ದ್ರಾವಿಡ ಸಂಸ್ಕೃತಿಯಿಂದ ದಲಿತರನ್ನು ವಿಮುಖರನ್ನಾಗಿಸುವ ಯತ್ನ: ಪೇಜಾವರ ಸ್ವಾಮೀಜಿ ತಂತ್ರಕ್ಕೆ ದ್ರಾವಿಡ ಮಹಾಸಭಾ ಖಂಡನೆ |
ಪ್ರಕಟಿಸಿದ ದಿನಾಂಕ : 2010-09-11
ಅಸ್ಪಶ್ಯ ಆಚರಿಸುವ ಸವರ್ಣೀಯರ ಕೇರಿಯಲ್ಲಿ ಪಾದಯಾತ್ರೆ ನಡೆಸಲು ಸ್ವಾಮೀಜಿಗೆ ಸಲಹೆ
ಮೈಸೂರು, ಸೆ. 10: ಅಸ್ಪೃಶತೆ ನಿವಾರಣೆಯ ಹೆಸರಿನಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸುತ್ತಿರುವು ದನ್ನು ರಾಜ್ಯ ದ್ರಾವಿಡ ಮಹಾಸಭಾ ಖಂಡಿಸಿದೆ. ಮಹಾಸಭಾದ ರಾಜ್ಯಾಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ ಅಶೋಕಪುರಂ ಶ್ರೀನಿವಾಸ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ದಲಿತರ ಬಗ್ಗೆ ಪೇಜಾವರ ಶ್ರೀಗಳಿಗೆ ನಿಜವಾದ ಕಾಳಜಿ ಇದ್ದಲ್ಲಿ ಅಸ್ಪೃಶತೆಯನ್ನು ಆಚರಿಸುತ್ತಿರುವ ಸವರ್ಣಿಯರ ಕೇರಿಗಳಲ್ಲಿ ಪಾದಯಾತ್ರೆ ನಡೆಸಿ, ಅನಿಷ್ಟ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಬೇಕು. ಅಂತರಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಧರ್ಮಗುರುವಿನ ಮೂಲಕ ದೇಶದ ಆಡಳಿತವನ್ನು ನಿಯಂತ್ರಿಸಬೇಕು ಎಂಬುದು ರಾಷ್ಟ್ರೀಯ ಸ್ವಂಯಂ ಸೇವಕ ಸಂಘದ ಹುನ್ನಾರವಾಗಿದ್ದು, ಅದರಂತೆ ಸಂವಿಧಾನ ಬುಡಮೇಲು ಕೃತ್ಯಕ್ಕೆ ಆರೆಸ್ಸೆಸ್ ಕೈ ಹಾಕಿದೆ. ಅದರ ಒಂದು ಭಾಗವಾಗಿಯೇ ಪೇಜಾವರ ಸ್ವಾಮೀಜಿ ದಲಿತರ ಕೇರಿಗಳಲ್ಲಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ದಲಿತರು ಈ ದೇಶದ ಮೂಲ ನಿವಾಸಿಗಳಾಗಿದ್ದು, ದ್ರಾವಿಡ ಸಂಸ್ಕೃತಿ ಅವರ ಆಚರಣೆಯಾಗಿದೆ. ಆದರೆ ವಿದೇಶಗಳಿಂದ ಬಂದವರು ಈ ದ್ರಾವಿಡ ಸಂಸ್ಕೃತಿಯ ವಿರುದ್ಧ ಆರ್ಯ ಸಂಸ್ಕೃತಿಯನ್ನು ಹೇರುವ ಪ್ರಯತ್ನವನ್ನು ಶತಮಾನಗಳಿಂದಲೂ ಮಾಡುತ್ತಾ ಬಂದಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಮಲೆ ಮಹದೇಶ್ವರ, ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೇಸ್ವಾಮಿ ಮುಂತಾದ ಸಾಧುಶರಣ ಸಂತರ ಅನುಯಾಯಿಗಳು ಹಾಗೂ ಆರಾಧಕರಾದ ದಲಿತರನ್ನು ಆ ಮಾರ್ಗದಿಂದ ವಿಮುಕ್ತರನ್ನಾಗಿಸುವ ಪ್ರಯತ್ನವನ್ನು ಪೇಜಾವರ ಶ್ರೀಗಳು ಮಾಡುತ್ತಿದ್ದಾರೆ. ಈ ಮೂಲಕ ಪ್ರಾಚೀನ ಹಾಗೂ ಸ್ವತಂತ್ರ ಸಂಸ್ಕೃತಿಯೊಂದರ ನಾಶಕ್ಕೆ ಮುಂದಾಗಿದ್ದಾರೆ. ಮತಾಂತರವನ್ನು ವಿರೋಧಿಸುವ ಸ್ವಾಮೀಜಿ ದಲಿತರನ್ನು ದ್ರಾವಿಡ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೇಜಾವರ ಶ್ರೀಗಳ ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಸರಕಾರ ಪರೋಕ್ಷ ಬೆಂಬಲ ನೀಡುತ್ತಿದ್ದು, ಸ್ವಾಮೀಜಿಯವರು ತಮ್ಮ ಈ ಕಾರ್ಯಕ್ರಮವನ್ನು ಮುಂದುವರಿಸಿದರೆ ಅವರನ್ನು ಆರ್ಯರ ಮೂಲಸ್ಥಾನಕ್ಕೆ ತೊಲಗಿಸುವ ಚಳವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮುಖಂಡರಾದ ಪುಷ್ಪರಾಜ್, ಕೃಷ್ಣಪ್ಪ, ಸಿದ್ದರಾಜು, ಶಾಂತಿ, ಮಂಜುಳಾ, ರಂಗಸ್ವಾಮಿ, ಕುಮಾರ, ಸರ್ದಾರ್ ಅಹಮದ್, ಅಸೀಸ್‌ಬೇಗ್ ಮುಂತಾದವರು ಪತ್ರಿಕಾ ಹೇಳಿಕೆಗೆ ಸಹಿ ಮಾಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾ ಭಾರತಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|