ಬೆ೦ಗಳೂರು : ಗಾರ್ಡನ್ ಸಿಟಿಯಲ್ಲಿ ರಸ್ತೆ ಮಧ್ಯೆ ಛಾವಣಿ ಉದ್ಯಾನವನ |
ಪ್ರಕಟಿಸಿದ ದಿನಾಂಕ : 2010-09-09
ಬೆಂಗಳೂರು, ಸೆ.೮ : ಮೇಲೆ ಸುಂದರವಾದ ಆಕರ್ಷಕ ಉದ್ಯಾನ ವನ. ಕೆಳಗೆ ಆರು ಪಥಗಳ ವಿಶಾಲವಾದ ರಸ್ತೆ. ಇದೇನಿದು? ಹೇಗೆ ಸಾಧ್ಯ? ಅದೂ ನಮ್ಮಲ್ಲಿಯೇ ಎಂದು ಹುಬ್ಬೇರಿಸಬೇಡಿ.
ಅಂಡರ್‌ಪಾಸ್ ಮೇಲೆ ಸುಂದರ ಛಾವಣಿ ಉದ್ಯಾನವನವೊಂದನ್ನು ನಿರ್ಮಿಸುವ ಮೂಲಕ ಬೆಂಗ ಳೂರು ಅಭಿವೃದ್ಧಿ ಪ್ರಾಧಿಕಾರ ವಿಶಿಷ್ಟತೆ ಮೆರೆದಿದೆ. ಇದನ್ನು ನೋಡಬೇಕಾದರೆ ನಗರದ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯನ್ನು ಸಂಪರ್ಕಿಸುವ ಹೊರ ವರ್ತುಲ ರಸ್ತೆಯಲ್ಲಿ ಗಂಗೊಂಡನ ಹಳ್ಳಿ-ನಾಯಂಡಹಳ್ಳಿ ಬಳಿ ಹಾದು ಹೋಗುವ ಅಂಡರ್‌ಪಾಸ್ ಬಳಿ ಬನ್ನಿ. ಅಥವಾ ಮೈಸೂರು ರಸ್ತೆ ಮತ್ತು ರಿಂಗ್ ರಸ್ತೆಯ ಜಂಕ್ಷನ್ ಬಳಿ ಬಂದರೂ ಆಯಿತು.
೬ ಪಥಗಳ ರಸ್ತೆ ಹಾದು ಹೋಗುವ ಈ ಅಂಡರ್‌ಪಾಸ್ ಮೇಲಿನ ಕಾಂಕ್ರೀಟ್ ಛಾವಣಿಯ ಮೇಲೆ ಈ ಉದ್ಯಾನವನ ತಲೆಯೆತ್ತಿದೆ. ಇದೇನು ಪುಟ್ಟ ಉದ್ಯಾನವನ ಅಲ್ಲ. ಬರೋಬ್ಬರಿ ಒಂದೂವರೆ ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಸದ್ಯ ಹುಲ್ಲುಹಾಸು ಹಾಕಲಾಗಿದ್ದು, ಶೀಘ್ರವೇ ಪುಟ್ಟ ಗಿಡ ಬೆಳೆಸುವ ಉದ್ದೇಶವಿದೆ.
ದಾಖಲೆಗಾಗಿ ಈ ಉದ್ಯಾನ ನಿರ್ಮಾಣಗೊಂಡಿಲ್ಲ ಎಂಬುದನ್ನು ಗಮನಿಸಬೇಕು.
