ದೋಹಾ: ಸಾಂಸ್ಕೃತಿಕ ಕಾರ್ಯಕ್ರಮವೊಂದನ್ನು ವಿಭಿನ್ನವಾಗಿ ಪ್ರಸ್ತುತಪಡಿಸಿದ ’ನಮ್ಮ ಧನಿ’ - ರವಿ ಶೆಟ್ಟಿ |
ಪ್ರಕಟಿಸಿದ ದಿನಾಂಕ : 2008-02-23
ಮಾಲೀಕರೇ ತಮ್ಮ ಉದ್ಯೋಗಿಗಳ ಮನರಂಜನೆಗಾಗಿ ಪ್ರಾಯೋಜಿಸಿದ ವಿಶೇಷ ಕಾರ್ಯಕ್ರಮ : ಪುಟಿದೆದ್ದ ಉತ್ಸಾಹ
ದೋಹಾ, ಫೆಬ್ರವರಿ 22 : ನಾವೆಲ್ಲರೂ ಹಲವಾರು ಸಾಂಸ್ಕೃತಿಕ, ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ನೋಡಿದ್ದೇವೆ, ಆನಂದಿಸಿದ್ದೇವೆ. ಆದರೆ ಮಾಲೀಕರೇ ಖುದ್ದಾಗಿ ಮುಂದೆನಿಂತು ತಮ್ಮ ಉದ್ಯೋಗಿಗಳೊಂದಿಗೆ ಬೆರೆತು ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿರುವುದನ್ನು ನೋಡಿರುವುದು ಅಪರೂಪ. ಇಂತಹ ಅಪರೂಪದ ಶ್ಲಾಘನೆಗೆ ಪಾತ್ರರಾದವರು -ನಮ್ಮ ಧನಿ-ಎಂದೇ ಪ್ರಖ್ಯಾತರಾದ ಶ್ರೀ ಎಂ. ರವಿ ಶೆಟ್ಟಿಯವರು.
ಮಂಗಳೂರಿನವರಾದ ರವಿಶೆಟ್ಟಿಯವರು ಅಡ್ವಾನ್ಸ್ಡ್ ಟೆಕ್ನಿಕಲ್ ಸರ್ವಿಸಸ್ ಸಂಸ್ಥೆಯ ಮಾಲಿಕರಾಗಿದ್ದು ಈ ಸಂಸ್ಥೆ ದೋಹಾದ ಪ್ರಮುಖ ಗುತ್ತಿಗೆ ಮತ್ತು ಮಾರಾಟ ಸಂಸ್ಥೆಯಾಗಿದೆ.
ಶ್ರೀ ರವಿ ಶೆಟ್ಟಿಯವರು ತಮ್ಮ ಆತ್ಮೀಯರ ಹಾಗೂ ಉದ್ಯೋಗಿಗಳ ವಲಯದಲ್ಲಿ -ನಮ್ಮ ಧನಿ- ಎಂದು ಪ್ರಖ್ಯಾತರಾಗಿರುವುದು ಮಾತ್ರವಲ್ಲ ದೋಹಾ ತುಳು ಕೂಟದ ಉಪಾಧ್ಯಕ್ಷರೂ ಆಗಿದ್ದಾರೆ. ಸದಾ ಚಟುವಟಿಕೆಯಿಂದ ಕೂಡಿರುವ ಇವರಿಗೆ ಸಮಾಜಸೇವೆಯೊಂದು ಹವ್ಯಾಸವಾಗಿದ್ದು ಅನಿವಾಸಿ ಭಾರತೀಯರ ವಲಯದಲ್ಲಿ ಬಹುಪ್ರಖ್ಯಾತರಾಗಿದ್ದಾರೆ. ಮಂಗಳೂರಿನ ದೋನಿಯೆಂಜಗುತ್ತು ಕುಟುಂಬಕ್ಕೆ ಸೇರಿರುವ ರವಿ ಶೆಟ್ಟಿಯವರು ಬಂಟ್ವಾಳದ ಮೂಡಂಬೈಲ್ ಎಂಬ ಗ್ರಾಮದಲ್ಲಿ ಜನಿಸಿದ ರವಿಶೆಟ್ಟಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಬಿ.ಇ ಹಾಗೂ ಎಂಬಿಎ ಪದವಿಗಳನ್ನು ಪಡೆದು ಕತರ್ ನ ಮೀಕಾನ್ ಕಾಂಟಾಕ್ಟಿಂಗ್ ಕಂಪನಿಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸಿ ೨೦೦೬ರಲ್ಲಿ ತಮ್ಮ ಸ್ವಂತದ ಅಡ್ವಾನ್ಸ್ಡ್ ಟೆಕ್ನಿಕಲ್ ಸರ್ವಿಸಸ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.
