ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ |
ಪ್ರಕಟಿಸಿದ ದಿನಾಂಕ : 2010-09-10
ಬೆಂಗಳೂರು : ಅಕ್ರಮ ಗಣಿಗಾರಿಕೆ ನಿಯಂತ್ರಿಸುವ ಸಂಪೂರ್ಣ ಹೊಣೆಗಾರಿಕೆ ಕೇಂದ್ರ ಸರ್ಕಾರದಾಗಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡುವುದಷ್ಟೆ ನಮ್ಮ ಕೆಲಸ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಗುರುವಾರ ಸ್ಪಷ್ಟನೆ ನೀಡಿತು.
ಅದಿರು ರಫ್ತು ಮತ್ತು ಸಾಗಾಣೆ ನಿಯಂತ್ರಿಸಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ವಿ.ಎಸ್. ಲಾಡ್ ಅಂಡ್ ಸನ್ಸ್ , ಸೇಸಾ ಗೋವಾ ಸೇರಿದಂತೆ 21 ಕಂಪೆನಿಗಳು ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾ. ಜೆ.ಎಸ್. ಖೇಹರ್ ಮತ್ತು ನ್ಯಾ. ಅಬ್ದುಲ್ ನಜೀರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಅಶೋಕ್ ಹಾರ್ನಳ್ಳಿ ಗುರುವಾರ ವಾದ ಮಂಡಿಸಿದರು.
ಗಣಿಗಾರಿಕೆಯಿಂದ ಕೇಂದ್ರ ಸರ್ಕಾರವೇ ಹೆಚ್ಚಿನ ಲಾಭ ಪಡೆಯುತ್ತಿದೆ. ಜತೆಗೆ ಗಣಿಗಾರಿಕೆಗೆ ಪರವಾನಗಿ ನೀಡುವ ಸಂಪೂರ್ಣ ಅಧಿಕಾರ ಕೇಂದ್ರ ಹೊಂದಿದೆ. ರಾಜ್ಯಗಳು ಕಲ್ಲು ಸೇರಿದಂತೆ ಸಣ್ಣಪುಟ್ಟ ಗಣಿಗಾರಿಕೆಗೆ ರಾಜ್ಯ ಪರವಾನಗಿ ನೀಡುತ್ತದೆ. ಹೆಚ್ಚಿನ ರಾಜಧನ ಸಂದಾಯವಾಗುವುದು ಕೇಂದ್ರಕ್ಕೆ. ಈಗಿರುವಾಗ ಅದಿರು ಗಣಿಗಾರಿಕೆ ನಿಯಂತ್ರಣ ಕುರಿತು ರಾಜ್ಯದ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ವಾದಿಸಿದರು.
ಆದರೂ ಅಕ್ರಮ ಗಣಿಗಾರಿಕೆ ನಿಯಂತ್ರಿಸಲು ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೇಂದ್ರವೇ ರೂಪಿಸಿರುವ ಎಂಎಂಡಿಆರ್ ಕಾಯ್ದೆ ಸೆಕ್ಷನ್ 23(ಸಿ) ಬಳಕೆ ಮಾಡಿಕೊಂಡು, ಅದಿರು ಸಾಗಾಣೆ ಮೇಲೆ ನಿಯಂತ್ರಣ ಹೇರಲಾಗಿದೆ ಎಂದು ಸಮರ್ಥಿಸಿಕೊಂಡರು.
ಹೆಚ್ಚಿನ ಲಾಭ ಪಡೆಯುತ್ತಿರುವುದು ಕೇಂದ್ರ ಸರ್ಕಾರ. ಆದರೆ ಭಾರಿ ನಷ್ಟವಾಗುತ್ತಿರುವುದು ರಾಜ್ಯಕ್ಕೆ. ಅದಿರು ಗಣಿಗಾರಿಕೆ ಹಾಗೂ ಸಾಗಾಣೆಯಿಂದ ರಾಜ್ಯದ ರಸ್ತೆಗಳು ಹಾಳಾಗುತ್ತಿವೆ. ಅಂತರ್ಜಲ ನಶಿಸುತ್ತಿದೆ. ಅರಣ್ಯ ಭೂಮಿ ನಾಶವಾಗುತ್ತಿದೆ. ಈಗಿರುವಾಗ ಯಾರದೋ ಲಾಭಕ್ಕೆ ರಾಜ್ಯದ ಖನಿಜ ಸಂಪತ್ತನ್ನು ಹಾಳುಮಾಡುವುದು ಸರಿಯಲ್ಲ. ರಾಜ್ಯದ ಸಂಪತ್ತನ್ನು ರಕ್ಷಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ ಎಂದರು.
