ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ |
ಪ್ರಕಟಿಸಿದ ದಿನಾಂಕ : 2010-09-10
ರಾಮಚಂದ್ರಗೌಡರಿಗೆ ಹೈಕೋರ್ಟ್ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
ಬೆಂಗಳೂರು : ಹಾಸನ - ಮೈಸೂರು ವೈದ್ಯಕೀಯ ಕಾಲೇಜುಗಳ ಬೋಧಕೇತರ ಸಿಬ್ಬಂದಿ ನೇಮಕಾತಿ ಹಗರಣಕ್ಕೆ ಕುರಿತು ಸ್ಪಷ್ಟನೆ ನೀಡಿ ಸಚಿವ ರಾಮಚಂದ್ರಗೌಡ ಸಲ್ಲಿಸಿದ್ದ ಪ್ರಮಾಣ ಪತ್ರವನ್ನು ಹೈಕೋರ್ಟ್ ವಜಾ ಮಾಡಿ, ಸೆ. 13 ರಂದು ಸಮಗ್ರ ವರದಿ ಇರುವ ಪ್ರಮಾಣ ಪತ್ರ ಸಲ್ಲಿಕೆಗೆ ಆದೇಶಿಸಿದೆ.
ವೈದಕೀಯ ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಹಾಸನ ಆಡಳಿತ ಮಂಡಳಿ ನಿರ್ದೇಶಕರು ನೇಮಕಾತಿ ಪ್ರಕ್ರಿಯೆ ಹಾಗೂ ರದ್ದತಿ ಕುರಿತು ಸ್ಪಷ್ಟ ಮಾಹಿತಿ ಒದಗಿಸುವಂತೆ ಸೂಚಿಸಿ ಪೀಠ ನೋಟಿಸ್ ಜಾರಿ ಮಾಡಿತು.
ಬುಧವಾರ ರಾಮಚಂದ್ರಗೌಡರು ಸಲ್ಲಿಸಿದ್ದ ಪ್ರಮಾಣ ಪತ್ರ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾ. ರಾಮಮೋಹನ ರೆಡ್ಡಿ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯ ಅಸಮಂಜಸ ಹಾಗೂ ಅಸಮರ್ಪಕವಾಗಿ ಪ್ರಮಾಣ ಪತ್ರ ಸಲ್ಲಿಸಿರು ವುದು ಹುದ್ದೆಯ ಘನತೆಗೆ ತಕ್ಕುದಲ್ಲ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.
ಅವ್ಯವಹಾರ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಹಾಸನ ಹಾಗೂ ಮೈಸೂರು ವೈದ್ಯಕೀಯ ಕಾಲೇಜುಗಳ ಬೋಧಕೇತರ ಸಿಬ್ಬಂದಿಯ 307 ಹುದ್ದೆಗಳ ನೇಮಕಾತಿ ಆದೇಶವನ್ನು ಸರ್ಕಾರ ರದ್ದು ಪಡಿಸಿದ್ದನ್ನು° ಪ್ರಶ್ನಿಸಿ ವೇದಾವತಿ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ಮುಂದುವರೆಸಿದ ನ್ಯಾ. ರಾಮಮೋಹನ ರೆಡ್ಡಿ ಅವರು, ಸೆ. 6 ರಂದು ನೀಡಿದ್ದ ಆದೇಶಕ್ಕೆ ತದ್ವಿರುದ್ದವಾಗಿ ಸಚಿವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ಹಾಗೂ ನೇಮಕಾತಿ ಪಟ್ಟಿ ಸೇರಿದಂತೆ ಸಮಗ್ರ ವರದಿ ಇರುವ ಪ್ರಮಾಣ ಸಲ್ಲಿಕೆಗೆ ನಿರ್ದೇಶನ ನೀಡಿದರೆ, ಸಣ್ಣಪುಟ್ಟ ವಿಚಾರಗಳಂತೆ ಬೇಕಾಬಿಟ್ಟಿ ವಿಷಯಗಳನ್ನು ಪ್ರಸ್ತಾಪಿಸಿ ಪ್ರಮಾಣ ಪತ್ರ ಸಲ್ಲಿಸಿರುವುದು ಸಚಿವರ ಸ್ಥಾನಕ್ಕೆ ಗೌರವ ತರುವಂತಿಲ್ಲ ಎಂದು ಛೀಮಾರಿ ಹಾಕಿದರು.
ವಿಚಾರಣೆ ವೇಳೆ ಉದ್ಯೋಗ ವಂಚಿತ ರಾಘವೇಂದ್ರ ಪ್ರಸಾದ್ ಎಂಬುವರು ಅರ್ಜಿಯೊಂದರ ಜತೆ ಬೌನ್ಸ್ ಆಗಿದ್ದ ಚೆಕ್ ಅನ್ನು ಪೀಠಕ್ಕೆ ಸಲ್ಲಿಸಿದಾಗ, 'ಭ್ರಷ್ಟಾಚಾರದಲ್ಲೂ ಪಾರದರ್ಶಕನಾ' ಎಂದು ವ್ಯಂಗ್ಯವಾಡಿದರು. ಉದ್ಯೋಗ ಕೊಡಿಸುವುದಾಗಿ 2 ಲಕ್ಷ ರೂ. ಹಣಪಡೆದಿದ್ದ ವ್ಯಕ್ತಿಯೊಬ್ಬ , 2 ಲಕ್ಷ ರೂ. ಮೌಲ್ಯದ ಚೆಕ್ ಅನ್ನು ಉದ್ಯೋಗಾಕಾಂಕ್ಷಿಗೆ ನೀಡಿದ್ದ. ಈ ಚೆಕ್ ಬ್ಯಾಂಕ್‌ನಲ್ಲಿ ಬೌನ್ಸ್ ಆಗಿತ್ತು. ಇದು ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಾಕ್ಷಿ ಎಂದು ಅಭ್ಯರ್ಥಿ ಪೀಠಕ್ಕೆ ಮನವರಿಕೆ ಮಾಡಲು ಯತ್ನಿಸಿದರು.
