ಹೌದು, ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿಯವರ ಒಟ್ಟು ಆಸ್ತಿ ಮೌಲ್ಯ ಏಳು ಲಕ್ಷ ರೂಪಾಯಿ. ಉಳಿದ ಸಚಿವರುಗಳಾದ ಜೈಪಾಲ್ ರೆಡ್ಡಿಯವರದ್ದು ನಾಲ್ಕು ಲಕ್ಷ, ಫಾರೂಕ್ ಅಬ್ದುಲ್ಲಾ ಅವರದ್ದು ಏಳು ಲಕ್ಷ, ಶರದ್ ಪವಾರ್ ಆವರದ್ದು ನಾಲ್ಕೇ ಕೋಟಿ. ನಮ್ಮವರೇ ಆದ ಎಸ್.ಎಂ. ಕೃಷ್ಣ ಅವರ ಆಸ್ತಿ ಮೌಲ್ಯ ಕೇವಲ 60 ಲಕ್ಷ ರೂಪಾಯಿಗಳು.
ಹೀಗೆ ಕೇಂದ್ರ ಸಚಿವರು ಶ್ರೀಮಂತರು ಎಂದುಕೊಂಡವರಿಗೆ ನಿರಾಸೆಯಾಗುವ ಸುದ್ದಿ ಬಂದಿದೆ!
* ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ - 60 ಲಕ್ಷ ರೂ.
* ರಕ್ಷಣಾ ಸಚಿವ ಎ.ಕೆ. ಆಂಟನಿ - 1.17 ಲಕ್ಷ ರೂ.
* ಗೃಹಸಚಿವ ಪಿ. ಚಿದಂಬರಂ - 10.5 ಕೋಟಿ ರೂ.
* ವಾಣಿಜ್ಯ ರಾಜ್ಯ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ - 25 ಕೋಟಿ ರೂ.
* ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ - 6.5 ಲಕ್ಷ ರೂ.
* ವಿತ್ತ ಸಚಿವ ಪ್ರಣಬ್ ಮುಖರ್ಜಿ - 26 ಕೋಟಿ ರೂ.
* ಪೆಟ್ರೋಲಿಯಂ ಸಚಿವ ಮುರಳಿ ದಿಯೋರಾ - 5.6 ಕೋಟಿ ರೂ.
* ಕೃಷಿ ಮತ್ತು ಆಹಾರ ಸಚಿವ ಶರದ್ ಪವಾರ್ - 6.5 ಕೋಟಿ ರೂ.
* ದೂರಸಂಪರ್ಕ ಸಚಿವ ಎ. ರಾಜಾ - 1.5 ಲಕ್ಷ ರೂ.
* ರಾಜ್ಯ ಸಚಿವ ಡಿ. ನೆಪೋಲಿಯನ್ - 14 ಕೋಟಿ ರೂ.
ಕೇಂದ್ರ ಸಚಿವರ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಸುಭಾಷ್ ಚಂದ್ರ ಅಗರ್ವಾಲ್ ಎಂಬ ವರು ಮಾಹಿತಿ ಹಕ್ಕು ಕಾಯ್ದೆಯನ್ನು ಬಳಸಿ ಕೇಳಿರುವ ಮಾಹಿತಿಗೆ ಹೀಗೆಂದು ಪ್ರಧಾನ ಮಂತ್ರಿಯವರ ಕಚೇರಿ ಉತ್ತರಿಸಿದೆ.
ನಾಗರಿಕ ವಾಯುಯಾನ ಸಚಿವಾಲಯದಲ್ಲಿ ಹಾರಾಡುತ್ತಿರುವ ಎನ್‌ಸಿಪಿಯ ಪ್ರಫುಲ್ ಪಟೇಲ್ ಅವರು ಸಂಪುಟ ಸಚಿವರಲ್ಲಿ ಅತಿ ಶ್ರೀಮಂತರು. ಅವರ ಆಸ್ತಿ ಮೌಲ್ಯ 33 ಕೋಟಿ ರೂಪಾಯಿಗಳು.
