ಬಜೆಟ್ ಮಂಡಿಸುವುದು ನಾನೇ: ಡಿವಿ; ಗೊಂದಲಕ್ಕೆ ತೆರೆ ಎಳೆದ ಸಿಎಂರಿಂದ ವಿರೋಧಿ ಬಣಕ್ಕೆ ತಿರುಗೇಟು | ‘ಸಂಘ’ಮದಲ್ಲಿ ಸೇರದ ಬಿಎಸ್‌ವೈ: ಪಟ್ಟ ನೀಡದ ಸಿಟ್ಟೇ ಕಾರಣ |
ಪ್ರಕಟಿಸಿದ ದಿನಾಂಕ : 2012-01-28
ಹುಬ್ಬಳ್ಳಿ,ಜ.27:ರಾಜ್ಯ ಬಜೆಟ್ ಮಂಡಿಸುವ ಕುರಿತು ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆದಿರುವ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ,ಮಾ.9ರಂದು ಮುಂಗಡ ಪತ್ರವನ್ನು ತಾನೇ ಮಂಡಿಸುತ್ತೇನೆ, ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದ್ದಾರೆ.
ನಗರದಲ್ಲಿ ನಡೆದ ‘ಹಿಂದೂ ಶಕ್ತಿ ಸಂಗಮ’ದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಜೆಟ್‌ನ್ನು ಬೇರೆ ಯಾರೂ ಮಂಡಿ ಸುವುದಿಲ್ಲ. ಅದನ್ನು ತಾನೇ ಮಂಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಬಜೆಟ್ ಮಂಡನೆಯ ಕುರಿತು ಹಲವು ರೀತಿಯ ಊಹಾಪೋಹ ಗಳೆದ್ದಿದ್ದು,ಇಂತಹ ಸಂಶಯ ಬೇಡ. ಬಜೆಟ್ ಮಂಡನೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇನೆ ಎಂದು ಡಿವಿ ಇದೇ ವೇಳೆ ತಿಳಿಸಿದರು.
ಯಾವೆಲ್ಲ ಇಲಾಖೆಗಳಿಗೆ ಒತ್ತು ನೀಡಬೇಕು ಎಂಬ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾ.9ರಂದು ಉತ್ತಮ ಬಜೆಟನ್ನು ಮಂಡಿಸುತ್ತೇನೆ ಎಂದ ಸದಾನಂದ ಗೌಡ,ಈ ತಿಂಗಳ 30ರಂದು ಆರಂಭವಾಗಲಿರುವ ಅಧಿವೇಶನ ದಲ್ಲಿಯೂ ಬಜೆಟ್‌ಗೆ ಸಂಬಂಧಿಸಿ ಚರ್ಚೆ ನಡೆಸಲಾಗುವುದು.ಎಲ್ಲ ರೀತಿ ಯಿಂದಲೂ ಬಜೆಟ್ ಕುರಿತು ಮಾಹಿತಿ ಕಲೆ ಹಾಕಿ ಮಂಡಿಸುತ್ತೇನೆ ಎಂದರು.
ನಗರದಲ್ಲಿಂದಿನಿಂದ ನಡೆಯಲಿರುವ ಹಿಂದೂ ಶಕ್ತಿ ಸಂಗಮದಲ್ಲಿ ಒಬ್ಬ ಆರೆಸ್ಸೆಸ್‌ನ ಸ್ವಯಂ ಸೇವಕನಾಗಿ ಭಾಗವಹಿಸುತ್ತಿದ್ದೇನೆ.ಇಲ್ಲಿ ಸರಕಾರ,ಬಿಜೆಪಿ ನಾಯಕರ ಕುರಿತು ಮಾತನಾಡುವುದಿಲ್ಲ.ಎಲ್ಲವೂ ರಾಷ್ಟ್ರ ಜಾಗೃತಿ,ಯವಜನರನ್ನು ದೇಶ ಕಟ್ಟಲು ಬಳಸುವ ಕುರಿತು ಚರ್ಚಿಸಲಾಗುವುದು ಎಂದರು.
