ಬಡವ - ಶ್ರೀಮಂತರೆನ್ನುವ ಭೇದವಿಲ್ಲದೆ ಎಲ್ಲರೂ ಒಂದು ತಿಂಗಳ ಕಠಿಣ ವ್ರತಾಚರಣೆ ನಡೆಸಿ ಹಸಿವಿನ ತೀವ್ರತೆಯ ಬಗ್ಗೆ ಅರಿತು ವಿಶ್ವದ ಮುಸಲ್ಮಾನರೆಲ್ಲ ಸಮಾನರು ಎಂದು ಸಾರುವುದು. ಉಪವಾಸ ಆಚರಣೆಯಿಂದ ಬಡತನದ ಹಸಿವಿನ ಬೇಗೆಯ ಬಗ್ಗೆ ಅರಿವು ಮೂಡಿಸಿ ಬಡವರಿಗೆ ಶ್ರೀಮಂತರು ದಾನ-ಧರ್ಮಗಳನ್ನು ಮಾಡುವಂತೆ ಪ್ರೇರಿಸುವುದು ಹಬ್ಬದ ಆಚರಣೆಯ ಉದ್ದೇಶ ಗಳಲ್ಲಿ ಒಂದು.
ಇಸ್ಲಾಂ ಧರ್ಮವು ಸಂಪತ್ತಿನ ಕೇಂದ್ರೀಕರಣವನ್ನು ವಿರೋಧಿಸುತ್ತದೆ ಮತ್ತು ಶ್ರೀಮಂತನು ಬಡವರಿಗೆ ದಾನ-ಧರ್ಮಗಳನ್ನು ಮಾಡುವಂತೆ ಪ್ರೇರಿಸುತ್ತದೆ. ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಇಸ್ಲಾಂ ಧರ್ಮದಲ್ಲಿ ಕಡ್ಡಾಯವಾಗಿದೆ. ಮುಸ್ಲಿಮರು ಆಚರಿಸುವ ಎರಡೂ ಹಬ್ಬಗಳು ದಾನ ಮಾಡುವುದನ್ನು ಪ್ರೋತ್ಸಾಹಿಸುತ್ತವೆೆ. ಈದ್-ಉಲ್-ಫಿತರ್ ಸಂದಭೋìಚಿತವಾಗಿ "ಧಾನ್ಯ' ದಾನ ಮಾಡು ಎಂದು ಹೇಳುತ್ತದೆ. ಇದು ಪ್ರತಿಯೊಬ್ಬ ಮುಸಲ್ಮಾನನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದ ಉದ್ದೇಶವಾಗಿದೆ.
ಪ್ರತಿಯೊಬ್ಬ ಮುಸ್ಲಿàಮನು ತನ್ನ ಈದ್ ದಿನದ ಹಗಲಿನ ಮತ್ತು ರಾತ್ರಿಯ ಖರ್ಚಿಗೆ ಬೇಕಾದಷ್ಟು ಸಂಪತ್ತು ಉಳಿಸಿ ಬೇರೇನಾದರೂ ಉಳಿದಲ್ಲಿ ಕಡ್ಡಾಯ ವಾಗಿ ದಾನ ನೀಡಬೇಕು. ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನ ಪಡೆಯಲು ಅರ್ಹ ರಾಗಿರುತ್ತಾರೆ. ಆದರೆ ಈ ದಾನ ನೀಡುವುದು ಎಷ್ಟರ ವರೆಗೆ ಕಡ್ಡಾಯ ವಾಗಿರುತ್ತದೆ ಅಂದರೆ, ಮನೆಯಲ್ಲಿ ದಾನ ನೀಡಲು ಹಣ, ಧಾನ್ಯ ಇತ್ಯಾದಿಗಳು ಇಲ್ಲದಿದ್ದರೂ ಪಾತ್ರೆ ಸಾಮಾನುಗಳು ಧಾರಾಳವಾಗಿದ್ದರೆ ಅವು ಗಳನ್ನು ಮಾರಿಯಾದರೂ ದಾನ ನೀಡಬೇಕಾಗಿರುತ್ತದೆ. ಇದು ದಾನಕ್ಕೆ ಮುಸ್ಲಿಮರು ನೀಡಿರುವ ಮಹತ್ವವನ್ನು ಸೂಚಿಸುತ್ತದೆ.