ಆಡಳಿತ ಮಂಡಳಿ ಅಧ್ಯಕ್ಷ ನಾನು ಆಗಿದ್ದರೂ, ನೇಮಕಾತಿ ಸಮಿತಿಯೇ ಬೇರೆ ಇದೆ. ಈ ನೇಮಕಾತಿ ಸಮಿತಿ ಪಾರದರ್ಶಕವಾಗಿ ಹಾಗೂ ನಿಯಮದ ಪ್ರಕಾರ ನೇಮಕಾತಿ ಮಾಡಿದೆ ಎಂಬ ನಂಬಿಕೆಯಿಂದ ಕಡತಕ್ಕೆ ಸಹಿ ಮಾಡಿದ್ದೇನೆ. ಇದರಲ್ಲಿ ನನ್ನ ತಪ್ಪೇನಿಲ್ಲ ಎಂದು ರಾಮಚಂದ್ರಗೌಡರು ಪ್ರಮಾಣ ಪತ್ರದಲ್ಲಿ ಹೇಳಿದ್ದರು. ಇದಕ್ಕೆ ನ್ಯಾಯಮೂರ್ತಿಗಳು ಕೆಂಡಾಮಂಡಲವಾಗಿ, ಇದು ಜವಾಬ್ದಾರಿ ಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಮಾಡುವ ಕೆಲಸವಾ? ಗುಮಾಸ್ತನೊಬ್ಬ ತಪ್ಪು ಮಾಡಿದರೆ ಅದನ್ನು ಪರಿಶೀಲಿ ಸುವ ವ್ಯವದಾನವಿಲ್ಲದವರು ಸಚಿವರಾಗಲು ಹೇಗೆ ಸಾಧ್ಯ. ಕಣ್ಮುಚ್ಚಿ ಸಹಿ ಮಾಡುವುದೆಂದರೆ ಏನು ? ಅರ್ಥ ಎಂದು ತರಾಟೆಗೆ ತೆಗೆದುಕೊಂಡರು.
ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ. ನಟರಾಜ್ ಅವರು, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ನೇಮಕಾತಿ ಆದೇಶವನ್ನು ರದ್ದು ಮಾಡಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಸಚಿವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ, ಆಗಿಲ್ಲ ಎಂಬುದು ಮುಖ್ಯವಲ್ಲ. ನೇಮಕಾತಿ ಸಮಿತಿ ಅವ್ಯವಹಾರ ನಡೆಸಿದೆ ಎಂಬುದು ಸಾಕ್ಷ್ಯಾಧಾರಗಳಿಂದ ಕಂಡುಬಂದಿದೆ. ಪ್ರಕರಣ ಕುರಿತು ತನಿಖೆ ನಡೆಸಲು ನಿಯೋಜಿಸಿದ್ದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿ ಶೀಲ್ಡ್ ಕವರ್‌ನಲ್ಲಿ ವರದಿ ಸಲ್ಲಿಸಿದ್ದು, ಇದನ್ನು ಮುಖ್ಯಮಂತ್ರಿ ಅವರಿಗೆ ಗುರುವಾರ ಒಪ್ಪಿಸುತ್ತಿದ್ದೇವೆ ಎಂದು ಹೇಳಿದರು.
ಸರ್ಕಾರಕ್ಕೂ ತರಾಟೆ :
ಆಡಳಿತದ ಚುಕ್ಕಾಣಿ ಹಿಡಿದವರು ಕೇವಲ ಶ್ರೀಮಂತರು ಹಾಗೂ ಬಂಡವಾಳ ಹೂಡಿಕೆಯತ್ತ ಗಮನಹರಿಸಿದರೆ ಸಾಲದು. ಸಾಮಾನ್ಯ ಜನರ ಬಗ್ಗೆಯೂ ಕಾಳಜಿ ಇರಬೇಕು. ಆದರೆ ಪ್ರಸ್ತುತ ಈಗಾಗುತ್ತಿಲ್ಲ. ಎಲ್ಲರೂ ಕೇವಲ ಬಂಡವಾಳದ ಬಾಲ ಹಿಡಿದು ಹೊರಟ್ಟಿದ್ದಾರೆ ಎಂದು ಪರೋಕ್ಷವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಏಕಾಏಕಿ 307 ಸಿಬ್ಬಂದಿಯನ್ನು ವಜಾ ಮಾಡಿದರೆ , ಅವರನ್ನು ನಂಬಿರುವ ಕುಟುಂಬದ ಸದಸ್ಯರ ಪಾಡೇನು ಎಂಬುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆಯೇ ಎಂದು ಪ್ರಶ್ನಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|