ಬೆ೦ಗಳೂರು : ಗೋಹತ್ಯೆ ನಿಷೇಧ : ಬಿಜೆಪಿ ನಾಯಕರಿಂದ ಪ್ರಚೋದನಕಾರಿ ಹೇಳಿಕೆ: ಕಾನೂನು ಕ್ರಮಕ್ಕೆ ಉಗ್ರಪ್ಪ ಆಗ್ರಹ |
ಪ್ರಕಟಿಸಿದ ದಿನಾಂಕ : 2010-09-09
ಬೆಂಗಳೂರು, ಸೆ.8: ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಬಹಿರಂಗವಾಗಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದರೂ, ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ಬುಧವಾರ ಪೊಲೀಸ್ ಮಹಾನಿರ್ದೇಶಕ ಅಜಯ್ ಕುಮಾರ್ ಸಿಂಗ್‌ರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದೆ.
ಕಾಂಗ್ರೆಸ್ ನಾಯಕ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಿದ ನಿಯೋಗ, ಇಂತಹ ಹೇಳಿಕೆ ಸಮಾಜದಲ್ಲಿ ಶಾಂತಿ ಕದಡಲು ಕಾರಣವಾಗಲಿದ್ದು, ಈ ಕುರಿತು ಹೇಳಿಕೆ ನೀಡುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಗೋಹತ್ಯೆಯಿಂದ ರೈತರಿಗೆ, ದನಗಳನ್ನು ಸಾಕುವವರಿಗೆ ತೊಂದರೆ ಆಗುತ್ತದೆ. ಇಂತಹ ಸನ್ನಿ ವೇಶದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದು ಸರಿಯಾದದ್ದಲ್ಲ. ಇದು ಕೇವಲ ಒಂದು ವರ್ಗವನ್ನು ಗಮನ ದಲ್ಲಿಟ್ಟುಕೊಂಡು ಮಾಡುವ ಕಾಯ್ದೆಯಾಗಿದೆ ಎಂದವರು ಆರೋಪಿಸಿದರು.
ಮೈಸೂರು ಮತ್ತು ಬಳ್ಳಾರಿ ಬಿಜೆಪಿ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ, ಗೋಹತ್ಯೆ ನಡೆಸುವವರ ಕೈಕಡಿಯುವುದಾಗಿ ಹಾಗೂ ಮುಖ್ಯಮಂತ್ರಿ ವಿರುದ್ಧ ಮಾತನಾಡುವವರ ನಾಲಿಗೆ ಸೀಳುವುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಈ ಕುರಿತು ಪ್ರಚೋದನಕಾರಿ ಮಾತನಾಡಿರುವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಉಗ್ರಪ್ಪ ಆರೋಪಿಸಿದರು.
ಇಂತಹ ಪ್ರಚೋದನಕಾರಿ ಹೇಳಿಕೆಯ ಮುಂದುವರಿದ ಭಾಗವಾಗಿ ಕೆಲವು ದಿನಗಳ ಹಿಂದೆ ನಗರ ದ ಪುರಭವನದ ಮುಂದೆ ನಡೆದ ಬಿಜೆಪಿ ಧರಣಿಯಲ್ಲಿ ಶಾಸಕ ಶಂಕರಲಿಂಗೇ ಗೌಡ, ಗೋಹತ್ಯೆ ಮಾಡುವವರ ತಲೆ ಕಡಿಯಿರಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆಗಳು ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಂಭವವಿದೆ. ಸೌಹಾರ್ದ ಕೆಡಿಸುವಂತಹ ಇಂತಹ ಹೇಳಿಕೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ನಿಯೋಗದಲ್ಲಿ ಕಾಂಗ್ರೆಸ್ ಮುಖಂಡ ರಾದ ಎಸ್.ಟಿ.ಸೋಮಶೇಖರ್, ಬೆಂಗಳೂರು ಯುವ ಕಾಂಗ್ರೆಸ್ ನಗರಾಧ್ಯಕ್ಷ ಎಸ್. ಮನೋಹರ್, ಪ್ರಮೋದ್ ಶಂಕರ್ ಮತ್ತಿತರರು ಹಾಜರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|