ಕುಂದಾಪುರ - ಗೋವಾ ಹೆದ್ದಾರಿ ಚತುಷ್ಪಥ: ಮಾರ್ಚ್‌ನಲ್ಲಿ ಚಾಲನೆ |
ಪ್ರಕಟಿಸಿದ ದಿನಾಂಕ : 2010-09-09
ವರದಿ: ಸುರೇಂದ್ರ ಎಸ್. ವಾಗ್ಳೆ
* ಸುರತ್ಕಲ್ - ಬಿ.ಸಿ.ರೋಡ್ ಡಿಸೆಂಬರ್‌ಗೆ ಪೂರ್ಣ * ಸುರತ್ಕಲ್- ಕುಂದಾಪುರ ಆಕ್ಟೋಬರ್‌ನಲ್ಲಿ ಆರಂಭ * ತೊಕ್ಕೊಟ್ಟು - ಮೆಲ್ಕಾರ್ ದ್ವಿಪಥ
ಮಂಗಳೂರು: ಕುಂದಾಪುರದಿಂದ ಗೋವಾ ಗಡಿವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಯೋಜನೆಗೆ ಬರುವ ಮಾರ್ಚ್‌ನಲ್ಲಿ ಚಾಲನೆ ದೊರೆಯಲಿದೆ.
193 ಕಿ.ಮೀ. ಉದ್ದದ ಈ ಹೆದ್ದಾರಿಯನ್ನು ಚತುಷ್ಪಥಗೊಳಿಸುವ ಕಾರ್ಯವನ್ನು ಭಾರತೀಯ ಹೆದ್ದಾರಿ ಪ್ರಾಧಿ ಕಾರಕ್ಕೆ ವಹಿಸ ಲಾಗಿದ್ದು, ಈಗಾಗಲೇ ಸಮಗ್ರ ಯೋಜನಾ ವರದಿ ಪೂರ್ಣಗೊಂಡಿದೆ. ಈ ಯೋಜನೆ ವೆಚ್ಚ 1,100 ಕೋ. ರೂ.ಗಳು. ಮುಂದಿನ ಆರು ತಿಂಗಳಲ್ಲಿ ಟೆಂಡರ್ ಹಾಗೂ ಇನ್ನಿತರ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ. ಮಾರ್ಚ್ ಅಂತ್ಯದೊಳಗೆ ಗುತ್ತಿಗೆದಾರರ ಆಯ್ಕೆ ನಡೆಯಲಿದೆ. ಇದು ಕೂಡಾ ಬಿಒಟಿ ಯೋಜನೆ. ಒಂದು ಅಥವಾ ಎರಡು ಹಂತದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕೇ ಎನ್ನುವ ಚಿಂತನೆ ಈಗ ಪ್ರಾಧಿ ಕಾರದ ಮುಂದಿದೆ.
ನಂತೂರು-ತಲಪಾಡಿ, ಸುರತ್ಕಲ್‌ನಿಂದ ಕುಂದಾಪುರ ವರೆಗಿನ ಯೋಜನೆಯನ್ನು ಈಗಾಗಲೇ ನವಯುಗ ಸಂಸ್ಥೆಗೆ ವಹಿಸ ಲಾಗಿದೆ. ಪ್ರಾಥಮಿಕ ಹಂತದ ಪ್ರಕ್ರಿಯೆಗಳು ನಡೆದಿವೆ. ಮೂರು ಕಡೆಗಳಲ್ಲಿ ಸಂಸ್ಥೆ ಕಾಂಕ್ರೀಟ್ ಘಟಕಗಳನ್ನು ಸ್ಥಾಪಿಸಿದೆ. ಪ್ರಾಧಿ ಕಾರದ ಪ್ರಕಾರ ಅಕ್ಟೋಬರ್‌ನಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಇದು ಕೂಡಾ ಬಿಒಟಿ ಆಧಾರದಲ್ಲಿ ನಡೆಯುವ ಯೋಜನೆ ಯಾದ ಕಾರಣ 30 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಪಡುಬಿದ್ರಿ ಹಾಗೂ ಮೂಲ್ಕಿಯಲ್ಲಿ ಬೈಪಾಸ್‌ಗಳು ನಿರ್ಮಾಣಗೊಳ್ಳಲಿವೆ. ಇದಕ್ಕೆ ಮುಖ್ಯವಾದ ಕಾರಣ ಪೇಟೆ ನಡುವಿನ ರಸ್ತೆ ಅತಿ ಕಿರಿದು, ವಿಸ್ತರಣೆಗೆ ಸ್ಥಳಾವಕಾಶವಿಲ್ಲದಿರುವುದು. ಇಡಿ ಯೋಜನೆಗೆ ಈಗಾಗಲೇ ನಿಗದಿಯಾದಂತೆ 60 ಮೀಟರ್‌ಗಳ ಭೂಸ್ವಾದೀನ ಪ್ರಕ್ರಿಯೆ ನಡೆಯುತ್ತಿದೆ.
ಈ ಯೋಜನೆಯಲ್ಲಿ ನಾಲ್ಕು ಕಡೆಗಳಲ್ಲಿ ಫ್ಲೆ$ç ಓವರ್‌ಗಳು ಬರಲಿದ್ದು, ಕುಂದಾಪುರದಿಂದ - ಸುರತ್ಕಲ್ ವರೆಗೆ 35 ಕಿಮಿ, ನಂತೂರಿನಿಂದ ತಲಪಾಡಿ ವರೆಗೆ ಸರ್ವೀಸ್ ರಸ್ತೆ ನಿರ್ಮಾಣವಾಗಲಿದೆ.
