ಗೌರಿ ಹಬ್ಬದ ಕರಿಬಳೆ ಸಂಸ್ಕೃತಿ |
ಪ್ರಕಟಿಸಿದ ದಿನಾಂಕ : 2010-09-10
ನಾಡಹಬ್ಬ ನಾಗರಪಂಚಮಿಯ ಬಳಿಕ ಹಬ್ಬಗಳೇ ಹಬ್ಬಗಳು. ಕೃಷ್ಣಾಷ್ಟಮಿಯ ಸೊಬಗು, ತಳಿರು ತೋರಣ ಮಾಸುವುದರೊಳಗೆ ಗಣೇಶ ಹಬ್ಬಕ್ಕೆ ಸಿದ್ಧತೆಗಳು ಆರಂಭವಾಗಿವೆ. ಗಣೇಶ ಹಬ್ಬವಾದ ಚೌತಿಯ ಮುನ್ನಾದಿನ ಗೌರಿ ಹಬ್ಬದ ಸಂಭ್ರಮ. ಈ ಗೌರಿಹಬ್ಬ ತವರಿನ ವಾತ್ಸಲ್ಯವನ್ನು ಹೊರಸೂಸುವ ಹಬ್ಬವಾಗಿದೆ. ಹೆಂಗಳೆಯರಿಗೆ ಗೌರಿ ಹಬ್ಬವೆಂದರೆ ಎಲ್ಲಿಲ್ಲದ ಸಂಭ್ರಮ-ಸಂತಸ.
ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಹೆಣ್ಣು ಮಕ್ಕಳಿಗಾಗಿ ತವರು ಮನೆ ಕಾಯುವ ದಿನವಿದು. ಹೊಸದಾಗಿ ಮದುವೆ ಯಾಗಿರುವ ಜೋಡಿಗಂತು ತವರಿನಿಂದ ವಿಶೇಷ ಆಹ್ವಾನ. ಗೌರಿ ಹಬ್ಬದಲ್ಲಿ ವಿಶೇಷವಾಗಿ ಎದ್ದು ಕಾಣುವುದೆಂದರೆ ಕರಿ ಬಳೆ ತೊಡುವ ಸಂಪ್ರದಾಯ.
ಹಿಂದಿನ ಕಾಲದಲ್ಲಿ ಮನೆಮಗಳು ಬಳೆ ತೊಡಲು ತವರಿನಿಂದ ಹಣ, ತೆಂಗಿನಕಾಯಿ, ಎಲೆ ಅಡಿಕೆ ನೀಡಲಾಗುತ್ತಿತ್ತು. ಗೌರಿ ಹಬ್ಬಕ್ಕೆ ಮಹಿಳೆಯರು ಕರಿ ಬಳೆ ತೊಡುತ್ತಾರೆ. ಗೌರಿ ದೇವಿಗೆ ಕರಿಬಳೆಯಲ್ಲಿ ಹೆಚ್ಚು ಪ್ರೀತಿ. ಹಾಗಾಗಿ ಮಹಿಳೆಯರು ದೇವಿಗೆ ಪ್ರಿಯವಾದ ಬಳೆಗಳನ್ನು ತೊಟ್ಟುಕೊಂಡು ಗೌರಿ ದೇವಿಯನ್ನು ಪೂಜೆ ಮಾಡಿ ದೇವಿಯ ಕೃಪಾಕಟಾಕ್ಷಕ್ಕೆ ಒಳಗಾಗುತ್ತಾರೆ.
ಬದಲಾದ ಸಂಸ್ಕೃತಿ
ಒಂದೆಡೆಯಲ್ಲಿ ಯುವ ಪೀಳಿಗೆ ಹಳೆಯ ಸಂಸ್ಕೃತಿ-ಸಂಪ್ರದಾಯಗಳನ್ನು ಮರೆಯುತ್ತಿದ್ದಂತೆ ಹಬ್ಬಗಳ ಆಚರಣೆಯಲ್ಲಿ ಅಡಕ ವಾಗಿರುವ ಸಂಪ್ರದಾಯಗಳು ಈ ಸಂಸ್ಕೃತಿಗಳನ್ನು ಗಟ್ಟಿಯಾಗಿ ಅಪ್ಪಿಕೊಂಡಿವೆ ಎಂಬುದಕ್ಕೆ ಗೌರಿಹಬ್ಬದ ಬಳೆ ತೊಡುವ ಸಂಪ್ರದಾಯವೇ ಸಾಕ್ಷಿ. ಆಧುನಿಕತೆಯ ಸೋಗಿನಲ್ಲಿ ಬಳೆ ತೊಡುವ ಸಂಪ್ರದಾಯ ಮರೆಯಾಗುತ್ತಿದ್ದರೂ ಗೌರಿ ಹಬ್ಬದ ಸಂದರ್ಭ ವಂತೂ ಯುವತಿಯರು ತಪ್ಪದೆ ಕಪ್ಪು ಬಳೆ ತೊಡುವ ಸಂಪ್ರದಾಯವನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ.
ಹಿಂದೆ ಬಳೆಗಾರ ಮನೆಮನೆಗೆ ಬಳೆ ತಂದು ಮಹಿಳೆಯರ ಹಬ್ಬದ ಸಂಭ್ರಮಕ್ಕೆ ಪುಷ್ಟಿ ನೀಡುತ್ತಿದ್ದ. ಆದರೆ ಆಧುನಿಕ ಯುಗದಲ್ಲಿ ಬಳೆಗಾರನ ವಹಿವಾಟು ಜಾನಪದ ಶೈಲಿಯಿಂದ ವ್ಯವಹಾರಿಕತೆಗೆ ಹೆಚ್ಚು ಒತ್ತು ನೀಡಿರುವುದರಿಂದ ಬಳೆಗಾರರ ಮನೆಮನೆ ಸವಾರಿ ರದ್ದಾಗಿದೆ. ಹಿಂದೆ ಬಳೆ ಅಂಗಡಿಗಳು ಅಪರೂಪವಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಎಲ್ಲೆಲ್ಲೂ ಅಂಗಡಿಗಳಿವೆ. ಯುವತಿಯರು ಕೂಡ ಅಲ್ಲಿಗೆ ಹೋಗಿಯೇ ಬಳೆ ಖರೀದಿಸುತ್ತಾರೆ. ಬೇರೆ ಸಮಯದಲ್ಲಿ ಫ್ಯಾಶನ್ ಬಳೆಗಳನ್ನು ತೊಡುತ್ತಿದ್ದರೂ ಗೌರಿ ಹಬ್ಬದ ಸಂದರ್ಭ ಅಂಗಡಿಗಳಲ್ಲೂ ಬೇಡಿಕೆ ಹೆಚ್ಚಾಗುತ್ತಿದೆ. ಗೌರಿ ಹಬ್ಬಕ್ಕಾದರೂ ಸಾಂಪ್ರದಾಯಿಕ ಬಳೆ ತೊಡುವ ಸಂಪ್ರದಾಯ ಮುಂದುವರಿಯಲಿ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|