ನಿನ್ನೆ ದೋಹಾದ ಅಶೋಕಾ ಹಾಲ್ (ಐಸಿಸಿ ಪ್ರಾಂಗಣ) ದಲ್ಲಿ ತಮ್ಮ ಉದ್ಯೋಗಿಗಳಿಗೆಂದೇ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರಲ್ಲಿ ಅಡಕಗೊಂಡಿದ್ದ ಪ್ರತಿಭೆಗಳನ್ನು ಹೊರತೆಗೆಯುವ ಒಂದು ಪ್ರಯತ್ನವಾಗಿತ್ತು. ಕಾರ್ಯಕ್ರಮ ಶ್ರೀ ಚಂದ್ರಶೇಖರ್ ಶೆಟ್ಟಿಯವರು ಜ್ಯೋತಿ ಬೆಳಗಿಸುವುದರೊಂದಿಗೆ ಪ್ರಾರಂಭ ಕಂಡಿತು. ಚೇತನ ಎಸ್. ಅಡಪ್ಪ, ಗಣೇಶ್ ಶಾಮ್ ಮತ್ತು ಬರ್ವಲಿ ವಿಶ್ವಾಸ್ ತ್ರಯರು ಸ್ವಾಗತಗೀತೆ ಹಾಡಿದರು.
ಸಭಾಂಗಣ ಕಿಕ್ಕಿರಿದು ತುಂಬಿದ್ದು ಸುಮಾರು ಒಂದೂವರೆಘಂಟೆಗಳ ಕಾಲ ನಡೆಯಿತು. ಸಂಭ್ರಮದ ವಾತಾವರಣ ಎಲ್ಲೆಡೆ ತುಂಬಿದ್ದು ಸ್ಥಳೀಯ ಗಾಯಕರಾದ ಮಿಲನ್ ಅರುಣ್, ಅರುಣ್ ಕುಮಾರ್, ಜಮ್ಶೇದ್ ಹಾಗೂ ಜಾವೇದ್ ರನ್ನು ಒಳಗೊಂಡಿತ್ತು. ಇವರ ಧ್ವನಿಗಳಲ್ಲಿ ಕಿಶೋರ್ ಕುಮಾರ್, ಮೊಹಮ್ಮದ್ ರಫಿ, ಯೇಸುದಾಸ್, ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಸೋನು ನಿಗಮ್, ಕುಮಾರ್ ಸಾನು, ಶಾನ್ ರಿಂದ್ ಹಾಡಲ್ಪಟ್ಟ ಮದುರ ಗೀತೆಗಳು ಮರುಹುಟ್ಟು ಪಡೆದವು. ಹಲವು ಕನ್ನಡ ಮತ್ತು ಮಲಯಾಳಂ ಗೀತೆಗಳನ್ನೂ ಹಾಡಲಾಯಿತು.
ಈ ಹಿಂದೆ ನಡೆದಿದ್ದ ಕ್ರಿಕೆಟ್, ಕ್ಯಾರಂ, ವಾಲಿಬಾಲ್ ಹಾಗೂ ಚದುರಂಗ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು. ವರ್ಷದ ಉದ್ಯೋಗಿಯನ್ನೂ ಶ್ರೀ ರವಿ ಶೆಟ್ಟಿಯವರು ವಿಶೇಷ ಬಹುಮಾನದೊಂದಿಗೆ ಸನ್ಮಾನಿಸಿದರು.
ಬಳಿಕ ಎಲ್ಲರೂ ಕುತೂಹಲ ಕಾತರಗಳಿಂದ ನಿರೀಕ್ಷಿಸುತ್ತಿದ್ದ ಯಕ್ಷಗಾನ ಸುಮಾರು ಎರೆಡು ಘಂಟೆಗಳ ಕಾಲ ತಾವು ವಿದೇಶದಲ್ಲಿದ್ದೇವೆನ್ನುವುದನ್ನು ಮರೆಸಿತು.
ಶ್ರೀ ರವಿ ಶೆಟ್ಟಿಯವರು ಸಭಿಕರನ್ನು ಸ್ವಾಗತಿಸಿದರೆ ಶ್ರೀ ಆಂತೋಣಿ ಸೋಜನ್ ವಂದನಾರ್ಪಣೆ ಅರ್ಪಿಸಿದರು. ಶ್ರೀ ಸುನಿಲ್ ಕಾರ್ನೀಲಿಯೋ ರವರು ಕಾರ್ಯಕ್ರಮದ ನಿರೂಪಣೆ ನೀಡಿದರು. ಸ್ವಾದಿಷ್ಟ ಭೋಜನದೊಂದಿಗೆ ಕಾರ್ಯಕ್ರಮ ತೆರೆಕಂಡಿತು.
ವರದಿಯ ವಿವರಗಳು |
 |
ಕೃಪೆ : ಇಕ್ಬಾಲ್ ಮನ್ನಾ, ದೋಹ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-02-23
|
|
|