ಪುಣೆ ಸ್ಫೋಟಕ್ಕೆ ಔರಂಗಬಾದ್ ಆರ್‌ಡಿಎಕ್ಸ್ |
ಪ್ರಕಟಿಸಿದ ದಿನಾಂಕ : 2010-09-11
ಮುಂಬಯಿ: ನಾಲ್ಕು ವರ್ಷಗಳ ಹಿಂದಿನ ಔರಂಗಬಾದ್ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಪೊಲೀಸರ ಕಣ್ಣುತಪ್ಪಿಸಿ ಒಯ್ಯಲಾಗಿದ್ದ ಆರ್‌ಡಿಎಕ್ಸ್‌ನ್ನು ಪುಣೆಯ ಜರ್ಮನ್ ಬೇಕರಿ ಬಾಂಬ್‌ಸ್ಫೋಟಕ್ಕೆ ಬಳಸಿರುವ ಸಾಧ್ಯತೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2006ರ ಮೇ ತಿಂಗಳಲ್ಲಿ ಭಯೋತ್ಪಾದನೆ ನಿಗ್ರಹ ಪಡೆಯ ಪೊಲೀಸರು ಕಾರಿನಲ್ಲಿ ಸಾಗಿಸುತ್ತಿದ್ದ 43 ಕಿ. ಗ್ರಾಂ. ಆರ್‌ಡಿಎಕ್ಸ್, 16 ಎಕೆ 47 ರೈಫಲ್‌ಗಳು,50 ಹ್ಯಾಂಡ್ ಗ್ರೆನೇಡ್‌ಗಳು ಹಾಗೂ 3200 ಗುಂಡುಗಳನ್ನು ವಶಪಡಿಸಿಕೊಂಡು 19 ಆರೋಪಿ ಗಳನ್ನು ಬಂಧಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಝಬಿಯುದ್ದೀನ್ ಅನ್ಸಾರಿ ಅಲಿಯಾಸ್ ಝಬಿ ಚಲಾಯಿಸುತ್ತಿದ್ದ ಕಾರು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪಲಾಯನ ಮಾಡಿತ್ತು. ಈ ಕಾರಿನಲ್ಲೂ ಭಾರೀ ಪ್ರಮಾಣದ ಆರ್‌ಡಿಎಕ್ಸ್ ಇತ್ತು ಎಂದು ಉಳಿದ ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ. ಈ ಆರ್‌ಡಿಎಕ್ಸ್‌ನ್ನು ಪತ್ತೆ ಹಚ್ಚಲು ಪೊಲೀಸರಿಂದ ಸಾಧ್ಯವಾಗಿಲ್ಲ.
ಪುಣೆ ಸ್ಫೋಟಕ್ಕೆ ಸಂಬಂಧಿಸಿ ಸೆರೆಯಾಗಿರುವ ಮಿರ್ಜಾ ಹಿಮಾಯತ್ ಬೇಗ್ ಜತೆಗೆ ಝಬಿಗೆ ಸಂಪರ್ಕವಿತ್ತು. ಶಸ್ತ್ರಾಸ್ತ್ರ ಪ್ರಕರಣದ ಇನ್ನೋರ್ವ ಆರೋಪಿ ಫಯಾಜ್ ಕಗಜಿ ಕೂಡ ಝಬಿಗೆ ನಿಕಟನಾಗಿದ್ದ. ಈ ಹಿನ್ನೆಲೆಯಲ್ಲಿ ಔರಂಗಬಾದ್ ಶಸ್ತ್ರಾಸ್ತ್ರ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಆರ್‌ಡಿಎಕ್ಸ್ ಪುಣೆ ಸಹಿತ ಆ ಬಳಿಕ ಸಂಭವಿಸಿರುವ ಹಲವು ಬಾಂಬ್‌ಸ್ಫೋಟ ಕೃತ್ಯಗಳಿಗೆ ಬಳಕೆಯಾಗಿರಬೇಕೆಂದು ಪೊಲೀಸರು ಅನುಮಾನಿಸುತ್ತಿದ್ದಾರೆ. ಝಬಿ ಚಲಾಯಿಸುತ್ತಿದ್ದ ಕಾರು ನಂತರ ಮಾಲೇಗಾಂವ್‌ನಲ್ಲಿ ಸಿಕ್ಕಿದರೂ ಅದರಲ್ಲಿದ್ದ ಆರ್‌ಡಿಎಕ್ಸ್ ಮತ್ತು ಹ್ಯಾಂಡ್ ಗ್ರೆನೇಡ್‌ಗಳು ನಾಪತ್ತೆಯಾಗಿದ್ದವು.
ಝಬಿ ಕೂಡ ದೇಶದಿಂದ ಪಲಾಯನ ಮಾಡಿದ್ದ.
