ನವದೆಹಲಿ : ಜಾತಿಗಣತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ |
ಪ್ರಕಟಿಸಿದ ದಿನಾಂಕ : 2010-09-10
ನವದೆಹಲಿ: ಅಂತೂ ಇಂತೂ ಜಾತಿಗಣತಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಾತಿಗಣತಿ ನಡೆಸಲು ತೀರ್ಮಾನಿಸಲಾಗಿದೆ.
ಈ ಮೂಲಕ ರಾಜಕೀಯ ಪಕ್ಷಗಳ ಬಹು ದಿನಗಳ ಬೇಡಿಕೆಗೆ ಮನ್ನಣೆ ಸಿಕ್ಕಂತಾಗಿದೆ.
ಜೂನ್‌ನಲ್ಲಿ ಆರಂಭ: ೨೦೧೧ರ ಫೆಬ್ರವರಿಯಲ್ಲಿ ಆರಂಭವಾಗಲಿರುವ ಜನಗಣತಿ ಜೊತೆಗೇ ಜಾತಿಗಣತಿ ನಡೆಸಲಾಗುವುದಿಲ್ಲ ಎಂದು ಸಂಪುಟ ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಚಿದಂಬರಂ ತಿಳಿಸಿದ್ದಾರೆ. ಜೂನ್‌ನಿಂದ ಆರಂಭವಾಗಿ ಸೆಪ್ಟೆಂಬರ್‌ನಲ್ಲಿ ಮುಕ್ತಾಯ ಕಾಣಲಿದೆ ಎಂದು ಹೇಳಿದ್ದಾರೆ.
ಪ್ರತಿ ಮನೆಗೂ ಹೋಗಿ ಪ್ರತಿಯೊಬ್ಬರನ್ನು ಎಣಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಣಬ್ ನೇತೃತ್ವದ ಸಚಿವರ ಸಮಿತಿ ಸಭೆ ಸೇರಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ ಎಂದು ಚಿದಂಬರಂ ತಿಳಿಸಿದ್ದಾರೆ.
ಕಾನೂನು ಸಚಿವಾಲಯದ ಅಭಿಪ್ರಾಯದ ಮೇರೆಗೆ ಜಾತಿಗಳ ಬಗ್ಗೆ ಯಾವ ರೀತಿ ಮಾಹಿತಿ ಸಂಗ್ರಹಿಸಲಾಗುವುದು ಎಂಬ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ನೋಂದಣಿ ಕಾರ್ಯದರ್ಶಿ ಹಾಗೂ ಜನಗಣತಿ ಆಯುಕ್ತರು ಜಾತಿಗಣತಿ ಬಗ್ಗೆ ಕ್ಷೇತ್ರವಾರು ಪರಿ ಶೀಲನೆ ನಡೆಸಲಿದ್ದಾರೆ.
ಸರ್ವ ಶಿಕ್ಷಣ ಅಭಿಯಾನ ಪುನರ್‌ಪರಿಶೀಲನೆ
ಶಿಕ್ಷಣ ಹಕ್ಕು ಕಾಯ್ದೆಯನ್ನು ಸುಸೂತ್ರವಾಗಿ ಜಾರಿ ಮಾಡುವ ಸಂಬಂಧ ಸರ್ವ ಶಿಕ್ಷಣ ಅಭಿಯಾನ ದಲ್ಲಿನ ನಿಯಮಾವಳಿಗಳನ್ನು ಪುನರ್‌ಪರಿಶೀಲನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಸರ್ವ ಶಿಕ್ಷಣ ಅಭಿಯಾನವು ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರೀಕರಣ ಮಾಡುವ ಯೋಜನೆಯಾ ಗಿದ್ದು ಕಡ್ಡಾಯ ಶಿಕ್ಷಣ ಹಕ್ಕನ್ನು ಜಾರಿ ಮಾಡುವ ಪ್ರಮುಖ ಸಾಧನವಾಗಿದೆ.
ಹೀಗಾಗಿ ಎಸ್‌ಎಸ್‌ಎ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ತರಲು ಕೇಂದ್ರ ಆರ್ಥಿಕ ವ್ಯವಹಾ ರಗಳ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ. ಅಲ್ಲದೆ ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಎಸ್‌ಎಸ್‌ಎ-ಆರ್‌ಟಿಇಗೆ ಬೇಕಾಗಿರುವ ಹಣಕಾಸನ್ನು ಕೇಂದ್ರ ಹಾಗೂ ರಾಜ್ಯಗಳ ನಡುವೆ ಮರು ಹಂಚಿಕೆಗೆ ಒಪ್ಪಿಗೆ ನೀಡಿದೆ. ಇದರಂತೆ ೬೫:೩೫ ಹಾಗೂ ಈಶಾನ್ಯ ರಾಜ್ಯಗಳಲ್ಲಿ ೯೦:೧೦ ರಷ್ಟು ಹಂಚಿಕೆ ಮಾಡಲಾಗುವುದು.
ವರದಿಯ ವಿವರಗಳು |
 |
ಕೃಪೆ : ಕನ್ನಡಪ್ರಭ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|