ಲಾರಿ ಢಿಕ್ಕಿ ದ್ವಿಚಕ್ರ ವಾಹನ ಚಾಲಕ ನೆಲ್ಯಡ್ಕ ನಿವಾಸಿ ವಿಶ್ವನಾಥ ಗೌಡ ಸ್ಥಳದಲ್ಲೆ ಸಾವು |
ಪ್ರಕಟಿಸಿದ ದಿನಾಂಕ : 2010-09-11
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 48ರ ಪಾಣೆಮಂಗಳೂರು ದೆಂಜಿಪಾಡಿಯಲ್ಲಿ ಸೆ. 10ರ ಸಂಜೆ ಲಾರಿಯೊಂದು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಚಾಲಕ ಟೆಲಿಕಾಂ ಇಲಾಖಾ ಉದ್ಯೋಗಿ, ನರಿಕೊಂಬು ಗ್ರಾಮ ನೆಲ್ಯಡ್ಕ ನಿವಾಸಿ ವಿಶ್ವನಾಥ ಗೌಡ (45) ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರು ಕರ್ತವ್ಯ ಮುಗಿಸಿ ಚೌತಿ ಹಬ್ಬದ ಸಲುವಾಗಿ ಬೇಕಾದ ಸಾಮಗ್ರಿಗಳನ್ನು ಮೆಲ್ಕಾರ್‌ನಲ್ಲಿ ಖರೀದಿಸಿ ತನ್ನ ಹೊಂಡಾ ಆಕ್ಟಿವಾದಲ್ಲಿ ಮನೆಯತ್ತ ತೆರಳುತ್ತಿದ್ದಾಗ ದುರ್ಫಟನೆ ಸಂಭವಿಸಿತು.
ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯೆಯಾಗಿರುವ ಪತ್ನಿ ಜಯಂತಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅವರು ಅಗಲಿದ್ದಾರೆ.
ಓವರ್‌ಟೇಕ್ ಭರಾಟೆ
ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ, ವಿಶ್ವನಾಥ ಗೌಡ ಅವರ ಹಿಂದಿನಿಂದ ಬಂದ ಲಾರಿಯೊಂದು ಅವರ ಸ್ಕೂಟರ್‌ಗೆ ಢಿಕ್ಕಿ ಹೊಡೆಯಿತು.
ಢಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು ಲಾರಿಯ ಚಕ್ರ ಅವರ ತಲೆಯ ಮೇಲಿಂದ ಹಾದು ಹೋಗಿದೆ. ರುಂಡ ಮುಂಡ ಬೇರ್ಪಟ್ಟಿದ್ದು ದೃಶ್ಯ ಅತ್ಯಂತ ಬೀಭತ್ಸವಾಗಿತ್ತು.
ಅಪಘಾತ ಸಂಭವಿಸಿದ ತತ್‌ಕ್ಷಣ ಲಾರಿ ಪರಾರಿಯಾಗಿದೆ. ಲಾರಿಯನ್ನು ಸ್ಥಳೀಯರು ಬೆಂಬತ್ತಿದರೂ ಪತ್ತೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮಗನ ಹುಟ್ಟುಹಬ್ಬ
ಅವರ ಹಿರಿಯ ಪುತ್ರಿಗೆ ಸುಮಾರು ಆರು ತಿಂಗಳ ಹಿಂದೆ ವಿವಾಹವಾಗಿತ್ತು. ಶುಕ್ರವಾರ ಅವರ ಪುತ್ರ ಶ್ರೀಕಾಂತನ ಹುಟ್ಟುಹಬ್ಬದ ಕಾರಣ ನೆರೆಹೊರೆಯ ಮನೆಯವರಿಗೆ ಸಿಹಿ ಸ್ವತಃ ಹಂಚಿದ್ದರು. ಮಧ್ಯಾಹ್ನ ಕುಂಬ್ಳೆಯಲ್ಲಿ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿ ದ್ದರು.
ಮೂಲತಃ ಪುತ್ತೂರಿನವರಾದ ಅವರು ಟೆಲಿಕಾಂನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಸಜೀಪಮುನ್ನೂರು ಪ್ರದೇಶದ ಲೈನ್‌ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತ ದೇಹವನ್ನು ಬಂಟ್ವಾಳ ಸಮದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|