ದೇಹ ಮತ್ತು ಆತ್ಮ ಶುದ್ಧಿಯಿಂದ ಅಲ್ಲಾನಿಗೆ ಹತ್ತಿರವಾಗುವುದು. ಮಾನಸಿಕವಾಗಿ ತಮ್ಮನ್ನು ತಾವು ನಿಗ್ರಹಿಸಿಕೊಂಡು ಪರಿಶುದ್ಧ ಮನಸ್ಸಿನ ಪರಿಪೂರ್ಣ ವ್ಯಕ್ತಿಯಾಗುವುದು ಪವಿತ್ರ ರಂಝಾನ್ ಮಾಸಾಚರಣೆ ಯ ಹಿಂದಿನ ಮೂಲ ಉದ್ದೇಶ ವಾಗಿದೆ. ಪ್ರತಿಯೊಬ್ಬ ಮುಸಲ್ಮಾನನು ರಂಝಾನ್ ಸಂದರ್ಭ ದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗೆ ಊಟ, ನೀರು, ಕಾಫಿ, ಚಾ, ಫಲಹಾರ ಸೇವನೆ, ಧೂಮಪಾನ, ಕಾಮಕ್ರೀಡೆ ಇತ್ಯಾದಿ ಗಳನ್ನು ಮಾಡಬಾರದು. ಸಿಟ್ಟು, ಕೋಪ-ತಾಪ, ದರ್ಪ, ದ್ವೇಷ, ಅಸೂಯೆ, ಮೋಸ, ವಂಚನೆಗಳಿಂದ ದೂರವಿರಬೇಕು.





ಪ್ರಮುಖ ಆಚರಣೆ
ಆದಷ್ಟು ಮನಸ್ಸನ್ನು ನಿಗ್ರಹಿಸಿ ಏಕಾಗ್ರತೆ ಮತ್ತು ಶಾಂತಚಿತ್ತವಾಗಿ ಕುರಾನ್ ಪಠಣ ಮಾಡು ವುದು. ಒಳ್ಳೆಯ ಆಲೋಚನೆಗಳತ್ತ ಮನಸ್ಸನ್ನು ಕೇಂದ್ರೀಕರಿಸಿ, ಬಡವರಿಗೆ ಸಹಾಯ ಹಸ್ತ ಚಾಚುತ್ತ ಸಮಾಜಕ್ಕೆ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡುವುದು. ಯಾವುದೇ ಸ್ವಾರ್ಥ ವಿಲ್ಲದ ಸೇವೆ ಭಗವಂತನಿಗೆ ಇಷ್ಟ. ಸಾಧ್ಯವಾದಷ್ಟು ಮಟ್ಟಿಗೆ ಅದನ್ನು ನೆರವೇರಿಸುವುದು. ತಮ್ಮ ಕೈಲಾದಷ್ಟು ಬಂಧು ಬಳಗ, ಸ್ನೇಹಿತರನ್ನು ಭೇಟಿ ಮಾಡಿ ಶುಭ ಹಾರೈಸುವುದು. ರಂಝಾನ್ ಉಪವಾಸದ ಸಂದರ್ಭದಲ್ಲಿ ಯಾವುದೇ ವಿಧದ ಮನೋರಂಜನಾ ಚಟುವಟಿಕೆಗಳಿಗೆ ಅವಕಾಶ ವಿಲ್ಲ. ಸಾರ್ವಜನಿಕವಾಗಿ ಯಾವುದೇ ರೀತಿಯ ಸಂಗೀತಗಳನ್ನು ಹಾಕಬಾರದು ಮತ್ತು ಕೇಳಬಾರದು. ಕಳ್ಳತನ, ಮೋಸ, ದ್ರೋಹ, ರೋಷಕ್ಕೆ ಕಡಿವಾಣ ಹಾಕಬೇಕು. ತಾವು ಉಳಿಸಿದ ಹಣದಲ್ಲಿ ಒಂದು ಸಣ್ಣ ಭಾಗವನ್ನಾದರೂ ಬಡವರಿಗೆ ಸಹಾಯಾರ್ಥವಾಗಿ ನೀಡಬೇಕು. ರಂಝಾನ್ ಮಾಸದಲ್ಲಿ ಕನಿಷ್ಠನಕ್ಕೆ ಐದು ಬಾರಿಯಾದರೂ ನಮಾಜ್ ಮಾಡಬೇಕು. ಮಸೀದಿಗೆ ಹೋಗಿ ನಮಾಜ್ ಮಾಡಲು ಸಾಧ್ಯವಾಗದ್ದಿರೆ, ತಮಗೆ ಅನುಕೂಲವಾದ ಸ್ಥಳದಲ್ಲಿ ಮಾಡಬಹುದು.