ದೇಶದೊಳಗಿರುವ ಕಾರ್ಖಾನೆಗಳಿಗೆ ಅದಿರು ಸಾಗಿಸಲು ಸರ್ಕಾರದ ಅಭ್ಯಂತರವಿಲ್ಲ. ಆದರೆ ವಿದೇಶಕ್ಕೆ ರಫ್ತು ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ . ಹೊರರಾಜ್ಯಕ್ಕೆ ಅದಿರು ಸಾಗಿಸುವ ಗಣಿ ಮಾಲೀಕರು ರಫ್ತು ಉದ್ದೇಶದಿಂದ ಅದಿರು ಸಾಗಿಸುತ್ತಿಲ್ಲ ಎಂದು ಸರ್ಕಾರಕ್ಕೆ ಪ್ರಮಾಣ ಪತ್ರ ನೀಡಬೇಕು. ಹೊರರಾಜ್ಯಕ್ಕೆ ಸಾಗಿಸಿದ ಅದಿರು ರಫ್ಡಾದರೆ ಗಣಿಗಾರಿಕೆ ಪರವಾನಗಿಯನ್ನೇ ರದ್ದು ಮಾಡಬಹುದೆಂದು ಗಣಿ ಮಾಲೀಕರು ಒಪ್ಪಿಗೆ ಪತ್ರ ನೀಡಿದರೆ ದೇಶಿಯ ಸಾಗಾಣಿಕೆಗೆ ಅನುಮತಿ ನೀಡಲು ಸಿದ್ದವಿರುವುದಾಗಿ ಹೇಳಿದರು.
ರಾಜ್ಯದ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅದಿರು ಗಣಿಗಾರಿಕೆ ನಡೆಯುತ್ತಿದೆ. 172 ಕಂಪೆನಿಗಳು ಪರವಾನಗಿ ಪಡೆದಿದ್ದರೂ, 104 ಕಂಪೆನಿಗಳು ಮಾತ್ರ ಚಾಲನೆಯಲ್ಲಿವೆ. ಇವುಗಳ ಪೈಕಿ 56 ಕಂಪೆನಿಗಳು ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಸಾಬೀತಾಗಿದೆ. ಇದರ ಜತೆಗೆ ಉಳಿದ ಕಂಪೆನಿಗಳು ಒಂದಲ್ಲಾ ಒಂದು ರೀತಿಯಲ್ಲಿ ನಿಯಮ ಉಲ್ಲಂಘಿಸಿದ್ದು, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಈಗಿರುವಾಗ ಯಾವ ಕಂಪೆನಿಯೂ ಸಾಚ ಅನ್ನಲು ಸಾಧ್ಯವಿಲ್ಲ ಎಂದು ಅಡ್ವೊàಕೇಟ್ ಜನರಲ್ ತಿಳಿಸಿದರು.
ರಾಜ್ಯದಲ್ಲಿರುವ ಗಣಿಗಳ ನಿಜವಾದ ಮಾಲೀಕತ್ವ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ವಿಭಾಗೀಯ ಪೀಠ ನಿರ್ದೇಶನ ನೀಡಿ ವಿಚಾರಣೆಯನ್ನು ಸೆ. 16ಕ್ಕೆ ಮುಂದೂಡಿತು.
ಖನಿಜಕ್ಕೆ ಮಾಲೀಕರು ಯಾರು- ಹೈಕೋರ್ಟ್ ಪ್ರಶ್ನೆ ಪ್ರಜಾವಾಣಿ ಇಲ್ಲಿನ ಖನಿಜಗಳಿಗೆ ರಾಜ್ಯ ಸರ್ಕಾರವೇ ಮಾಲೀಕ. ಈ ಹಿನ್ನೆಲೆಯಲ್ಲಿ ಇಲ್ಲಿಂದ ಅದಿರಿನ ರಫ್ತಿಗೆ ನಿಷೇಧ ಮಾಡುವ ಅಧಿಕಾರ ರಾಜ್ಯಕ್ಕೆ ಇದೆ ಎಂದರು.
