ಕೇಸರಿ ಬಣ್ಣ ಯಾವುದೇ ಪಕ್ಷದ ಸಂಕೇತವಲ್ಲ: ಹಂಸರಾಜ್ ಭಾರದ್ವ್ವಾಜ್ |
ಪ್ರಕಟಿಸಿದ ದಿನಾಂಕ : 2010-09-11
ಬೆಂಗಳೂರು, ಸೆ. 10: ಕೇಸರಿ ಬಣ್ಣ ಯಾವುದೇ ಪಕ್ಷದ ಸಂಕೇತವಲ್ಲ. ಅದು ರಾಷ್ಟ್ರದ ಸಂತರ ಜ್ಞಾನದ ಪ್ರತೀಕ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದ್ದಾರೆ.
ಶುಕ್ರವಾರ ಬೆಂಗಳೂರು ಹೊರ ವಲಯದ ಕೆಂಗೇರಿಯಲ್ಲಿ ಬಸವ ಸಮಿತಿ ಬಿ.ಡಿ.ಜತ್ತಿ ಜನ್ಮ ದಿನದ ಹಿನ್ನೆಲೆಯಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಾಜ ಸುಧಾರಕರು, ತತ್ವಜ್ಞಾನಿಗಳು ಹಾಗೂ ದಾರ್ಶನಿ ಕರ ಸಿದ್ಧಾಂತಗಳನ್ನು ಮರೆತಿದ್ದೇವೆ. ಹೀಗಾಗಿ ದೇಶದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾಜ ಸುಧಾರಕ ಬಸವಣ್ಣ ಮಹಿಳೆಯರ ಅಭಿವೃದ್ಧಿಗೆ ಹೆಚ್ಚಿನ ಅದ್ಯತೆ ನೀಡಿದ್ದರು. ಆದರೆ, ಇಂದು ನಾವು ಮಹಿಳೆಯರನ್ನು ಕಡೆಗಣಿಸಿದ್ದೇವೆ. ಬಸವಣ್ಣನವರ ವಿಚಾರಧಾರೆಗಳು ಕೇವಲ ಬಾಯಿ ಮಾತಿಗೆ ಮೀಸಲಾಗಿವೆ. ಅವು ಕಾರ್ಯ ರೂಪಕ್ಕೆ ಬರಬೇಕಾದ ಅಗತ್ಯವಿದೆ ಎಂದು ರಾಜ್ಯಪಾಲರು ಸಲಹೆ ಮಾಡಿದರು.
ಆಧುನಿಕ ತಂತ್ರಜ್ಞಾನ ಮತ್ತು ಸಮಾಜ ಸುಧಾರಣೆಯಲ್ಲಿ ದೇಶ ಮುಂದಿದೆ. ನಮ್ಮಲ್ಲಿನ ಸುಧಾರಕರು ರಾಜ್ಯಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ ಎಂದು ಹೇಳಿದ ಭಾರದ್ವಾಜ್, ಹಣ ಅಂತಸ್ತು ನಮ್ಮ ಹಿಂದೆ ಬರುವುದಿಲ್ಲ. ಒಳ್ಳೆಯ ಕೆಲಸಗಳನ್ನು ಮಾಡ ಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಬೇಲಿ ಮಠದ ಶಿವರುದ್ರ ಸ್ವಾಮಿ ಮಾತನಾಡಿ, ವಚನ ಶ್ರಾವಣ ಹೆಸರನಲ್ಲಿ ದಶ ಮಾನೋತ್ಸವ ಆಚರಿಸುತ್ತಿದ್ದೇವೆ. ಇದರ ಉದ್ದೇಶ ಸಂಕುಚಿತ ಮನೋಭಾವನೆ ತೊಡದು ಹಾಕಬೇಕು ಎಂಬುದು. ವಚನ ಶ್ರಾವಣದಿಂದ ಬದುಕಿಗೆ ಪರಿಪೂರ್ಣತೆ ಒದಗಲಿದೆ ಎಂದು ನುಡಿದರು. ಸಮಾರಂಭದಲ್ಲಿ ಬಿ.ಡಿ.ಜತ್ತಿ ಅವರ ಪುತ್ರ ಅರವಿಂದ ಜತ್ತಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾ ಭಾರತಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|