂಗ್ ಯು.ಕೆ ನಗರದ ಲೇಟನ್ ಶಾಲೆಯ ಸಭಾಂಗಣದಲ್ಲಿ ಯುಗಾದಿ ಹಬ್ಬದ ಆಚರಣೆ ನಡೆಯಿತು. ಅಂದು ಅದ್ಭುತ ಮನೋರಂಜನಾ ಕಾರ್ಯಕ್ರಮಗಳು ಮಧ್ಯಾಹ್ನ ೧೨ರಿಂದ ಸಂಜೆ ೮.೩೦ರವರೆಗೆ ಜರುಗಿದವು.
ಈ ರೆಡ್ಡಿಂಗ್ ನಗರಕ್ಕೆ ಹೊಸದಾಗಿ ಬಂದ ಜನರಿಗೆ ಕನ್ನಡಿಗರನ್ನು ಪರಿಚಯ ಮಾಡಿಕೊಳ್ಳುವ ಸುವರ್ಣ ಅವಕಾಶ ದೊರಕಿತು. ಅಲ್ಲದೇ ಅಂದು ಕನ್ನಡಿಗರಿಗೆ ಸಂಭ್ರಮ, ಸಡಗರದ ವಾತಾವರಣ ನಿರ್ಮಾಣವಾಗಿತ್ತು.
ಈ ಕಾರ್ಯಕ್ರಮ ನೋಡಲು, ಅದರಲ್ಲಿ ಭಾಗವಹಿಸಲು ಇಂಗ್ಲೆಂಡ್‌ನಲ್ಲಿನ ವಿವಿಧ ಪಟ್ಟಣಗಳಲ್ಲಿರುವ ಒಟ್ಟು 350 ಜನ ಕನ್ನಡಿಗರು ಇಲ್ಲಿ ನೆರದಿದ್ದರು. ಕಾರ್ಯಕ್ರಮದ ಸಂಪೂರ್ಣ ಯೋಜನೆ ಕನ್ನಡಿಗರು ಯು.ಕೆ ಸಂಘದವರದ್ದಾಗಿತ್ತು.
ಕಾರ್ಯಕ್ರಮವು ಗಣೇಶನ ಹಾಡಿನ ನೃತ್ಯ ಹಾಗೂ ಯುಗಾದಿ ಪೂಜೆಯೊಂದಿಗೆ ಆರಂಭವಾಯಿತು. ನಂತರ ಎಲ್ಲರಿಗೂ ಮಂಗಳಾರತಿ ಕೊಟ್ಟು, ಬೇವು -ಬೆಲ್ಲ ಹಂಚಿದರು. ಚಿಣ್ಣರು ಕಾರ್ಯಕ್ರಮ ನಡೆಸಿಕೊಟ್ಟಿರುವುದು ಇಂದಿನ ವಿಶೇಷವಾಗಿತ್ತು. ಆಂಗ್ಲ ದೇಶದಲ್ಲಿ ಬೆಳೆದ ಇವರು ಕನ್ನಡ ಭಾಷೆಯನ್ನು ಸ್ವಚ್ಛ, ಸುಲಲಿತವಾಗಿ ಪಟಪಟನೆ ಮಾತನಾಡಿದರು.
ಕ್ರಮವಾಗಿ ನೃತ್ಯ, ಹಾಡು, ನಾಟಕ ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರೂ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅದರಂತೆ ಪ್ರೇಕ್ಷಕರು ಸಹ ಇವರಿಗೆ ಸಾಥ್ ನೀಡಿದರು. ಇದಾದ ನಂತರ ಆದರ್ಶ ದಂಪತಿಗಳು, ಅಂತ್ಯಾಕ್ಷರಿ ಕಾರ್ಯಕ್ರಮಗಳು ನಡೆದವು. ಇವುಗಳಲ್ಲಿ ಭಾಗವಹಿಸಲು ಪ್ರೇಕ್ಷಕರು ಮುನ್ನುಗ್ಗಿ ಬಂದರು. ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡು ಸಂತೋಷಪಟ್ಟರು.
ಸರ್ವರಿಗೂ ಮಧ್ಯಾಹ್ನ ರುಚಿಕರ ಊಟ, ಸಾಯಂಕಾಲ ತಿಂಡಿ ಕಾಫಿಯನ್ನು ವಿತರಿಸಲಾಯಿತು. ರೆಡ್ಡಿಂಗ್ ಸ್ಟೇಷನ್‌ನಿಂದ ಲೇಟನ್ ಶಾಲೆಯ ಸಭಾಂಗಣಕ್ಕೆ ಭಾಗವಹಿಸುವ ಪ್ರೇಕ್ಷಕರಿಗೆ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಒದಗಿಸಲಾಗಿತ್ತು. ಒಟ್ಟಿನಲ್ಲಿ ಇಂಗ್ಲೆಂಡಿನಲ್ಲಿನ ಯುಗಾದಿ ಆಚರಣೆ ಆಡಂಬರದಲ್ಲಿ ನಡೆದು ಪ್ರತಿಯೊಬ್ಬರಿಗೂ ಮುದ ನೀಡಿತು.
ವರದಿಯ ವಿವರಗಳು |
 |
ಕೃಪೆ : ವರದಿ: ಸುಷ್ಮಾ. ಎಂ.ಎನ್| ಕನ್ನಡ ಪ್ರಭ ವರದಿಗಾರರು : ಗ.ಕ.ವಿಶೇಷ ವರದಿಗಾರರು
ಪ್ರಕಟಿಸಿದ ದಿನಾಂಕ : 2008-04-23
|
|
|