ಬೆಂಗಳೂರು: ರಾಜ್ಯದಲ್ಲಿನ ಖನಿಜಗಳಿಗೆ ಮಾಲೀಕರು ರಾಜ್ಯ ಸರ್ಕಾರವೇ ಅಥವಾ ಕೇಂದ್ರವೇ ಎಂಬ ಬಗ್ಗೆ ಹೈಕೋರ್ಟ್ ಸರ್ಕಾರದಿಂದ ಗುರುವಾರ ಮಾಹಿತಿ ಬಯಸಿತು.ಅದಿರು ರಫ್ತು ನಿಷೇಧ ಮಾಡಿ ಹೊರಡಿಸಲಾದ ಆದೇಶಗಳನ್ನು ಪ್ರಶ್ನಿಸಿ ಗಣಿ ಮಾಲೀಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಮಾಹಿತಿಯನ್ನು ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ ಅವರಿಂದ ಬಯಸಿತು.
ಇಲ್ಲಿನ ಖನಿಜಗಳಿಗೆ ರಾಜ್ಯ ಸರ್ಕಾರವೇ ಮಾಲೀಕ. ಈ ಹಿನ್ನೆಲೆಯಲ್ಲಿ ಇಲ್ಲಿಂದ ಅದಿರಿನ ರಫ್ತಿಗೆ ನಿಷೇಧ ಮಾಡುವ ಅಧಿಕಾರ ರಾಜ್ಯಕ್ಕೆ ಇದೆ ಎಂದರು. ಆದರೆ ಕೇಂದ್ರ ಸರ್ಕಾರದ ಪರ ವಕೀಲರು, ಈ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ ಎಂದರು.
ಅದಕ್ಕೆ ಪೀಠ, ಹಾರ್ನಹಳ್ಳಿ ಅವರನ್ನು ಉದ್ದೇಶಿಸಿ, ಅದಿರು ರಫ್ತು ಮಾಡಿದಾಗ ರಾಜಧನವನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುವಾಗ ರಾಜ್ಯ ಹೇಗೆ ಮಾಲೀಕತ್ವ ಪಡೆಯುತ್ತದೆ ಎಂದು ಪ್ರಶ್ನಿಸಿದರು. ಅದಕ್ಕೆ ಹಾರ್ನಹಳ್ಳಿ ಅವರು, ಸಂವಿಧಾನದ ಪ್ರಕಾರ ಅದಿರಿನ ಕುರಿತಾಗಿ ಕೇಂದ್ರಕ್ಕೆ ಕೆಲವೊಂದು ಅಧಿಕಾರ ವಿದೆ ಅಷ್ಟೇ. ಆದರೆ ರಾಜ್ಯದ ಅಧಿಕಾರವನ್ನು ಅದು ಪಡೆಯುವುದು ಸಲ್ಲದು ಎಂದರು. ಈ ಹಿನ್ನೆಲೆಯಲ್ಲಿ ನಿಜವಾದ ಮಾಲೀಕತ್ವದ ಬಗ್ಗೆ ಪೀಠ ಮಾಹಿತಿ ಬಯಸಿತು.
ಸರ್ಕಾರದ ಸಮರ್ಥನೆ: ಈ ಮಧ್ಯೆ, ವಾದ ಮಂಡಿಸಿದ ಹಾರ್ನಹಳ್ಳಿ ಅವರು ಅದಿರು ರಫ್ತು ನಿಷೇಧ ಮಾಡಿ ಸರ್ಕಾರ ಹೊರಡಿಸಿರುವ ಆದೇಶಗಳ ಬಗ್ಗೆ ಸಮರ್ಥಿಸಿಕೊಂಡರು. ದಿನನಿತ್ಯ 30ಸಾವಿರಕ್ಕೂ ಅಧಿಕ ಲಾರಿಗಳು ಅದಿರು ತುಂಬಿಸಿಕೊಂಡು ಹೋಗುತ್ತವೆ. ಇದರಿಂದ ರಸ್ತೆಗಳು ಹಾಳಾಗುತ್ತಿದೆ. ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಅರಣ್ಯ ಪ್ರದೇಶ ಗಳನ್ನು ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ. ಇವೆಲ್ಲವುಗಳನ್ನು ಗಮನಿಸಿ ಈ ಆದೇಶ ಹೊರಡಿಸಲಾಗಿದೆ ಎಂದರು.
ಅದಕ್ಕೆ ನ್ಯಾ.ಕೇಹರ್ ಅವರು, ಕೊಲೆ, ದರೋಡೆ ನಡೆದಿದೆ ಎಂದ ತಕ್ಷಣ ಎಲ್ಲರನ್ನೂ ಪೊಲೀಸರು ಬಂಧಿಸುತ್ತಾರೆಯೇ, ಇಲ್ಲವಲ್ಲ. ಹಾಗಿದ್ದರೆ ಯಾರು ಅಕ್ರಮ ಎಸಗಿದ್ದಾರೆಯೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ, ಅದನ್ನು ಬಿಟ್ಟು ಸಂಪೂರ್ಣವಾಗಿ ನಿಷೇಧಿಸುವುದು ಸರಿಯೇ’ ಎಂದು ಪ್ರಶ್ನಿಸಿದರು.
