ಸೌದಿ ಅರೇಬಿಯಾ: ಬಾಂಗ್ಲಾದೇಶದಿಂದ ಕಾರ್ಮಿಕರ ನೇಮಕಕ್ಕೆ ಕೊನೆ : ಕೃಷಿ ಮತ್ತು ಗೃಹ ವಿಭಾಗಳಿಗೆ ಅನ್ವಯ |
ಪ್ರಕಟಿಸಿದ ದಿನಾಂಕ : 2008-03-25
ಗರಿಷ್ಟ ಮಿತಿ ತಲುಪಿರುವುದು ಕಾರಣ : ಕಾರ್ಮಿಕ ಸಚಿವಾಲಯ ಸ್ಪಷ್ಟನೆ
ರಿಯಾದ್, ಮಾರ್ಚ್ 25 : ರಾಷ್ಟ್ರದಾದ್ಯಂತ ಬಾಂಗ್ಲಾದೇಶಿ ಕಾರ್ಮಿಕರ ನೇಮಕಕ್ಕೆ ಕೊನೆಯಾಗಿದೆ ಎಂಬ ದಟ್ಟ ವದಂತಿಯನ್ನು ಸೌದಿ ಅರೇಬಿಯಾ ಸರ್ಕಾರದ ಕಾರ್ಮಿಕ ಸಚಿವರಾದ ಗಾಝಿ ಅಲ್ ಗೊಸಾಯ್ಬಿಯವರು ತಳ್ಳಿಹಾಕಿದ್ದಾರೆ. ಆದರೆ ಕೃಷಿ ಮತ್ತು ಗೃಹ ಖಾತೆಗಳಲ್ಲಿ ಬಾಂಗ್ಲಾದೇಶಿಗಳಿಗೆ ನೀಡಲಾಗಿದ್ದ ಗರಿಷ್ಟ ಮಿತಿ ತಲುಪಿರುವ ಕಾರಣ ಇನ್ನು ಮೇಲೆ ಈ ವಿಭಾಗಗಳಲ್ಲಿ ಹೊಸ ವೀಸಾಗಳನ್ನು ನೀಡಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ವೈದ್ಯಕೀಯ ಹಾಗೂ ತಾಂತ್ರಿಕ ರಂಗಗಳಲ್ಲಿ ಮಾತ್ರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಷ್ಟೇ ಅಲ್ಲದೇ ನಿರ್ವಹಣೆ ಮತ್ತು ಸ್ವಚ್ಛತಾ ರಂಗಗಳಲ್ಲಿ 20 % ಕ್ಕೆ ಮೀರದಂತೆ ಹೊಸ ವೀಸಾಗಳನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಆದರೆ ಈ ಹಿಂದೆ ಸೌದಿ ಅರೇಬಿಯಾದಲ್ಲಿ ಬಾಂಗ್ಲಾದೇಶಿ ಕಾರ್ಮಿಕರ ಆಗಮನದ ನಂತರ ವಿಪರೀತ ಹೆಚ್ಚಳ ಕಂಡಿದ್ದ ಕಳ್ಳತನ, ಕಳ್ಳನೋಟು ಮುದ್ರಣ ಹಾಗೂ ಅನೈತಿಕ ವ್ಯವಹಾರಗಳ ಹೆನ್ನೆಲೆಯಲ್ಲಿ ಎಲ್ಲಾ ಬಾಂಗ್ಲಾದೇಶಿ ಕಾರ್ಮಿಕರಿಗೆ ವೀಸಾ ನೀಡುವುದನ್ನು ನಿರಾಕರಿಸಲಾಗುವುದೆಂದು ದಟ್ಟ ವದಂತಿ ಹಬ್ಬಿತ್ತು.
ಆದರೆ ಅಲ್ಪಕಾಲದ ತಾಂತ್ರಿಕ ತೊಂದರೆಗಳಿಂದ ವೀಸಾ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆಯಷ್ಟೇ, ಚಿಂತೆಗೆ ಕಾರಣವಿಲ್ಲ ಎಂದು ಬಾಂಗ್ಲಾದೇಶದ ರಾಯಭಾರಿಗಳು ತಿಳಿಸಿದ್ದಾರೆ.
ಈ ಮೊದಲು ಬಾಂಗ್ಲಾದೇಶ ಸರ್ಕಾರ ತನ್ನ ಕಾರ್ಮಿಕರಿಗೆ ಸೌದಿ ಅರೇಬಿಯಾದಲ್ಲಿ ಕನಿಷ್ಟ ವೇತನವಾದ 550 ರಿಯಾಲ್ ನಿಗದಿಪಡಿಸಿತ್ತು.
ವರದಿಯ ವಿವರಗಳು |
 |
ಕೃಪೆ : ಅರೇಬಿಯನ್ ಬಿಸಿನೆಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-03-25
|
|
|