ಮೈಸೂರು ರಸ್ತೆಗೆ ಸಮೀಪದಲ್ಲಿನ ನಾಯಂಡಹಳ್ಳಿ ಮತ್ತು ಗಂಗೊಂಡನಹಳ್ಳಿಗೆ ಸಂಪರ್ಕವಾಗಿ ರಸ್ತೆಯೊಂದು ಹಾಗೂ ಬೆಂಗಳೂರು-ಮೈಸೂರು ಮಾರ್ಗದ ಜೋಡಿ ರೈಲು ಮಾರ್ಗದ ಹಳಿಗಳು ಅಡ್ಡಲಾಗಿ ಹಾದು ಹೋಗಿದ್ದರಿಂದ ಈ ಹೊರ ವರ್ತುಲ ರಸ್ತೆಗೆ ಅಂಡರ್‌ಪಾಸ್ ಅಂತೂ ನಿರ್ಮಿಸ ಲೇಬೇಕಿತ್ತು.
ಎತ್ತರ ಪ್ರದೇಶದಿಂದ ಹಾದು ಬರುವ ಹೊರವರ್ತುಲ ರಸ್ತೆಯನ್ನು ಈ ನಾಯಂಡಹಳ್ಳಿ-ಗಂಗೊಂ ಡನಹಳ್ಳಿ ರಸ್ತೆ ಹಾಗೂ ಬೆಂಗಳೂರು-ಮೈಸೂರು ರೇಲ್ವೆ ಮಾರ್ಗದ ಕೆಳಗೆ ಅಂಡರ್‌ಪಾಸ್ ನಿರ್ಮಾಣ ಮಾಡಬೇಕಾದರೆ ಅತ್ಯಂತ ಉದ್ದ ತಡೆಗೋಡೆಯನ್ನು ನಿರ್ಮಿಸಬೇಕಾಗಿತ್ತು. ಜತೆಗೆ ಆ ಬೃಹತ್ ತಡೆಗೋಡೆ ಕುಸಿದು ಬೀಳದಂತೆ ಭೂಮಿಯೊಳಗಿಂದ ಆಸರೆ ನೀಡಬೇಕಾಗುತ್ತಿತ್ತು.
ಈ ಹಂತದಲ್ಲೇ ತಡೆಗೋಡೆಗೆ ಆಸರೆ ನೀಡಲು ಕಾಂಕ್ರೀಟ್ ಛಾವಣಿ ಹಾಗೂ ಅದರ ಮೇಲೊಂ ದು ಉದ್ಯಾನವನವೊಂದನ್ನು ನಿರ್ಮಿಸುವ ಚಿಂತನೆ ಬಿಡಿಎ ಅಧಿಕಾರಿಗಳಿಗೆ ಮೊಳಕೆಯೊಡೆ ಯಿತು. ಸಂಬಂಧಪಟ್ಟ ಎಂಜಿನಿಯರ್‌ಗಳು ತಕ್ಷಣ ಕಾರ್ಯಪ್ರವೃತ್ತರಾಗಿ ನಕ್ಷೆ ಸಿದ್ಧಪಡಿಸಿದರು. ೧೭೨ ಮೀಟರ್ ಉದ್ದ ಮತ್ತು ೪೨ ಮೀಟರ್ ಅಗಲ ಕಾಂಕ್ರೀಟ್ ಹಾಸಿಗೆ ಹಾಕಿಯೇ ಬಿಟ್ಟರು.
ಅಂಡರ್‌ಪಾಸ್ ಮೇಲೆಯೇ ಬಿಡಿಎ ಕಚೇರಿ, ಬೆಂಗಳೂರು ಒನ್: ಅಂಡರ್‌ಪಾಸ್ ಮತ್ತು ಮೇಲೆ ಹಾದು ಹೋಗುವ ರಸ್ತೆಯ ನಡುವಿನ ಜಾಗವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಇಲ್ಲಿಯೇ ಬಿಡಿಎ ಕಚೇರಿಯನ್ನು ತೆರೆಯಲಾಗಿದೆ. ಈ ಹಿಂದೆ ಸಮೀಪದಲ್ಲೇ ಇದ್ದ ಬಿಡಿಎ ಕಚೇರಿ ಕಟ್ಟಡಕ್ಕೆ ಮಾಸಿಕ ೩೦,೦೦೦ ಬಾಡಿಗೆ ನೀಡಲಾಗುತ್ತಿತ್ತು. ಈಗ ಆ ಬಾಡಿಗೆ ನೀಡುವಂತಿಲ್ಲ. ಜತೆಗೆ ಶೀಘ್ರ ದಲ್ಲಿಯೇ ಇಲ್ಲಿ ನಾಗರಿಕರ ಅನುಕೂಲಕ್ಕಾಗಿ ಬೆಂಗಳೂರು ಒನ್ ಕೇಂದ್ರವೊಂದನ್ನು ತೆರೆಯುವ ಉದ್ದೇಶವಿದೆ. ಜತೆಗೆ ಸುಲಭ ಶೌಚಾಲಯವೂ ಸ್ಥಾಪನೆಯಾಗಲಿದೆ.