ಆಗ ಹಾರ್ನಹಳ್ಳಿ ಅವರು, ಅದಿರು ರಫ್ತು ಎಂಬ ಬಗ್ಗೆ ಯಾವುದೇ ಕಾಯ್ದೆಯಲ್ಲಿ ಉಲ್ಲೇಖವಿಲ್ಲ. ಕೇಂದ್ರ ಸರ್ಕಾರದ ನಿಯಮ ಕೂಡ ಇದನ್ನೇ ಹೇಳುತ್ತದೆ. ಈ ಹಿನ್ನೆಲೆಯಲ್ಲಿ ರಫ್ತು ನಿಷೇಧ ಮಾಡಿರುವುದನ್ನು ಪ್ರಶ್ನಿಸುವುದು ಸರಿಯಲ್ಲ ಎಂದರು.
ಅಂತೆಯೇ ಗಣಿಗಾರಿಕೆಯ ಬಗ್ಗೆ ಅಂಕಿ ಅಂಶ ನೀಡಿದ ಅವರು, ರಾಜ್ಯದಲ್ಲಿ ಸುಮಾರು 172 ಗಣಿ ಪ್ರದೇಶಗಳಿವೆ.ಗಣಿಗಾರಿಕೆಗೆ ಅನುಮತಿ ಕೋರಿರುವ 72 ಕಂಪೆನಿಗಳು ಸರ್ಕಾರದ ಆದೇಶಕ್ಕೆ ಕಾಯುತ್ತಿವೆ. 54 ಪ್ರಕರಣಗಳಲ್ಲಿ ಲೋಕಾಯುಕ್ತರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ ಎಂದರು. ವಿಚಾರಣೆಯನ್ನು ಮುಂದೂಡಲಾಯಿತು.
ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
ಬೆಂಗಳೂರು : ರಾಜ್ಯದಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಅಕ್ರಮ ಅದಿರು ಗಣಿಗಾರಿಕೆ ಮತ್ತು ಅದಿರು ಸಾಗಣೆ ತಡೆಯಲು ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಸದ್ಯವೇ ಸರ್ವಪಕ್ಷ ಸಭೆ ಕರೆದು ಸಲಹೆ,ಸೂಚನೆ ಪಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಇದೇ ತಿಂಗಳು 11 ರಿಂದ 15 ರವರೆಗೆ ಚೀನಾ ಪ್ರವಾಸ ಕೈಗೊಳ್ಳುವ ಮುಖ್ಯಮಂತ್ರಿಗಳು ಪ್ರವಾಸದಿಂದ ಮರಳಿದ ನಂತರ ಸರ್ವಪಕ್ಷ ನಾಯಕರ ಸಭೆ ಕರೆದು ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಾಣೆ ತಡೆಯಲು ಅವರಿಂದ ಸಲಹೆ ಪಡೆಯಲು ನಿರ್ಧರಿಸಿದ್ದಾರೆ. ಇದೇ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ತಡೆಗೆ ಸರ್ಕಾರ ಕೈಗೊಂಡ ಕ್ರಮಗಳನ್ನು ಮುಖ್ಯಮಂತ್ರಿಗಳು ಸಭೆಗೆ ವಿವರಿಸಲಿದ್ದಾರೆ.
ಆದರೆ ಅಕ್ರಮ ಗಣಿಗಾರಿಕೆ ವಿವಾದ ರಾಜಕೀಯ ಸ್ವರೂಪ ಪಡೆದಿದೆ. ಪ್ರತಿಪಕ್ಷಗಳು ಮುಖ್ಯಮಂತ್ರಿಗಳ ವಿರುದ್ಧ ವಾಗ್ಧಾಳಿ ನಡೆಸುತ್ತಿವೆ. ಮುಖ್ಯಮಂತ್ರಿಗಳು ಪ್ರತಿಪಕ್ಷಗಳ ಮುಖಂಡರ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆ ಯಶಸ್ವಿಯಾಗುವುದೇ, ಈ ಆಮಂತ್ರಣವನ್ನು ಪ್ರತಿಪಕ್ಷಗಳು ಸ್ವೀಕರಿಸುತ್ತವೆಯೇ? ಎನ್ನುವುದು ಕುತೂಹಲಕ್ಕೆ ಕಾರಣ ವಾಗಿದೆ.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|