7/ 11 ಭಯೋತ್ಪಾದನಾ ದಾಳಿ: ಕುರಾನ್ ದಹನ ಯೋಜನೆ:ಭಾರತ ಖಂಡನೆ |
ಪ್ರಕಟಿಸಿದ ದಿನಾಂಕ : 2010-09-10
ಹೊಸದಿಲ್ಲಿ: ಅಮೆರಿಕನ್ ಟ್ರೇಡ್ ಸೆಂಟರ್ ಮೇಲೆ 2001 ರಲ್ಲಿ ನಡೆದ ಭಯೋತ್ಪಾದನಾ ದಾಳಿಯ ಒಂಬತ್ತನೇ ವರ್ಷಾಚರಣೆ ಅಂಗವಾಗಿ ಪವಿತ್ರ ಕುರಾನನ್ನು ದಹಿಸುವ ಫ್ಲೊರಿಡಾದ ಚರ್ಚ್‌ನ ಉದ್ದೇಶಿತ ಯೋಜನೆಯನ್ನು ಭಾರತ ಖಂಡಿಸಿದೆ. ಇಂಥ ಪ್ರಯತ್ನವನ್ನು ತಡೆಯುವ ನಿಟ್ಟಿನಲ್ಲಿ ಕಠಿನ ಕ್ರಮ ಕೈಗೊಳ್ಳುವಂತೆ ಅದು ಅಮೆರಿಕಕ್ಕೆ ಮನವಿ ಮಾಡಿದೆ.
ಮುಸಲ್ಮಾನರ ಪವಿತ್ರ ಗ್ರಂಥವನ್ನು ದಹಿಸುವ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ ಪಾಸ್ತರ್ ಟೆರ್ರಿ ಜೋನ್ಸ್ ಅವರಿಗೆ ಮನವಿ ಮಾಡಿರುವ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಅವರು ಭಾರತೀಯ ಮಾಧ್ಯಮಗಳು ಇದರ ಬಗ್ಗೆ ಹೆಚ್ಚಿನ ಪ್ರಚಾರ ನೀಡದೇ ಶಾಂತಿ ಹಾಗೂ ಸೌಹಾರ್ದವನ್ನು ಕಾಪಾಡಿಕೊಂಡು ಬರುವಲ್ಲಿ ಸರಕಾರಕ್ಕೆ ನೆರವಾಗ ಬೇಕು ಎಂದು ಮನವಿ ಮಾಡಿದ್ದಾರೆ.
ಪಾಸ್ತರ್ ಅವರ ಕ್ರಮವನ್ನು ನಾವು ಖಂಡಿಸುತ್ತೇವೆ. ಯಾವುದೇ ಧರ್ಮದ ವ್ಯಕ್ತಿ ಈ ರೀತಿ ನಡೆದುಕೊಳ್ಳುವುದು ಖಂಡನಾರ್ಹ. ಇಂಥ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಅಮೆರಿಕನ್ ಅಧಿ ಕಾರಿಗಳು ಕಠಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದ್ದಾರೆ.
ಪಾಸ್ತರ್ ಅವರ ಈ ಕೃತ್ಯವು ಧರ್ಮಗಳ ನಡುವೆ ಸಂಘರ್ಷಕ್ಕೆ ಹಾದಿಮಾಡಿಕೊಡಲಿದೆ. ಜಾತಿ-ಧರ್ಮಗಳ ನಡುವೆ ಸಂಘರ್ಷ ಬಯಸದ ಎಲ್ಲ ವರ್ಗದ ಜನರು ಪಾಸ್ತರ್ ಅವರ ಈ ಕ್ರಮವನ್ನು ಖಂಡಿಸಬೇಕು. ಭಾರತೀಯ ಮಾಧ್ಯಮಗಳು ಇಂಥ ಕೃತ್ಯಗಳಿಗೆ ಹೆಚ್ಚಿನ ಪ್ರಚಾರ ನೀಡದಿರುವ ಮೂಲಕ ದೇಶದಲ್ಲಿ ಶಾಂತಿ ಹಾಗೂ ಸೌಹಾರ್ದವನ್ನು ಕಾಪಾಡುವ ನಿಟ್ಟಿನಲ್ಲಿ ಸರಕಾರಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-10 00:00:00
|
|
|