ಒತ್ತಡಕ್ಕೆ ಮಣಿದ ಕೇಂದ್ರ : ಜೂನ್‌ನಿಂದ ಜಾತಿಗಣತಿ |
ಪ್ರಕಟಿಸಿದ ದಿನಾಂಕ : 2010-09-10
ಮುಂದಿನ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮನೆ ಮನೆಗೆ ತೆರಳಿ ಪ್ರತ್ಯೇಕವಾಗಿ ಜಾತಿವಾರು ಗಣತಿ ನಡೆಸಲು ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
ನವದೆಹಲಿ (ಪಿಟಿಐ): ರಾಜಕೀಯ ವಲಯದಲ್ಲಿ ಹಾಗೂ ಸಾರ್ವಜನಿಕವಾಗಿ ಪರ-ವಿರೋಧದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಜಾತಿವಾರು ಜನಗಣತಿಗೆ ಕೇಂದ್ರ ಸರ್ಕಾರವು ಕೊನೆಗೂ ಒಪ್ಪಿಗೆ ನೀಡಿದೆ.
ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ಒತ್ತಡಕ್ಕೆ ಮಣಿದಿರುವ ಕೇಂದ್ರವು, ಮುಂದಿನ ವರ್ಷದಿಂದ ಜನಗಣತಿ ಜತೆಗೆ ಪ್ರತ್ಯೇಕವಾಗಿ ಜಾತಿವಾರು ಗಣತಿ ನಡೆಸಲು ನಿರ್ಧರಿಸಿದೆ.
ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ಈ ವಿಚಾರದ ಬಗ್ಗೆ ಈಗಾಗಲೇ ಸರ್ಕಾರದೊಳಗೆ ಅನೇಕ ಸುತ್ತಿನ ಚರ್ಚೆಗಳು ನಡೆದಿವೆ.
ಮುಂದಿನ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮನೆ ಮನೆಗೆ ತೆರಳಿ ಪ್ರತ್ಯೇಕವಾಗಿ ಜಾತಿವಾರು ಗಣತಿ ನಡೆಸಲು ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
‘ಜನಗಣತಿ ಸಮೀಕ್ಷೆ ಬಳಿಕ ಜಾತಿವಾರು ಗಣತಿಯನ್ನು ಹಂತಹಂತವಾಗಿ ಜಾರಿ ಮಾಡಲಾಗುತ್ತದೆ. ಇದರಲ್ಲಿ ಜೈವಿಕ ವಂಶಾವಳಿ (ಬಯೊಮೆಟ್ರಿಕ್)ಚಿತ್ರಣ ಹಾಗೂ ತಲೆ ಲೆಕ್ಕವೂ ಅಡಕವಾಗಿರುತ್ತದೆ.
ಈ ಕಾರ್ಯವು ಮುಂದಿನ ವರ್ಷ ಮಾರ್ಚ್ ಒಳಗೆ ಪೂರ್ಣಗೊಳ್ಳಲಿದೆ’ ಎಂದು ಸಂಪುಟ ಸಭೆ ಬಳಿಕ ಗೃಹ ಸಚಿವ ಪಿ.ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು.
ಜಾತಿವಾರು ಗಣತಿ ವಿಷಯ ಕುರಿತ ಸಚಿವರ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೇ ಈ ವಿಷಯದಲ್ಲಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಜತೆ ಸಮಾಲೋಚನೆಯನ್ನೂ ನಡೆಸಿದ್ದರು.
