ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಆಯ್ಕೆಯಾದ ವಿವೇಕ್‌ರಾಜ್ |
ಪ್ರಕಟಿಸಿದ ದಿನಾಂಕ : 2010-09-11
ಮಂಗಳೂರು : ವರ್ಲ್ಡ್ ಎಕನಾಮಿಕ್ ಫಾರಂ ವತಿಯಿಂದ ಚೀನಾದಲ್ಲಿ ಸೆ. 13ರಿಂದ 15ರ ವರೆಗೆ ನಡೆಯುವ ವಾರ್ಷಿಕ ಸಮ್ಮೇಳನಕ್ಕೆ ಪನಾಮ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳೂರಿನ ವಿವೇಕ್ ರಾಜ್ ಆಹ್ವಾನಿತ ರಾಗಿದ್ದಾರೆ.
ಇದರೊಂದಿಗೆ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾದ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ (28) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್ನುವ ಹಿರಿಮೆಗೆ ವಿವೇಕ್ ಪಾತ್ರರಾಗಿದ್ದಾರೆ.
ಉದ್ಯಮದಲ್ಲಿ ಕನಿಷ್ಠ 450 ಕೋಟಿ ರೂ. ತೊಡಗಿಸಿದವರು ಮಾತ್ರ ಈ ವಿಶೇಷ ಆಹ್ವಾನದ ಅರ್ಹತೆ ಪಡೆಯಲು ಸಾಧ್ಯ. ಪನಾಮ ಮೈನಿಂಗ್ ಇಂಡಸ್ಟ್ರೀಸ್ ಕಾರ್ಪೊರೇಶನ್ ಲಿ. ಸಂಸ್ಥೆಯ ಆರ್ಥಿಕ ಹಾಗೂ ಒಟ್ಟು ಅಭಿವೃದ್ಧಿ ಪರಿಗಣಿಸಿ ವರ್ಲ್ಡ್ ಎಕನಾಮಿಕ್ ಫಾರಂ ಈ ಅವಕಾಶ ನೀಡಿದೆ ಎಂದು ವಿವೇಕ್‌ರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೆಪ್ಸಿ, ಏರ್‌ಬಸ್, ಎಂ. ಆ್ಯಂಡ್ ಎಂ., ಇನ್‌ಫೋಸಿಸ್, ರಿಲಯನ್ಸ್ ಸೇರಿದಂತೆ ಕೆಲವು ಕಂಪೆನಿಗಳು ಕೂಡ ಈ ಮಹಾಸ ಭೆಯಲ್ಲಿ ಭಾರತವನ್ನು ಪ್ರತಿನಿಧಿಸಲಿವೆ. ಕಳೆದ ವರ್ಷ ಮಣಿಪಾಲ ಸಂಸ್ಥೆಗೆ ಈ ಗೌರವ ದೊರೆಕಿತ್ತು ಎಂದು ಅವರು ತಿಳಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಿನೋ ಸ್ಟೀಲ್‌ನ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಕ್ವೀನ್ ಆಫ್ ಜೋರ್ಡಾನ್, ನೆಸ್ಲೆ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಅಗ್ರ ಶ್ರೇಣಿಯ ಉದ್ಯಮಪತಿ ಗಳನ್ನು ಈ ಮಹಾಸಭೆಯಲ್ಲಿ ಭೇಟಿ ಮಾಡಲಿರುವುದಾಗಿ ಅವರು ಹೇಳಿದರು.
2000ನೇ ಇಸವಿ ಅನಂತರ ಪನಾಮ ಸಂಸ್ಥೆ ಉದ್ಯಮ ವಲಯದಲ್ಲಿ ಗಮನಾರ್ಹ ಸಾಧನೆ ತೋರಿದೆ. ಮಿನರಲ್ಸ್, ಕಬ್ಬಿಣದ ಅದಿರು, ಬೋಕ್ಸೈಟ್, ಶಿಪ್ಪಿಂಗ್, ಲೈಮ್ಸ್ಟೋನ್ ಸೇರಿದಂತೆ ವಿವಿಧ ಕಾರ್ಯಕ್ಷೇತ್ರಗಳಿಗೆ ಸಂಸ್ಥೆ ಕೆಲಸ ವಿಸ್ತರಿಸಿಕೊಂಡಿದೆ. ನವೀಕರಿಸ ಬಹುದಾದ ಇಂಧನ, ಅದಿರು ವ್ಯಾಪಾರಗಳಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆದ ಕಂಪೆನಿಗಳ ಸಾಲಿನಲ್ಲಿ ಪನಾಮ ಗುರುತಿಸ ಲ್ಪಟ್ಟಿದೆ ಎಂದು ಅವರು ವಿವರಿಸಿದರು.
ಕರ್ನಾಟಕ ರಾಜ್ಯದಲ್ಲಿ ಅದಿರು ರಫ್ತು ನಿಷೇಧದಿಂದ ರಾಷ್ಟ್ರೀಯ ಮಟ್ಟದ ರಫ್ತು ಉದ್ಯಮದ ಮೇಲೆ ಹೆಚ್ಚಿನ ಅಡ್ಡ ಪರಿಣಾಮಗಳು ಉಂಟಾಗಲಾರದು ಎಂದು ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಪ್ರಸ್ತುತ ಸಂಸ್ಥೆ ಅನೇಕ ರಾಷ್ಟ್ರಗಳ ಜೊತೆ ವಾರ್ಷಿಕ 35 ಮಿಲಿಯನ್ ಟನ್‌ನಷ್ಟು 17 ವಿವಿಧ ನಮೂನೆಯ ಖನಿಜಗಳ ವ್ಯಾಪಾರ ಮಾಡುತ್ತಿದೆ. ವಿಶ್ವದ ಅಗ್ರ ಶ್ರೇಣಿಯ ಸ್ಟೀಲ್ ಪ್ಲಾಂಟ್ ಕಂಪೆನಿ ಜೊತೆ ಸೇರಿಕೊಂಡು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಅದಿರಿನ ಮೌಲ್ಯ ವರ್ಧಿತ ಘಟಕ ಆರಂಭಿಸಲು ಹಾಗೂ ಮಡಗಾಸ್ಕರ್‌ನಲ್ಲಿ ಯೋಜನೆ ವಿಸ್ತರಿಸಲು ಸಂಸ್ಥೆ ಉದ್ದೇಶಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಫೋರ್‌ವಿಂಡ್ಸ್ ಜಾಹೀರಾತು ಸಂಸ್ಥೆಯ ಎಲಿಯಾಸ್ ಫೆರ್ನಾಂಡಿಸ್ ಹಾಗೂ ಸಿಲಾ ಔಟ್ ಡೋರ್ ಸಂಸ್ಥೆಯ ಮ್ಯಾನೇಜರ್ ವಾಲ್ಟರ್ ಮೋತೆರೋ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಸತೀಶ್ ಕಾಪಿಕಾಡ್ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|