ಅಲ್ಲದೆ, ಬಿಸಿಲಿನಲ್ಲಿ ದೂರದಿಂದ ಪ್ರಯಾಣಿಸಿಕೊಂಡು ಬರುವವರಿಗೆ ಈ ಅಂಡರ್‌ಪಾಸ್ ಪ್ರವೇ ಶಿಸಿದ ಕೂಡಲೇ ತಣ್ಣಗಿನ ಅನುಭವವಾಗುತ್ತದೆ. ಇದಕ್ಕೆ ಕಾರಣ ಮೇಲಿರುವ ಉದ್ಯಾನವನ. ಇದರಿಂದಾಗಿ ಅಂಡರ್‌ಪಾಸ್ ಒಳಗಿನ ಉಷ್ಣಾಂಶದ ಪ್ರಮಾಣ ಸುಮಾರು ೩ರಿಂದ ೪ ಡಿಗ್ರಿಯಷ್ಟು ಕಡಮೆ ಇರುತ್ತದೆ ಎಂಬುದು ತಿಳಿದು ಬಂದಿದೆ. ಜತೆಗೆ ಈ ಉದ್ಯಾನವನದಲ್ಲಿ ಮಳೆ ಕೊಯ್ಲು ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.
ಹೀಗೆ ಸಂಗ್ರಹಗೊಂಡ ನೀರನ್ನು ಉದ್ಯಾನವನಗಳಿಗೆ ಬಳಸಲಾಗುತ್ತದೆ. ಅಲ್ಲದೆ, ಅಂಡರ್‌ಪಾಸ್ ಒಳಗೆ ಶುದ್ಧ ಗಾಳಿ ಪ್ರವೇಶಿಸಲು ಉದ್ಯಾನವನದ ಅಲ್ಲಲ್ಲಿ ಸುರಕ್ಷತೆಯುಳ್ಳ ಕಿಂಡಿಗಳನ್ನೂ ನಿರ್ಮಿ ಸಲಾಗಿದೆ. ಇದರೊಂದಿಗೆ ಅಂಡರ್‌ಪಾಸ್ ಒಳಗೆ ಬೆಳಕು ನೀಡಲು ಸೌರಶಕ್ತಿ ವಿದ್ಯುತ್ ವ್ಯವಸ್ಥೆ ಯನ್ನೂ ಅಳವಡಿಸಲು ಉದ್ದೇಶಿಸಲಾಗಿದೆ.
ಒಟ್ಟಾರೆ, ಈ ಕಾಂಕ್ರೀಟ್ ಛಾವಣಿ ಮತ್ತು ಉದ್ಯಾನವನಕ್ಕಾಗಿ ರು. ೮೪ ಲಕ್ಷ ವೆಚ್ಚ ಮಾಡಲಾಗು ತ್ತಿದೆ. ಕಾಮಗಾರಿ ಅಂತಿಮ ಹಂತದಲ್ಲಿದ್ದು ಉದ್ಯಾನವನದ ಸೌಂದರ್ಯೀಕರಣ ಶೀಘ್ರದಲ್ಲೇ ಪೂರ್ಣಗೊಂಡು ನಳನಳಿಸಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|