ಪುಣೆ ಸ್ಫೋಟ ಪ್ರಕರಣದ ತಲೆಮರೆಸಿಕೊಂಡಿರುವ ಆರೋಪಿ ಮೊಹಿÕನ್ ಚೌಧರಿ ಕಳೆದ ಫೆ. 7ರಂದು ಉದ್ಗೀರ್‌ನಲ್ಲಿರುವ ಬೇಗ್‌ನ ಇಂಟರ್‌ನೆಟ್ ಕೆಫೆಗೆ ಆರ್‌ಡಿಎಕ್ಸ್ ತಂದಿದ್ದ. 2006ರಲ್ಲಿ ನಾಪತ್ತೆಯಾದ ಆರ್‌ಡಿಎಕ್ಸ್‌ನ್ನು ಉಗ್ರರು ಎಲ್ಲೋ ಅಡಗಿಸಿಟ್ಟಿ ದ್ದಾರೆ. ಈ ಆರ್‌ಡಿಎಕ್ಸ್ ಬಳಸಿ ಜರ್ಮನ್ ಬೇಕರಿಯಲ್ಲಿ ಸ್ಫೋಟಿಸಿರುವ ಬಾಂಬ್ ತಯಾರಿಸಿರಬೇಕೆಂಬ ಅನುಮಾನ ಪೊಲೀಸ ರದ್ದು. ಪುಣೆಯಲ್ಲಿ ಸ್ಫೋಟಿಸಿದ ಬಾಂಬ್‌ಗ ಸುಮಾರು ಮೂರು ಕಿ. ಗ್ರಾಂ ಆರ್‌ಡಿಎಕ್ಸ್ ಬಳಸಲಾಗಿದೆ. ಈ ಆರ್‌ಡಿಎಕ್ಸ್‌ನ ಮೂಲವನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಭಯೋತ್ಪಾದನೆ ನಿಗ್ರಹ ಪಡೆಯ ಮುಖ್ಯಸ್ಥ ರಾಕೇಶ್ ಮಾರಿಯಾ ಹೇಳಿದ್ದಾರೆ.
ಉಗ್ರರು ಬೇಗ್‌ನ ಇಂಟರ್‌ನೆಟ್ ಕೆಫೆಯಿಂದ ಇಂಟರ್‌ನೆಟ್ ಮತ್ತು ವಾಯಿಸ್ ಓವರ್ ಇಂಟರ್‌ನೆಟ್ ಪ್ರೊಟೊಕಾಲ್ (ವಾಯಿಪ್) ಬಳಸಿ ಸಂಹವನ ಸಾಧಿಸುತ್ತಿದ್ದ ಕಾರಣ ಅವರ ಜಾಡು ಪತ್ತೆ ಹಚ್ಚಲು ವಿಳಂಬವಾಯಿತು. ಮಿರ್ಜಾ ಹಿಮಾಯತ್ ಬೇಗ್ ಸಂಘಟಿಸಿದ್ದ ಉಗ್ರರೆಲ್ಲ ಆಧುನಿಕ ತಂತ್ರಜ್ಞಾನವನ್ನು ಬಳಸುವುದರಲ್ಲಿ ಪರಿಣತರು ಎಂದು ಮಾರಿಯಾ ತಿಳಿಸಿದ್ದಾರೆ.
ಕೊಲಂಬೊದಲ್ಲಿ ಕಗಜಿ ಹಾಗೂ ಬೇಗ್ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಛಿದ್ರವಾಗಿರುವ ಇಂಡಿಯನ್ ಮುಜಾಹಿದಿನ್ ಉಗ್ರರನ್ನು ಮರಳಿ ಸಂಘಟಿಸುವ ಹೊಣೆಯನ್ನು ಬೇಗ್‌ಗೆ ಒಪ್ಪಿಸಲಾಯಿತು. ಈ ಉದ್ದೇಶಕ್ಕಾಗಿ ಅವನಿಗೆ ಕಗಜಿ ಎರಡೂವರೆ ಲ. ರೂ. ನೀಡಿದ. ಈ ಹಣದಿಂದ ಬೇಗ್ ಉದ್ಗೀರ್‌ನಲ್ಲಿ ಗ್ಲೋಬಲ್ ಇಂಟರ್‌ನೆಟ್ ಕೆಫೆಯನ್ನು ಪ್ರಾರಂಭಿಸಿದ ಹಾಗೂ ಯುವಕರನ್ನು ಉಗ್ರ ಪಡೆಗೆ ಸೇರಿಸಿಕೊಂಡು ಪಾಕಿಸ್ಥಾನಕ್ಕೆ ತರಬೇತಿಗಾಗಿ ಕಳುಹಿಸುತ್ತಿದ್ದ. ಆದರೆ ಅವನು ಪಾಕಿಸ್ಥಾನಕ್ಕೆ ಹೋಗಲಿಲ್ಲ, ಬದಲಾಗಿ ಭಟ್ಕಳದ ಸಮುದ್ರ ದಂಡೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿದ್ದಾನೆಂದು ಮಾರಿಯಾ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-11 00:00:00
|
|
|