ಅಯ್ಯಪ್ಪ ಭಕ್ತರು ಶಬರಿಮಲೆಗೆ ವಿಮಾನದಲ್ಲೇ ಹೋಗಬಹುದು! |
ಪ್ರಕಟಿಸಿದ ದಿನಾಂಕ : 2010-09-10
ಚೆನ್ನೈ, ಶುಕ್ರವಾರ, 10 ಸೆಪ್ಟೆಂಬರ್ 2010 ಇನ್ನು ಶ್ರೀಮಂತ ಅಯ್ಯಪ್ಪ ಭಕ್ತರು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ಗಳಿಂದ ನೇರವಾಗಿ ಶಬರಿಮಲೆಗೆ ವಿಮಾನದ ಮೂಲಕ ಹೋಗಬಹುದಾಗಿದೆ. ಹೌದು, ಚೆನ್ನೈಯ ಬಿಲ್ಡರ್ ಒಬ್ಬರು ಶಬರಿಮಲೆ ಸಮೀಪ ಖಾಸಗಿ ವಿಮಾನ ನಿಲ್ದಾಣ ನಿರ್ಮಿಸಲು ಅನುಮತಿ ಗಿಟ್ಟಿಸಿಕೊಂಡಿದ್ದಾರೆ.
ಚೆನ್ನೈ ಮೂಲದ 'ಕೆಜಿಎಸ್ ಡೆವಲಪ್ಪರ್ಸ್' ಎಂಬ ಸಂಸ್ಥೆಯೇ ಸುಮಾರು 2,000 ಕೋಟಿ ರೂಪಾಯಿಗಳ ಯೋಜನೆಗೆ ಕೈ ಹಾಕಿರುವುದು. ಶಬರಿಮಲೆಯಿಂದ 80 ಕಿಲೋ ಮೀಟರ್ ದೂರದಲ್ಲಿರುವ ಕೇರಳದ ಪಟ್ಟನಂತಿಟ್ಟ ಜಿಲ್ಲೆಯ ಅರಣ್ಮಲ ಎಂಬಲ್ಲಿ ಖಾಸಗಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.
ಸುಮಾರು 500 ಎಕರೆ ಪ್ರದೇಶದಲ್ಲಿ ಈ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಈಗಾಗಲೇ ನಾವು 350 ಎಕರೆ ಜಮೀನನ್ನು ನಾವು ಈಗಾಗಲೇ ವಶಪಡಿಸಿಕೊಂಡಿದ್ದೇವೆ. 2,600 ಮೀಟರ್ ರನ್‌ವೇ ನಿರ್ಮಾಣ ಕಾರ್ಯ ಕೂಡ ಸಿದ್ಧವಾಗಿದೆ ಎಂದು ಕೆಜಿಎಸ್ ಅರಣ್ಮಲ ಏರ್‌ಪೋರ್ಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಗೀಜಿ ಜಾರ್ಜ್ ತಿಳಿಸಿದ್ದಾರೆ.
ಇದಕ್ಕೆ ಅಗತ್ಯವಿದ್ದು ಪರವಾನಗಿಗಳನ್ನು ಕೇರಳ ಸರಕಾರ, ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯ ಮತ್ತು ಪರಿಸರ ಸಚಿವಾಲಯದಿಂದ ಪಡೆದುಕೊಳ್ಳಲಾಗಿದೆ. 2012ರ ಹೊತ್ತಿಗೆ ಪೂರ್ಣ ಪ್ರಮಾಣದ ದೇಸೀ ವಿಮಾನಗಳ ಹಾರಾಟ ಇಲ್ಲಿಂದ ಆರಂಭವಾಗುತ್ತದೆ ಎಂದು ಜಾರ್ಜ್ ವಿವರಣೆ ನೀಡಿದ್ದಾರೆ.
ಮೊದಲ ಹಂತದಲ್ಲಿ ಲಭ್ಯ ರನ್‌ವೇ ಹೊರತುಪಡಿಸಿ ಟ್ಯಾಕ್ಸಿವೇ, ಅಪ್ರಾನ್, ಐಸೋಲೇಷನ್ ಬೇ ಮತ್ತು ಟರ್ಮಿನಲ್ ಕಟ್ಟಡ ಸಿದ್ಧವಾಗಲಿದೆ. ಒಂದು ವರ್ಷದ ನಂತರ ರನ್‌ವೇಯನ್ನು 3,600 ಮೀಟರುಗಳಿಗೆ ವಿಸ್ತರಿಸಲಾಗುತ್ತದೆ. ನಂತರ ಏರ್‌ಬಸ್ ಎ-300 ವಿಮಾನಗಳನ್ನು ಕೂಡ ಇಲ್ಲಿಂದ ಹಾರಾಟ ನಡೆಸಬಹುದಾಗಿದೆ. ಹಾಗಾಗದಲ್ಲಿ ಅಂತಾರಾಷ್ಟ್ರೀಯ ವಿಮಾನಗಳೂ ಇಲ್ಲಿ ಇಳಿಯಬಹುದಾಗಿದೆ.
ಇದೇ ವರ್ಷದಿಂದ ಅಯ್ಯಪ್ಪ ಭಕ್ತರಿಗೆ ನೆರವಾಗುವಂತೆ ಬಾಡಿಗೆ ವಿಮಾನಗಳ ಸೇವೆಯನ್ನು ಪಡೆದುಕೊಳ್ಳುವ ಬಗ್ಗೆ ಸಂಸ್ಥೆ ಚರ್ಚೆ ನಡೆಸುತ್ತಿದೆ. ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ಗಳಿಂದ ಬಾಡಿಗೆ ವಿಮಾನಗಳನ್ನು ಹಾರಿಸುವ ಕುರಿತು ಸೇವಾದಾ ರರು ನಮ್ಮ ಜತೆ ಸಂಪರ್ಕದಲ್ಲಿದ್ದಾರೆ ಎಂದು ಜಾರ್ಜ್ ತಿಳಿಸಿದ್ದಾರೆ.
ವಿಮಾನ ಸೌಲಭ್ಯ ಆರಂಭವಾದ ನಂತರ ಭಕ್ತರು ತಾವು ಮನೆಯಿಂದ ಹೊರಟ ದಿನವೇ ಸಂಜೆ ಮನೆಗೆ ತಲುಪಬಹುದಾಗಿದೆ. ಶಬರಿಮಲೆಗೆ ವಿಮಾನ ನಿಲ್ದಾಣದಿಂದ ಕೇವಲ 80 ಕಿಲೋ ಮೀಟರ್ ದೂರವಿರುವುದರಿಂದ ಹೆಚ್ಚೆಂದರೆ ಎರಡು ಗಂಟೆಗಳ ರಸ್ತೆ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ಭಕ್ತರಿಗೆ ಸಹಕಾರವಾಗಲಿದೆ ಎನ್ನುವುದು ಸಂಸ್ಥೆಯ ಅಭಿಪ್ರಾಯ
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|