ಗಣವೇಷದಲ್ಲಿ ಭಾಗವಹಿಸಿದ ಸಿಎಂ
ತಾನು ಆರೆಸ್ಸೆಸ್‌ನ ಕಟ್ಟುನಿಟ್ಟಿನ ಸಿಪಾಯಿ ಎಂದು ಹೇಳಿದ ಮುಖ್ಯಮಂತ್ರಿ ಸದಾನಂದ ಗೌಡ, ತಮ್ಮ ಶ್ವೇತ ವಸ್ತ್ರ ಕಳಚಿ ಗಣವೇಶ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ,ಬಳಿಕ ತಮ್ಮ ಶ್ವೇತ ವಸ್ತ್ರ ಕಳಚಿ,ಖಾಕಿ ಚಡ್ಡಿ,ಬಿಳಿ ಅಂಗಿ,ತಲೆಗೆ ಟೋಪಿ ಹಾಕಿ ಹಿಂದೂ ಶಕ್ತಿ ಸಂಗಮದಲ್ಲಿ ಭಾಗವಹಿಸಿ ತಮ್ಮ ನಿಷ್ಠೆಯನ್ನು ಪ್ರದರ್ಶಿಸಿದರು.
ಹಿಂದೂ ಶಕ್ತಿ ಸಂಗಮವನ್ನು ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿದರು.ಈ ವೇಳೆ ಆರೆಸ್ಸೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಯ್ಯೆಜಿ ಜೋಷಿ ಸೇರಿದಂತೆ ಹಲವರು ಹಾಜರಿದ್ದರು.
‘ಸಂಘ’ಮದಲ್ಲಿ ಸೇರದ ಬಿಎಸ್‌ವೈ:ಪಟ್ಟ ನೀಡದ ಸಿಟ್ಟೇ ಕಾರಣ
ಹುಬ್ಬಳ್ಳಿ,ಜ.27:ಹುಬ್ಬಳ್ಳಿಯಲ್ಲಿಂದು ನಡೆದ ‘ಹಿಂದೂ ಶಕ್ತಿ ಸಂಗಮ’ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೈರಾಗುವ ಮೂಲಕ ಆರೆಸ್ಸೆಸ್‌ನ ನಾಯಕರ ವಿರುದ್ಧ ತನಗಿರುವ ಅಸಮಾಧಾನವನ್ನು ಬಹಿರಂಗ ಪಡಿಸಿದ್ದಾರೆ.
ಇತ್ತೀಚೆಗೆ ಬಿಜೆಪಿಯೊಳಗೆ ಉಂಟಾಗಿದ್ದ ನಾಯಕತ್ವದ ಬಿಕ್ಕಟ್ಟಿನ ವೇಳೆ ಸಂಧಾನ ನಡೆಸಿದ್ದ ಆರೆಸ್ಸೆಸ್ ನಾಯಕರು,ಯಡಿಯೂರಪ್ಪನವರ ವಿರುದ್ಧ ಚಾಟಿ ಬೀಸಿದ್ದು,ಅವರಿಗೆ ಸುಮ್ಮನಿರುವಂತೆ ಸೂಚಿಸಿದ್ದರು.ಇದರಿಂದ ಯಡಿಯೂರಪ್ಪನವರಿಗೆ ಮುಜುಗರದ ಜೊತೆಗೆ ಆಕ್ರೋಶ ಕೂಡಾ ಉಂಟಾಗಿತ್ತು. ಇಂದು ಹುಬ್ಬಳ್ಳಿಯಲ್ಲಿ ನಡೆದ ಹಿಂದೂ ಶಕ್ತಿ ಸಂಗಮಕ್ಕೆ ಅವರು ಗೈರಾಗಿರುವುದಕ್ಕೆ ಆರೆಸ್ಸೆಸ್ ನಾಯಕರ ವಿರುದ್ಧ ವಿರುವ ಆಕ್ರೋಶವೇ ಕಾರಣ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಸದಾನಂದ ಗೌಡ,ಸಚಿವ ಜಗದೀಶ್ ಶೆಟ್ಟರ್,ಸಂಸದ ಪ್ರಹ್ಲಾದ್ ಜೋಷಿ ಗಣವೇಶದಲ್ಲಿ ಭಾಗವಹಿಸಿದ್ದರೆ,ಸಚಿವ ಸುರೇಶ್ ಕುಮಾರ್ ಜುಬ್ಬಾ ಧರಿಸಿಕೊಂಡು ಭಾಗವಹಿಸಿದ್ದರು.ಯಡಿಯೂರಪ್ಪರ ಬಣದಲ್ಲಿ ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್,ಚಂದ್ರಕಾಂತ ಬೆಲ್ಲದ್ ಕೂಡಾ ಭಾಗವಹಿಸಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಕರ್ನಾಟಕ ವರದಿಗಾರರು
ಪ್ರಕಟಿಸಿದ ದಿನಾಂಕ : 2012-01-28
|
|
| Ronald, Udupi | 2012-01-29 | | ಕಾಲಕ್ಕೆ ತಕ್ಕನ್ಥೆ ಕೋಲ!! |
|