ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ |
ಪ್ರಕಟಿಸಿದ ದಿನಾಂಕ : 2010-09-10
ಹೊಸದಿಲ್ಲಿ: ಹನ್ನೆರಡು ಭಾಷೆಗಳಲ್ಲಿ 130 ಸಿನಿಮಾಗಳನ್ನು ಐದು ದಶಕಗಳಲ್ಲಿ ನಿರ್ಮಿಸಿದ ಹಿರಿಯ ನಿರ್ಮಾಪಕ ಡಿ. ರಾಮಾನಾಯ್ಡು ಅವರಿಗೆ 2009ರ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗಿದೆ.
ದಂತಕಥೆಯಾಗಿರುವ ಆಂಧ್ರ ಪ್ರದೇಶದ 64ರ ಹರೆಯದ ಈ ನಿರ್ಮಾಪಕ ವಿವಿಧ ಭಾಷೆಗಳ ಹಲವು ಮಹಾನ್ ನಟರೊಂದಿಗೆ ಕೆಲಸ ಮಾಡಿದ್ದಾರೆ. ಭಾರತೀಯ ಚಿತ್ರ ಜಗತ್ತಿಗೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗು ತ್ತಿದೆ. ಅಕ್ಟೋಬರ್‌ನಲ್ಲಿ ಗೋವಾದಲ್ಲಿ ನಡೆಯಲಿರುವ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಕಟಿಸಲಾಗಿದೆ. ಪ್ರಶಸ್ತಿ 'ಸ್ವರ್ಣ ಕಮಲ', 10 ಲಕ್ಷ ರೂ.ಗಳ ನಗದು ಬಹುಮಾನ ಮತ್ತು ಶಾಲನ್ನು ಒಳಗೊಂಡಿದೆ.
ಹಿಂದಿಯಲ್ಲಿ 'ಪ್ರೇಮ್ ನಗರ್', 'ದಿಲ್‌ದಾರ್' ಮತ್ತು 'ಬಂದಿಶ್', ತೆಲುಗಿನಲ್ಲಿ 'ಶ್ರೀಕೃಷ್ಣ ತುಲಾಭಾರಂ', 'ಪ್ರೇಮಿಂಚು', 'ರಾಮುಡು ಭೀಮುಡು', 'ಬೊಬ್ಬಿಲಿ ರಾಜಾ', 'ಆಂಧ್ರ ವೈಭವಂ', 'ಕಥಾನಾಯಕುಡು' ಹಾಗೂ ಬಂಗಾಲಿಯಲ್ಲಿ 'ಅಸುಖ್', 'ಸುಧು ಏಕ್‌ಬಾರ್ ಬೋಲೋ' ಅವರು ನಿರ್ಮಿಸಿದ ಜನಪ್ರಿಯ ಚಿತ್ರಗಳಲ್ಲಿ ಸೇರಿವೆ.
1963ರಲ್ಲಿ ಚಿತ್ರ ನಿರ್ಮಾಣಕ್ಕೆ ಇಳಿದ ಅವರು ವಿವಿಧ ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ್ದಕ್ಕಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ಸ್ಥಾನ ಪಡೆದಿದ್ದಾರೆ. ರಾಮಾನಾಯ್ಡು ಚಿತ್ರ ನಿರ್ಮಾಣದ ಜತೆಗೆ ಹೈದರಾಬಾದ್ ಮತ್ತು ವಿಶಾಖಪಟ್ಟಣಂಗಳಲ್ಲಿ ಸ್ಟುಡಿಯೋ, ರೆಕಾರ್ಡಿಂಗ್, ಪ್ರಿವ್ಯೂ ಮತ್ತು ಡಬ್ಬಿಂಗ್ ಥೇಟರ್‌ಗಳನ್ನು ಮತ್ತು ಲ್ಯಾಬೊರೇಟರಿಗಳನ್ನು ಹೊಂದಿದ್ದಾರೆ.
ನಡೆದುಬಂದ ದಾರಿ:
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ‘ಕರಮಚೆಡು’ವಿನಲ್ಲಿ 1936ರಲ್ಲಿ ಜನಿಸಿದ ರಾಮಾನಾಯ್ಡು 1963ರಲ್ಲಿ ‘ಅನುರಾಗಂ’ ಚಿತ್ರ ನಿರ್ಮಾಣದ ಮೂಲಕ ಚಿತ್ರೋದ್ಯಮ ಪ್ರವೇಶಿಸಿದರು. ಮಾರನೇ ವರ್ಷ ಎನ್.ಟಿ.ರಾಮರಾವ್ ಅಭಿನಯದ ಸೂಪರ್‌ಹಿಟ್ ಚಲನಚಿತ್ರ ‘ರಾಮುಡು- ಭೀಮುಡು’ ಚಿತ್ರ ನಿರ್ಮಿಸಿದರು.