ಖರ್ಜೂರ ಸೇವನೆಗೆ ಮಹತ್ವ
ರಂಝಾನ್ ಉಪವಾಸದ ಸಂದರ್ಭದಲ್ಲಿ ಖರ್ಜೂರ ಸೇವನೆಗೆ ಬಹಳ ಮಹತ್ವವಿದೆ. ಉಪವಾಸ ವ್ರತ ಕೈಗೊಂಡ ಮುಸಲ್ಮಾನರು ಉಪವಾಸ ಬಿಡಲು ಖರ್ಜೂರವನ್ನೇ ಬಳಸುವುದು ಧಾರ್ಮಿಕ ವಿಧಿಯ ಭಾಗಗಳಲ್ಲೊಂದು. ಆದರೆ ಅಷ್ಟೇ ವೈಜ್ಞಾನಿಕ ಹಿನ್ನೆಲೆಯೂ ಇದೆ ಎಂಬುದು ಗಮನಾರ್ಹ. ಮರಳುಗಾಡಿನಲ್ಲಿ ಬೆಳೆಯುವ ಈ ಸ್ವಾದಿಷ್ಟ ಹಣ್ಣು ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವುದೇ ಇದರ ವೈಶಿಷ್ಟ್ಯವಾಗಿದೆ. ಮನುಷ್ಯ ಉಪವಾಸದ ಸಂದರ್ಭದಲ್ಲಿ ದೇಹದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗುತ್ತದೆ. ಉಪವಾಸ ಬಿಡುವ ಹೊತ್ತಿಗೆ ಖರ್ಜೂರವನ್ನು ಬಳಸುವುದರಿಂದ ನರನಾಡಿಗಳ ಚಟುವಟಿಕೆಗಳು ಉತ್ತೇಜನಗೊಂಡು, ಸಕ್ಕರೆಯ ಅಂಶಗಳನ್ನು ಸಮತೋಲನಕ್ಕೆ ತರುತ್ತದೆ. ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿರುವ ಖಜೂìರ ದೇಹದ ಜೀರ್ಣ ಶಕ್ತಿಯನ್ನು ವೃದ್ಧಿಸುತ್ತದೆ. ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಖರ್ಜೂರ ಹಲವು ಪ್ರಮುಖ ರೋಗಗಳಿಗೆ ರಾಮಬಾಣವೂ ಹೌದು.
ಒಣ ಖರ್ಜೂರಗಳೂ ಅತ್ಯಂತ ಸ್ವಾದಿಷ್ಟಕರವಾಗಿದ್ದು, ರಂಝಾನ್ ಇಫ್ತಾರ್ ತಿನಿಸಿನಲ್ಲಿ ಇದಕ್ಕೆ ಅಗ್ರಗಣ್ಯ ಸ್ಥಾನವಿದೆ. ಕ್ಯಾಲ್ಸಿಯಂ, ಸಲ–ರ್, ಕಬ್ಬಿಣ, ಪೊಟಾಷಿಯಂ, ಮ್ಯಾಂಗನೀಸ್ ಮುಂತಾದ ಲವಣಾಂಶಗಳನ್ನೊಳಗೊಂಡಿರುವ ಖರ್ಜೂರ ಹಣ್ಣಿನಲ್ಲಿ ನೈಸರ್ಗಿಕ ಗ್ಲುಕೋಸ್ ಅಂಶಗಳು ಧಾರಾಳವಾಗಿವೆ. ಹಸಿವಿನಲ್ಲಿರುವವರಿಗೆ ಸಿಹಿಯ ನೈಜ ಅನುಭವವನ್ನು ನೀಡಬಲ್ಲ ಖರ್ಜೂರದಲ್ಲಿ 20 ಸ್ತರದ ಆಮ್ಲಗಳಿದ್ದು, ಜೀರ್ಣಶಕ್ತಿಗೆ ಪ್ರಚೋದನೆಯನ್ನು ನೀಡುತ್ತವೆ.
ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್-ಉಲ್-ಫಿತರ್ ಹಬ್ಬವು ಶುಭವನ್ನು ಉಂಟುಮಾಡಲಿ. ಇನ್ನು ಮುಂದೆಯೂ ಹೆಚ್ಚಿನ ಪ್ರಮಾಣದಲ್ಲಿ ದಾನ-ಧರ್ಮಗಳನ್ನು ಮಾಡುವ ಶಕ್ತಿ ಸರ್ವಶಕ್ತನಾದ ಅಲ್ಲಾನು ನೀಡಲಿ.