ಮಕ್ಕಾ ಮದೀನಾ ನಗರಗಳ ನಡುವೆ ರೈಲು ಮಾರ್ಗಕ್ಕೆ ಹಸಿರು ನಿಶಾನೆ |
ಪ್ರಕಟಿಸಿದ ದಿನಾಂಕ : 2008-02-21
೧೦ ಮಿಲಿಯನ್ ಯಾತ್ರಿಗಳಿಗೆ ಪ್ರಯಾಣಾವಕಾಶ : 300 ಕಿಮೀ ವೇಗದ ರೈಲು ಶೀಘ್ರದಲ್ಲಿ
ಜೆದ್ದಾ, ಫೆಬ್ರವರಿ ೨೧: ಸೌದಿ ಅರೇಬಿಯಾದ ಎರೆಡು ಪವಿತ್ರ ನಗರಗಳಾದ ಮಕ್ಕಾ ಹಾಗೂ ಮದೀನಾಗಳ ನಡುವೆ ಅತಿವೇಗದ ರೈಲು ಮಾರ್ಗವೊಂದರ ನಿರ್ಮಾಣ ಯೋಜನೆ ಹಸಿರು ನಿಶಾನೆ ಕಂಡಿದೆ. ಸೌದಿ ಅರೇಬಿಯಾ ದೊರೆ ಅಬ್ದುಲ್ಲಾ ಬುಧವಾರ ಜೆದ್ದಾ ನಗರದ ಮುಖಾಂತರ ಹಾದು ಹೋಗುವ ಈ ಮಾರ್ಗಕ್ಕೆ ಅನುಮೋದನೆ ನೀಡಿದ್ದಾರೆ.
ಈ ಮಾರ್ಗದ ಮೂಲಕ ಹಜ್ ಹಾಗೂ ಉಮ್ರಾ ಯಾತ್ರೆಗಳಿಗೆ ಆಗಮಿಸುವ ಸುಮಾರು 10 ಮಿಲಿಯನ್ ಯಾತ್ರಿಗಳಿಗೆ ಅನುಕೂಲವಾಗಲಿದೆ. ಈ ಮಾರ್ಗಕ್ಕೆ ಅಗತ್ಯವಾದ ಬಂಡವಾಳವನ್ನು ಸೌದಿ ಅರೇಬಿಯಾದ ಹಣಕಾಸು ಸಂಸ್ಥೆಗಳು ಹೂಡಲಿವೆ.
ಈ ಮಾರ್ಗ ಸುಮಾರು 500 ಕಿ.ಮೀ ಉದ್ದವಿದ್ದು ಮೂರು ನಗರಗಳ ನಡುವೆ ವಿದ್ಯುತ್ ತಂತಿಗಳನ್ನು ಎಳೆಯಲಾಗುವುದು. ೩೦೦ ಕಿ.ಮೀ ಪ್ರತಿ ಘಂಟೆಯ ವೇಗ ಪಡೆಯುವ ಹೈಸ್ಪೀಡ್ ಎಲೆಕ್ಟ್ರಿ ರೈಲು ಈಗಿನ ಪ್ರಯಾಣ ಅವಧಿಯನ್ನು ಗಮನಾರ್ಹ ಮಟ್ಟಿಗೆ ಕಡಿತಗೊಳಿಸಲಿದೆ. ಮಕ್ಕಾ ಜೆದ್ದಾ ನಡುವಿದ ಪ್ರಯಾಣ ಅರ್ಧ ಘಂಟೆಯಲ್ಲಿ, ಹಾಗೂ ಜೆದ್ದಾ ಮದೀನ ಪ್ರಯಾಣ ಎರೆಡು ಘಂಟೆಗಳಲ್ಲಿ ಸಾಧ್ಯವಾಗಲಿದೆ ಎಂದು ಸಾರಿಗೆ ಸಚಿವರಾದ ಜಿಬ್ರಾಹ್ ಬಿನ್ ಈದ್ ಅಲ್ ಸುರೈಸ್ರೀಯವರು ತಿಳಿಸಿದ್ದಾರೆ.
ರೈಲು ಯೋಜನೆಯ ಖರ್ಚು ನಿಖರವಾಗಿ ತಿಳಿದುಬಂದಿಲ್ಲ. ಒಂದು ಅಂದಾಜಿನಂತೆ ಸುಮಾರು ೫ ಬಿಲಿಯನ್ ಡಾಲರುಗಳು ಈ ಯೋಜನೆಗೆ ತಗಲಬಹುದೆಂದು ಸೌದಿ ಬಿನ್ ಲಾದೆನ್ ಗ್ರೂಪ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ದಮ್ಮಾಂ ಹಾಗೂ ರಿಯಾದ್ ನಡುವೆ ರೈಲು ಮಾರ್ಗ ಚಾಲನೆಯಲ್ಲಿದ್ದು ಹೊಸ ಮಾರ್ಗ ರಿಯಾದ್ ಜೆದ್ದಾ ನಡುವಿನ ೯೫೦ ಕಿ.ಮೀ. ಹಾಗೂ ದಮ್ಮಾಂ ಮತ್ತು ಜುಬೈಲ್ ನಡುವಿನ 115 ಕಿಮೀ ಮಾರ್ಗಗಳ ಸಹಿತ ಇಡಿಯ ರಾಷ್ಟ್ರದಲ್ಲಿ ರೈಲು ಮಾರ್ಗ ಒದಗಿಸುವ ಮಹಾ ಯೋಜನೆಯಾಗಿದೆ.
ಈ ಯೋಜನೆ ಸುಮಾರು ೪೨ ತಿಂಗಳುಗಳಲ್ಲಿ ಪೂರ್ಣವಾಗುವ ನಿರೀಕ್ಷೆಯಿದೆ.
ವರದಿಯ ವಿವರಗಳು |
 |
ಕೃಪೆ : ಅರೇಬಿಯನ್ ಬಿಸಿನೆಸ್ ವರದಿಗಾರರು : ಅರ್ಶದ್ ಹುಸೇನ್ ಎಂ.ಹೆಚ್
ಪ್ರಕಟಿಸಿದ ದಿನಾಂಕ : 2008-02-21
|
|
|