ಗುಲ್ಬರ್ಗ : ಚುನಾವಣ ಪ್ರಚಾರ ವೇದಿಕೆಯಲ್ಲೇ ಕುಸಿದು ಬಿದ್ದ ಬ೦ಗಾರಪ್ಪ |
ಪ್ರಕಟಿಸಿದ ದಿನಾಂಕ : 2010-09-09
ಗುಲ್ಬರ್ಗ: ಉಪ ಚುನಾವಣೆ ಅಖಾಡದಲ್ಲಿರುವ ಧರಂಸಿಂಗ್ ಪುತ್ರ ಡಾ. ಅಜಯ್ ಪರವಾಗಿ ಪ್ರಚಾರದಲ್ಲಿ ಭಾಗವಹಿಸಲು ಗುಲ್ಬರ್ಗಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಾರೊಕೆಪ್ಪ ಬಂಗಾರಪ್ಪ ಪ್ರಚಾರ ಸಭೆಯಲ್ಲಿ ಮಾತನಾಡುತ್ತಲೇ ಕುಸಿದು ಪ್ರಜ್ಞೆ ತಪ್ಪಿದ ಘಟನೆ ನಡೆಯಿತು.
ಬಿರುಸಿನ ಭಾಷಣ ಮಾಡುತ್ತಿದ್ದ ಬಂಗಾರಪ್ಪ ಧ್ವನಿ ಕ್ಷೀಣವಾಗುತ್ತ ಸಾಗಿದಾಗ ವೇದಿಕೆಯಲ್ಲಿದ್ದವರು ಅಚ್ಚರಿ, ಯಾಕೆ ಹೀಗಾಯ್ತು ಎಂದು ನೋಡುತ್ತಿದ್ದಂತೆಯೇ ಬಂಗಾರಪ್ಪ ಮೈಕ್ ಪೋಡಿಯಂ ಹಿಂದೆ ನಿಧಾನವಾಗಿ ಕುಸಿದರು. ತಕ್ಷಣ ಅವರ ನೆರವಿಗೆ ಬಂದವರು ಬೀದರ್ ನಗರ ಶಾಸಕ ರಹೆಮಾನ್ ಖಾನ್ ಹಾಗೂ ಶಾಸಕ ಮಾಲೀಕಯ್ಯಾ ಗುತ್ತೇದಾರ್. ಇದಲ್ಲದೆ ಸೊರಬದಿಂದ ಅವರೊಂದಿಗೆ ಬಂದಿದ್ದ ಕಾರ್ಯಕರ್ತಣರೂ ತಕ್ಷಣ ವೇದಿಕೆಯಲ್ಲಿ ಸೇರಿಕೊಂಡು ನಿತ್ರಾಣರಾಗಿ ಕೆಳಗೆ ಕುಳಿತ ಬಂಗಾರಪ್ಪ ಅವರಿಗೆ ಗಾಳಿ ಹಾಕಿದರು.
ತಕ್ಷಣ ಸಮಾರಂಭ ಸ್ಥಳದಿಂದ ತುಸು ದೂರದಲ್ಲಿರುವ ಡಾ. ಹರವಾಳ್ಕರ್ ಅವರನ್ನು ಕರೆದು ವೇದಿಕೆಯಲ್ಲಿಯೇ ಬಂಗಾರಪ್ಪ ಅವರ ಆರೋಗ್ಯ ತಪಾಸಣೆ ಮಾಡಲಾಯಿತು. ಲೋ ಶುಗರ್ ಹಾಗೂ ರಕ್ತದೊತ್ತಡದಲ್ಲಿನ ಏರುಪೇರಿನಿಂದ ಈ ಸಮಸ್ಯೆ ಎದುರಾಗಿದೆ ಎಂದು ಹೇಳಿದ ಅವರು ಹೆಚ್ಚಿನ ತಪಾಸಣೆಗಾಗಿ ಕರೆದೊಯ್ಯಲಾಯಿತು. ಸ್ಥಳೀಯ ಮುಖಂಡರೊಬ್ಬರ ನಿವಾಸಕ್ಕೆ ಅವರ ನ್ನು ಕರೆದೊಯ್ದು, ವೈದ್ಯಕೀಯ ತಪಾಸಣೆ ನಡೆಸಲಾಯಿತು. ಆ ವೇಳೆಗೆ ಬಂಗಾರಪ್ಪ ಅವರಿಗೆ ಪ್ರಜ್ಞೆ ಬಂದಿತ್ತು.