ವಿಶ್ವದ ಬಹುದೊಡ್ಡ ಉದ್ಯೋಗದಾತರಲ್ಲಿ ಒಂದು ಎಂದು ಹೆಸರು ಪಡೆದುಕೊಂಡಿರುವ ರೈಲ್ವೇ ಸಚಿವಾಲ ಯದ ಅಧಿನಾಯಕಿ ಮಮತಾ ಬ್ಯಾನರ್ಜಿಯವರು ಸಂಪುಟದಲ್ಲಿರುವ ಅತಿ ಬಡವ ಸಚಿವೆ. ಇವರ ಒಟ್ಟು ಆಸ್ತಿ ಮೌಲ್ಯ 6.7 ಲಕ್ಷ ರೂಪಾಯಿ. ಇದರಲ್ಲಿ 10 ಗ್ರಾಮ್ ಚಿನ್ನವೂ ಸೇರಿದೆ.
ದಿನಂಪ್ರತಿ ಲಕ್ಷಗಟ್ಟಲೆ ಡಾಲರುಗಳ ವ್ಯವಹಾರ ನಡೆಸುವ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರ ಖಾಸಗಿ ಆಸ್ತಿಯ ಮೌಲ್ಯ ಕೇವಲ 26,741.ಇದೇ ರೀತಿ ಆಹಾರ ಸಂಸ್ಕರಣಾ ಸಚಿವ ಸುಬೋಧ್ ಕಾಂತ್ ಸಹಾಯ್ ಅವರು ಕೂಡ ಕೇವಲ 1.4 ಲಕ್ಷ ರೂಪಾಯಿ ಆಸ್ತಿ ಹೊಂದಿರುವುದಾಗಿ ಹೇಳಿದ್ದಾರೆ.
ನಗರಾಭಿವೃದ್ಧಿ ಸಚಿವ ಎಸ್. ಜೈಪಾಲ್ ರೆಡ್ಡಿಯವರದ್ದು 3.3 ಲಕ್ಷ, ಸಾಮಾಜಿಕ ಕಾನೂನು ಸಚಿವ ಮುಕುಲ್ ವಾಸ್ನಿಕ್ 3.3 ಲಕ್ಷ, ಪುನರ್ ನವೀಕರಿಸಬಹುದಾದ ಇಂಧನ ಸಚಿವ ಫಾರೂಕ್ ಅಬ್ದುಲ್ಲಾ 6.5 ಲಕ್ಷ ರೂಪಾಯಿ ಮೌಲ್ಯದ ಆಸ್ತಿಗಳನ್ನು ಹೊಂದಿದ್ದಾರಂತೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹಿರಿಯ ಪುತ್ರ, ರಾಸಾಯನಿಕ ಸಚಿವ ಎಂ.ಕೆ. ಅಳಗಿರಿ ಯವರ ಒಟ್ಟು ಆಸ್ತಿ 9 ಕೋಟಿ ರೂಪಾಯಿಗಳದ್ದು.
ಗೃಹಸಚಿವ ಪಿ. ಚಿದಂಬರ ಅವರ ಆಸ್ತಿ ಮೌಲ್ಯ 10.5 ಕೋಟಿ ರೂಪಾಯಿ. ಅವರ ಪತ್ನಿ ನಳಿನಿ ಚಿದಂಬರಂ 8.5 ಕೋಟಿ ಆಸ್ತಿ ಹೊಂದಿದ್ದಾರೆ. ಸಚಿವರಿಗೆ ಕರ್ನಾಟಕದ ಕೊಡಗಿನಲ್ಲಿ 28.9 ಲಕ್ಷ ರೂಪಾಯಿ ಮೌಲ್ಯದ ಕಾಫಿ ಎಸ್ಟೇಟ್ ಇದೆ. ಚಿದಂಬರಂ ಅವರಲ್ಲಿರುವ ಮೊಬೈಲ್ ಫೋನ್ ಬೆಲೆ 38,000 ರೂಪಾಯಿಗಳದ್ದಾದರೆ, ಅವರ ಪತ್ನಿಯದ್ದು 60,000 ರೂಪಾಯಿಗಳದ್ದು.
ವಿವಾದಕ್ಕೊಳಗಾಗಿದ್ದ ಮಾಜಿ ಸಚಿವ ಶಶಿ ತರೂರ್ ಅವರ ನ್ಯೂಯಾರ್ಕ್‌ನಲ್ಲಿನ ಫ್ಲಾಟ್ ಸೇರಿದಂತೆ ಒಟ್ಟು 27 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದಾರೆ.
ಅದೇ ಹೊತ್ತಿಗೆ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರ ಚರ ಮತ್ತು ಸ್ಥಿರಾಸ್ತಿಯಿರುವುದು ಒಟ್ಟು ಕೇವಲ 60 ಲಕ್ಷ ರೂಪಾಯಿಗಳಂತೆ!...................