ಸಿ೦ಗಾಪುರ : ಅಂ.ರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರಕ್ಕೆ ಭಾರತ ಬೆಂಬಲ: ಸಚಿವ ವೀರಪ್ಪ ಮೊಯ್ಲಿ |
ಪ್ರಕಟಿಸಿದ ದಿನಾಂಕ : 2010-09-09
ಸಿಂಗಾಪುರ: ಅಂತಾರಾಷ್ಟ್ರೀಯ ಮಧ್ಯಸ್ಥಿಕೆಗೆ ಪೂರಕವಾದ ಸಮಗ್ರ, ಸಮಕಾಲೀನ ಹಾಗೂ ಪ್ರಗತಿಪರವಾದ ಕಾನೂನು ಚೌಕಟ್ಟನ್ನು ಭಾರತ ಹೊಂದಿದೆ ಎಂದು ಭಾರತದ ಕಾನೂನು ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಬುಧವಾರ ಸಿಂಗಾಪುರದಲ್ಲಿ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಸಮ್ಮೇಳನದಲ್ಲಿ ಪಾಲ್ಗೊಂಡು, `ಇಂಡಿಯಾ: ಪ್ರೈಮ್ ಗ್ಲೋಬಲ್ ಬಿಸಿನೆಸ್ ಡೆಸ್ಟಿನೇಷನ್- ಯ್ಯಾನ್ ಆರ್ಬಿಟ್ರಲ್ ಪರ್ಸ್‌ಪೆಕ್ಟಿವ್' ವಿಷಯದ ಉಪನ್ಯಾಸ ನೀಡಿ, ಈ ವಿಷಯ ತಿಳಿಸಿದರು.
ಮಧ್ಯಸ್ಥಿಕೆಗೆ ಭಾರತೀಯ ನ್ಯಾಯಾಲಯಗಳು ಪೂರ್ತಿ ಬೆಂಬಲ ನೀಡಲಿವೆ. ಮಧ್ಯಸ್ಥಿಕೆಯ ಕಾನೂನು ಪ್ರಚುರಪಡಿಸಲು ಭಾರತದ ವಿವಿಗಳು ಪ್ರತ್ಯೇಕ ವಿಭಾಗ ಅಥವಾ ಬೋಧಕರನ್ನು ನೇಮಕ ಮಾಡಲಿವೆ ಎಂದರು.
‘ಸಂಧಾನ: ಭಾರತ ಸಮರ್ಥ’
ಸಿಂಗಪುರ : ಅಂತರ್‌ರಾಷ್ಟ್ರೀಯ ಸಂಧಾನ ಪ್ರಕ್ರಿಯೆಗಳ ವಿಷಯದಲ್ಲಿ ಭಾರತವು ಬೇರೆಲ್ಲ ದೇಶ ಗಳಿಗಿಂತ ಸಮಗ್ರವಾದ ಸಮಕಾಲೀನ ಹಾಗೂ ಪ್ರಗತಿಪರ ಕಾನೂನು ಚೌಕಟ್ಟುಗಳ ವ್ಯವಸ್ಥೆಯ ನ್ನು ಹೊಂದಿದೆ ಎಂದು ಕೇಂದ್ರ ಕಾನೂನು ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.
ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಮತ್ತು ತಕರಾರುಗಳ ಸಂಧಾನ ಪ್ರಕ್ರಿಯೆಗಳಲ್ಲಿ ಭಾರತದ ಕೋರ್ಟುಗಳು ಮಧ್ಯಸ್ಥಿಕೆ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ಹಾಗೂ ಬೆಂಬಲ ನೀಡು ತ್ತಲೇ ಬಂದಿದೆ ಎಂದು ಅವರು ಹೇಳಿದರು.
ಅಂತರ್‌ರಾಷ್ಟ್ರೀಯ ಸಂಧಾನ ಕೇಂದ್ರಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
‘ಪ್ರಸಕ್ತ ಸಂದರ್ಭದಲ್ಲಿ ಭಾರತವು ಜಗತ್ತಿನ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವ ಬೆನ್ನಲ್ಲೇ ಸಂಧಾನ ಪ್ರಕ್ರಿಯೆಗಳ ಪಥ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಭಾರತದಲ್ಲಿ ಸಂಧಾನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಪಾಲುದಾರರು, ನ್ಯಾಯಮೂರ್ತಿಗಳು, ವಕೀಲರು ಮತ್ತು ಕಕ್ಷಿ ಗಾರರು ಈ ವಿಷಯದಲ್ಲಿ ಹೊಂದಿರುವ ದೃಷ್ಟಿಕೋನಗಳನ್ನು ಬದಲಿಸಿಕೊಳ್ಳಬೇಕಿದೆ. ಅದಕ್ಕಾಗಿ ಕೆಲವು ಕಾನೂನಾತ್ಮಕ ತಿದ್ದುಪಡಿಗಳ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಭಾರತದಲ್ಲಿ ಆರ್ಥಿಕ ಕ್ಷೇತ್ರವು ವ್ಯಾಪಕವಾದ ವೃದ್ಧಿಯನ್ನು ಕಾಣುತ್ತಿದೆ. ಅಂತರ್‌ರಾಷ್ಟ್ರೀಯ ಬಂಡವಾಳ ಹೂಡಿಕೆಯೂ ಹೆಚ್ಚುತ್ತಿದೆ. ಆದ್ದರಿಂದ ಭಾರತೀಯ ವಿಶ್ವವಿದ್ಯಾಲಯಗಳು ಸಂಧಾನ ಹಾಗೂ ಪಂಚಾಯಿತಿ ತೀರ್ಮಾನಗಳ ಕುರಿತಂತೆ ಪ್ರತ್ಯೇಕ ಕಾನೂನು ವಿಭಾಗಗಳನ್ನು ತೆರೆಯಲು ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಮೊಯಿಲಿ ತಿಳಿಸಿದರು.
ಎರಡು ದಿನಗಳ ಸಿಂಗಪುರ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿರುವ ಮೊಯಿಲಿ ಅವರು ಇದೇ ಸಂದರ್ಭದಲ್ಲಿ ಇಲ್ಲಿನ ಭಾರತೀಯ ವಾಣಿಜ್ಯೋದ್ಯಮಿಗಳ ಸಮ್ಮೇಳನದಲ್ಲೂ ಪಾಲ್ಗೊಂಡು ಭಾಷಣ ಮಾಡಿದರು.
ವರದಿಯ ವಿವರಗಳು |
 |
ಕೃಪೆ : ಪಿಟಿಐ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|