ವೈದ್ಯರ ತಂಡದ ಪ್ರಕಾರ ಬಂಗಾರಪ್ಪ ರಕ್ತದೊತ್ತಡದಲ್ಲಿನ ಕೊಂಚ ಏರುಪೇರು ಹಾಗೂ ಅವರು ಬೆಳಗ್ಗೆ ಸೇವಿಸಿದ್ದ ಉಪಾಹಾರದಿಂದ ಈ ತೊಂದರೆ ಸಂಭವಿಸಿದೆ. ಅವರ ಆರೋಗ್ಯಕ್ಕೆ ಯಾವು ದೇ ಅಪಾಯವಿಲ್ಲ ಎಂದರು
ಪರ್ಫೆಕ್ಲ್ಟೀ ಆಲ್‌ರೈಟ್- ಬಂಗಾರಪ್ಪ: ನಂತರ ಮಾತನಾಡಿದ ಅವರು ನಾನು ಪರ್ಫೆಕ್ಲ್ಟೀ ಆಲ್ ರೈಟ್. ಚೆನ್ನಾಗಿಯೇ ಇದ್ದೇನೆ ಎನ್ನುತ್ತಾ ಮಾತಿಗೆ ಮುಂದಾದರು.
'ನನಗೇನು ಆಗಿಲ್ಲಾರಿ, ತಲೆ ಸುತ್ತು ಬಂದಿತ್ತು. ಮಾತನಾಡುತ್ತಲೇ ತುಸು ನಿತ್ರಾಣವಾಗಿತ್ತು. ಬೆಳ ಗ್ಗೆ ಎಣ್ಣೆ ಅಂಶ ಅಧಿಕವಾಗಿದ್ದ ಪುರಿ- ಸಾಗು ತಿಂದೆ ನೋಡಿ. ಅದೇ ನನ್ನನ್ನು ಈ ಸ್ಥಿತಿಗೆ ತಳ್ಳಿದ್ದು. ಅದರಿಂದ ಕೊಂಚ ಎಸಿಡಿಟಿ ಬಾಧೆ ಆಯ್ತು. ಹುಳಿ ತೇಗು ಬಂತು. ನಾನು ಕುಸಿದು ಬಿಟ್ಟೆ. ನನಗೆ ಕಾರ್ಯಕರ್ತರು ತಕ್ಷಣ ವೇದಿಕೆಯಲ್ಲಿಯೇ ಉಪಚರಿಸಿದರು. ಅವರೆಲ್ಲರಿಗೂ ಧನ್ಯವಾದಗಳು' ಎಂದರು.

ವ್ಯಾಯಾಮ ಮಾಡ್ತೇನೆ: `ನಾನು ನಿತ್ಯ ೧ ಗಂಟೆ ಈಜುತ್ತೇನೆ. ನೋಡಿ ಹೇಗಿದ್ದೇನೆ, ಗಟ್ಟಿ ಮುಟ್ಟಾಗಿ, ನನಗೆ ಏನೂ ಆಗೋದಿಲ್ಲ. ವಯಸ್ಸು ಆಗ್ತಿದೆ ಆ ವಿಚಾರ ಬೇರೆ. ಆದರೆ ಈಜುಗಾರ ರಿಗೆ ಅಷ್ಟು ಬೇಗ ಕಾಯಿಲೆ- ಕಸಾಲೆ ಬರೋದಿಲ್ಲ ಎಂದು ಹೇಳುತ್ತಲೇ ಸುದ್ದಿಗಾರರೊಂದಿಗೆ ಹರಟಿದರು.
'ಹಿಂದೊಮ್ಮೆ ತೇಗು- ಎಸಿಡಿಟಿ ಬಾಧೆಯಿಂದ ಹೀಗಾಗಿತ್ತು. ಆದರೆ ಕುಸಿದಿರಲಿಲ್ಲ, ತಲೆ ಸುತ್ತು ಬಂದಿತ್ತು. ಆದರೆ ಈಗ ಅದೇ ರೀತಿಯ ತೊಂದರೆ ಕಾಣಿಸಿಕೊಂಡಿದೆ. ಗುಲ್ಬರ್ಗದಲ್ಲಿ ಈ ದಿನ ಕೊಂಚ ಬಿಸಿಲು ಬೇರೆ ಇದೆಯಲ್ಲ. ಗಂಗಾನಗರ ವೇದಿಕೆಯಲ್ಲಿ ನೇರವಾಗಿ ಬಿಸಿಲಲ್ಲೇ ಕುಳಿತಿದ್ದೇ ವು. ಅದೂ ಸಹ ಆರೋಗ್ಯದ ಮೇಲೆ ಪರಿಣಾಮ ಬೀರಿದೆ' ಎಂದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|