ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಸಮಾವೇಶ ಉದ್ಘಾಟನೆ; ಇಲ್ಲದವರ ಧ್ವನಿ ಬಲ ಪಡೆದುಕೊಳ್ಳಲಿ: ವೈದೇಹಿ |
ಪ್ರಕಟಿಸಿದ ದಿನಾಂಕ : 2010-09-09
ಉಡುಪಿ, ಸೆ.8: ಬೇಡಿಕೆಗಳಿಗಾಗಿ ಸ್ಥಿತಿವಂತರೂ ಹಾಗೂ ಇಲ್ಲದವರು ಇಬ್ಬರೂ ಇಂದು ಧ್ವನಿ ಎತ್ತುತ್ತಿದ್ದಾರೆ. ಈ ನಡುವೆ ಇಲ್ಲದವರ ಧ್ವನಿ ಇನ್ನಷ್ಟು ಜೋರಾಗಿ ವ್ಯವಸ್ಥೆಗೆ ಕೇಳಿಸುವ ರೀತಿಯಲ್ಲಿ ಎತ್ತಬೇಕಾಗಿದೆ. ಅದಕ್ಕೆ ಸಂಘಟನೆ ಅತೀ ಮುಖ್ಯ ಎಂದು ಲೇಖಕಿ ವೈದೇಹಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಆಶಾ ಕಾರ್ಯ ಕರ್ತೆಯರ ಉಡುಪಿ ಜಿಲ್ಲಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಂಸದರಿಗೆ 90 ಸಾವಿರ ರೂ. ವೇತನ ನಿಗದಿ ಪಡಿಸುವ ಸರಕಾರಕ್ಕೆ ಹಳ್ಳಿಯಲ್ಲಿ ಜನರ ಸೇವೆ ಮಾಡುವ ಆಶಾ ಕಾರ್ಯಕರ್ತೆಯರಿಗೆ ಸರಿಯಾದ ವೇತನ ನೀಡಲು ಆಗುತ್ತಿಲ್ಲ. ಹೀಗೆ ಅಸಮಾನತೆ, ತಾರತಮ್ಯದಿಂದ ಕೂಡಿದ ಅರ್ಥ ಇಲ್ಲದ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಇದಕ್ಕೆ ಅರ್ಥ ಕಲ್ಪಿಸುವ ನಿಟ್ಟಿನಲ್ಲಿ ಇನ್ನಷ್ಟು ಹೋರಾಟ ಅತ್ಯಗತ್ಯ ಎಂದರು.
ಮುಖ್ಯ ಭಾಷಣಕಾರರಾಗಿ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮೀ ಮಾತನಾಡಿ, ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ ಇನ್ನು ಮುಂದೆ ಗುಲಾಬಿ ಬಣ್ಣದ ಸಮವಸ್ತ್ರ ನೀಡಲು ಸರಕಾರ ಒಪ್ಪಿಗೆ ಸೂಚಿ ಸಿದ್ದು, ವರ್ಷಕ್ಕೆ 2 ಸೀರೆಗಳನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ 39 ಸಾವಿರ ಆಶಾ ಕಾರ್ಯಕರ್ತೆ ಯರು ಜನರ ಸೇವೆ ಮಾಡುತ್ತಿದ್ದಾರೆ. ಆದರೆ ಇವರಿಗೆ ಯಾವುದೇ ವೇತನವನ್ನು ಸರಕಾರ ಈವರೆಗೆ ನಿಗದಿ ಪಡಿಸಿಲ್ಲ. ಬದಲಾಗಿ ಸೇವೆಗೆ ತಕ್ಕಂತೆ ಹಣ ನೀಡಲಾಗುತ್ತಿದೆ. ಇದು ತೀರಾ ಅವೈಜ್ಞಾನಿಕವಾದುದು ಎಂದ ಅವರು, ಸರಕಾರಕ್ಕೆ ಇವರ ಸೇವೆಗೆ ಕನಿಷ್ಠ ಪ್ರತಿಫಲ ನೀಡಲು ಸಾಧ್ಯವಾಗದಿರುವುದು ನಾಚಿಕೆಗೇಡು ಎಂದು ಟೀಕಿಸಿದರು.
ಹಳ್ಳಿಗಳಿಗೆ ಆಶಾ ಕಾರ್ಯಕರ್ತೆಯರ ಸೇವೆ ಅತ್ಯಗತ್ಯವಾಗಿದೆ. ಆದುದರಿಂದ ಅವರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಿ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಅಲ್ಲಿಯವರೆಗೆ ಅವರಿಗೆ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಅತಿಥಿಯಾಗಿ ಅಖಿಲ ಭಾರತ ಯುಟಿ ಯುಸಿ ಕೇಂದ್ರ ಕಾರ್ಮಿಕ ಸಂಘಟನೆ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ವಿ.ಭಟ್ ಮಾತ ನಾಡಿದರು. ಜಿಲ್ಲಾ ಆಶಾ ಸಂಘಟಕಿ ಭಾರತಿ ಅಶೋಕ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕರ್ತೆಯರಾದ ಭಾರತಿ ಕುಂಭಾಶಿ, ಪ್ರೇಮಾ, ಆಶಾ ಕೆದೂರು, ವಿನೋದಾ ಬಿದ್ಕಳಕಟ್ಟೆ ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್
1000 ಜನಸಂಖ್ಯೆಗೆ ಒಬ್ಬರಂತೆ ಇರುವ ಆಶಾ ಕಾರ್ಯಕರ್ತೆಯರ ಸೇವೆ ಬಡವ ರಿಗೆ ಅಗತ್ಯವಾಗಿದೆ. ಆದುದರಿಂದ ಅವರ ಸಂಪರ್ಕ ಸಾಧ್ಯವಾಗುವ ನಿಟ್ಟಿನಲ್ಲಿ ಅವರಿಗೆ ಮೊಬೈಲ್ ಫೋನ್ ನೀಡಲು ಸರಕಾರ ಮುಂದಾಗಿದೆ. ಅಲ್ಲದೆ ಅದಕ್ಕೆ ಬೇಕಾದ ಕರೆನ್ಸಿಯನ್ನು ಒದಗಿಸಲಾಗುತ್ತದೆ.
ಇದನ್ನು ಜಾರಿಗೆ ತರಲು ಸರಕಾರದ ಸಹಿಗಾಗಿ ಪತ್ರ ಕಳುಹಿಸಲಾಗಿದೆ ಎಂದು ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾ ಭಾರತಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|