ಜಾತಿವಾರು ಗಣತಿ ವಿಷಯವು ಸಂಸತ್ ಕಲಾಪವನ್ನೂ ನುಂಗಿ ಹಾಕಿತ್ತು. ಈ ಪ್ರಸ್ತಾವವನ್ನು ಬೆಂಬಲಿಸಿ ಆರ್‌ಜೆಡಿ, ಸಮಾಜವಾದಿ ಪಕ್ಷ ಹಾಗೂ ಜೆ.ಡಿ (ಯು) ಪಕ್ಷಗಳ ಸದಸ್ಯರು ಬಜೆಟ್ ಅಧಿವೇಶನ ಹಾಗೂ ಮುಂಗಾರು ಅಧಿವೇಶನದಲ್ಲಿ ಕಲಾಪಕ್ಕೆ ಅಡ್ಡಿಪಡಿಸಿದ್ದರು. ಈ ಪ್ರಸ್ತಾವಕ್ಕೆ ಬಿಜೆಪಿ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದರೂ ಕೊನೆಗೆ ಬೆಂಬಲಿಸಿತು.
ಈ ವಿಷಯದಲ್ಲಿ ಕಾಂಗ್ರೆಸ್ ಮಾತ್ರವಲ್ಲ, ಕೇಂದ್ರ ಸಂಪುಟದಲ್ಲೂ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಎಲ್ಲಾ ನಿಟ್ಟಿನಲ್ಲಿಯೂ ಪರಿಶೀಲನೆ ನಡೆಸಿ ಒಂದು ಒಮ್ಮತ ಮೂಡಿಸುವ ಸಲುವಾಗಿ ಸರ್ಕಾರವು ಸಚಿವರ ಸಮಿತಿಯೊಂದನ್ನು ರಚಿಸಿತ್ತು.
‘ಈ ಯೋಜನೆಗೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ. ಹಾಗಾಗಿ ಇಲ್ಲಿ ಅನುಮಾನದ ಪ್ರಶ್ನೆಯೇ ಇಲ್ಲ’ ಎಂದು ಇತ್ತೀಚೆಗಷ್ಟೇ ಪ್ರಣವ್ ಮುಖರ್ಜಿ ಲೋಕಸಭೆಯಲ್ಲಿ ಹೇಳಿದ್ದರು.
ಸೂಕ್ತ ಕಾನೂನು: ಜಾತಿ ಕುರಿತ ಮಾಹಿತಿ ಕಲೆಹಾಕಲು ಕಾನೂನು ಸಚಿವಾಲಯವನ್ನು ಸಂಪರ್ಕಿಸಿ ಸೂಕ್ತ ಕಾನೂನನ್ನು ರಚಿಸಲಾಗುತ್ತದೆ. ಜಾತಿವಾರು ಗಣತಿಗೆ ಹೆಚ್ಚುವರಿ ವೆಚ್ಚ ಆಗಲಿದೆ. ಇದನ್ನು ಪ್ರತ್ಯೇಕ ಸಭೆಯೊಂದರಲ್ಲಿ ಅಂದಾಜು ಮಾಡಲಾಗುತ್ತದೆ ಎಂದು ಚಿದಂಬರಂ ವಿವರಿಸಿದರು.
ಜಾತಿಗಣತಿಗೆ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತರು ಕ್ಷೇತ್ರ ಕಾರ್ಯ ಕೈಗೊಳ್ಳಲಿದ್ದಾರೆ. ಅಲ್ಲದೇ, ಗಣತಿ ಕಾರ್ಯ ಪೂರ್ಣಗೊಂಡ ಬಳಿಕ ಜಾತಿ/ ಬುಡಕಟ್ಟು ವರ್ಗೀಕರಣಕ್ಕೆ ಕೇಂದ್ರ ಸರ್ಕಾರವು ತಜ್ಞರ ಸಮಿತಿ ರಚಿಸಲಿದೆ.
ಜಾತಿವಾರು ಜನಗಣತಿಯು 1931ರಲ್ಲಿ ಆಗಿತ್ತು. ಸ್ವಾತಂತ್ರ್ಯ ನಂತರ ನೀತಿ-ನಿರೂಪಣೆ ವಿಷಯವೆಂದು ಪರಿಗಣಿಸಿ ಅದನ್ನು ಕೈಬಿಡಲಾಗಿತ್ತು.
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|