ಕಳೆದ 47 ವರ್ಷಗಳಲ್ಲಿ ಅವರು ತೆಲುಗು ಹೊರತಾಗಿ ಕನ್ನಡ, ತಮಿಳು, ಮಲಯಾಳಂ, ಬೆಂಗಾಲಿ, ಒರಿಯಾ, ಅಸ್ಸಾಮಿ, ಗುಜರಾತಿ, ಮರಾಠಿ ಹಾಗೂ ಭೋಜಪುರಿ ಭಾಷೆಗಳಲ್ಲೂ ಚಿತ್ರ ನಿರ್ಮಿಸಿದ್ದಾರೆ. ಒಟ್ಟು 130ಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿದ್ದು, ಗಿನ್ನಿಸ್ ಪುಸ್ತಕದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ.
ಅವರ ಹಲವು ಚಿತ್ರಗಳು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಬಾಚಿಕೊಂಡಿವೆ. ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಶಿವಾಜಿ ಗಣೇಶನ್, ಫಂಡರಿ ಬಾಯಿ, ಜಮುನಾ, ಪದ್ಮಿನಿ, ಕಮಲ ಹಾಸನ್, ಚಿರಂಜೀವಿ, ರಜನೀಕಾಂತ್, ಜಯಪ್ರದಾ, ರಾಜೇಶ್ ಖನ್ನಾ, ಜೀತೇಂದ್ರ, ಹೇಮಾಮಾಲಿನಿ, ರೇಖಾ, ಶ್ರೀದೇವಿಯಂತಹ ದಿಗ್ಗಜರು ರಾಮನಾಯ್ಡು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ವೆಂಕಟೇಶ್, ಹರೀಶ್, ಟಬು, ಖುಷ್ಬೂ, ಅಲ್ಲರಿ ನರೇಶ್, ಮಾಲಾಶ್ರೀ ಅವರಂತಹ ತಾರೆಯರನ್ನು ಅವರು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ಚಿತ್ರ ನಿರ್ಮಾಣದ ಹೊರತಾಗಿ ಹೈದರಾಬಾದ್ ಹಾಗೂ ವಿಶಾಖಪಟ್ಟಣಂಗಳಲ್ಲಿ ಅವರು ಸ್ಟುಡಿಯೋಗಳು, ರೆಕಾರ್ಡಿಂಗ್ ಹಾಗೂ ಡಬ್ಬಿಂಗ್ ಸ್ಟುಡಿಯೋಗಳನ್ನು ಸ್ಥಾಪಿಸಿದ್ದಾರೆ.
ಧನ್ಯತೆ ತಂದ ‘ಫಾಲ್ಕೆ’ ಗೌರವ ಹೈದರಾಬಾದ್ (ಪಿಟಿಐ): “ಈ ಪ್ರಶಸ್ತಿಯಿಂದ ಧನ್ಯನಾಗಿದ್ದೇನೆ. 45 ವರ್ಷಗಳಿಂದ ಸದಭಿರುಚಿಯ ಚಿತ್ರ ನಿರ್ಮಿಸುತ್ತ ಬಂದಿದ್ದೇನೆ. ಮುಂದೆಯೂ ಸಾಮಾಜಿಕ ಸಂದೇಶವುಳ್ಳ ಸಿನಿಮಾ ನಿರ್ಮಿಸುತ್ತೇನೆ.”
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಡಿ. ರಾಮಾನಾಯ್ಡು ತಮಗೆ ಸಂದ ಗೌರವಕ್ಕೆ ಈ ರೀತಿ ಪ್ರತಿಕ್ರಿಯಿಸಿದರು.
ಭಾರತೀಯ ಚಿತ್ರೋದ್ಯಮ, ತೆಲುಗು ಚಿತ್ರೋದ್ಯಮ ಹಾಗೂ ತಮ್ಮನ್ನು ಬೆಂಬಲಿಸಿದ ಪ್ರೇಕ್ಷಕ ವರ್ಗಕ್ಕೆ ಅವರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.
ರಾಮಾನಾಯ್ಡು ಅವರ ಹಿರಿಯ ಪುತ್ರ ನಿರ್ಮಾಪಕ ಸುರೇಶ್ ನಾಯ್ಡು ಸಹ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸಿದ್ದಾರೆ. ಅವರ 2ನೇ ಪುತ್ರ ವೆಂಕಟೇಶ್ ಸಹ ಖ್ಯಾತ ತೆಲುಗು ನಟರಾಗಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|