ಸುರತ್ಕಲ್- ಬಿ.ಸಿ.ರೋಡ್ ಚುರುಕು
ಕಳೆದ ಹಲವು ವರ್ಷಗಳಿಂದ ಕುಂಟುತ್ತಿರುವ ಸುರತ್ಕಲ್- ಬಿ.ಸಿ.ರೋಡ್ ನಡುವಿನ ಚತುಷ್ಪಥ ಕಾಮಗಾರಿ ಸದ್ಯ ಸ್ವಲ್ಪ ಚುರುಕು ಗೊಂಡಿದೆ.
'ಡಿಸೆಂಬರ್ ಅಂತ್ಯಕ್ಕೆ ಈ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ.
ಬ್ರಹ್ಮರಕೂಟುವಿನ ಗುಡಿಗೆ ಸಂಬಂಧಿಸಿದ ಸಮಸ್ಯೆ ಹೊರತುಪಡಿಸಿ, ಉಳಿದಂತೆ ಎಲ್ಲಾ ವಿಚಾರಗಳು ಬಗೆಹರಿದಿದೆ. ಅದನ್ನು ಜಿಲ್ಲಾಡಳಿತ ಸದ್ಯದಲ್ಲೇ ಬಗೆಹರಿಸುವ ನಿರೀಕ್ಷೆ ಇದೆ' ಎಂದು ಪ್ರಾಧಿ ಕಾರದ ಯೋಜನಾ ನಿರ್ದೇಶಕ ಪ್ರಶಾಂತ್ ಎನ್. ಗವಾಸನೆ 'ತಿಳಿಸಿದರು.
ಸುರತ್ಕಲ್, ಕುಳೂರು, ಕೊಟ್ಟಾರ, ಬಿ.ಸಿ.ರೋಡ್‌ನಲ್ಲಿನ ಫ್ಲೆ ಓವರ್‌ಗಳ ಕಾಮಗಾರಿ ತ್ವರಿತವಾಗಿ ನಡೆಯಲಿದೆ. ಸಣ್ಣಪುಟ್ಟ ಸಮಸ್ಯೆ ಗಳು ಈಗಾಗಲೇ ಬಗೆಹರಿದಿವೆ ಎಂದು ಅವರು ಹೇಳಿದರು.
ಬಿ.ಸಿ.ರೋಡ್- ಹಾಸನ ಚತುಷ್ಪಥ
ಬಿ.ಸಿ.ರೋಡ್- ಹಾಸನ ನಡುವೆ ರಸ್ತೆಯನ್ನು ಕೂಡಾ ಸಚಿವಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸಿದೆ. ಚತುಷ್ಪಥ ರಸ್ತೆಯನ್ನಾಗಿ ಪರಿವರ್ತಿಸುವ ಕುರಿತಂತೆ ಸಮಗ್ರ ಯೋಜನಾ ವರದಿ ಕಾರ್ಯ ಪ್ರಗತಿಯಲ್ಲಿದೆ.
'ತಜ್ಞರು ಈಗಾಗಲೇ ಒಂದು ಪ್ರಾಥಮಿಕ ಪ್ರಸ್ತಾವನೆ ನೀಡಿದ್ದಾರೆ. ಆದರೆ ಶಿರಾಡಿ ಘಾಟ್‌ನಲ್ಲಿ ಪರ್ಯಾಯ ಮಾರ್ಗಗಳನ್ನು ಸೂಚಿಸುವಂತೆ ಕೇಳಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಸುರಂಗ ಮಾರ್ಗ ಅಥವಾ ಏಲಿವೇಟೆಡ್ ಮಾರ್ಗಗಳ ನಿರ್ಮಾಣವೂ ಸಾಧ್ಯವಾಗಬಹುದು. ಅಂತಿಮ ವರದಿ ಬಂದ ಬಳಿಕ ನಿರ್ಣಯ ಸಾಧ್ಯ' ಎಂದು ಗವಾಸನೆ ತಿಳಿಸಿದರು.
ಹಾಸನದಿಂದ ಬೆಂಗಳೂರು ಮಾರ್ಗ ಈಗಾಗಲೇ ಚತುಷ್ಪಥಗೊಳ್ಳುತ್ತಿದೆ. ನೆಲಮಂಗಲದಿಂದ ದೇವಹಳ್ಳಿ ತನಕ ಕಾರ್ಯ ಪ್ರಗತಿಯಲ್ಲಿದೆ. ದೇವಹಳ್ಳಿಯಿಂದ ಹಾಸನದವರೆಗೆ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ. ಈ ಯೋಜನೆ ಪೂರ್ಣಗೊಂಡಾಗ ಮಂಗಳೂರು- ಬೆಂಗಳೂರು ನಡುವಿನ ಸಂಚಾರ ಅತ್ಯಂತ ಸುಲಲಿತವಾಗಲಿದ್ದು,ಅವಧಿಯೂ ಕಡಿತಗೊಳ್ಳಲಿದೆ.
ತೊಕ್ಕೊಟ್ಟು- ಮೆಲ್ಕಾರ್
ಮಂಗಳೂರಿನ ತೊಕ್ಕೊಟ್ಟು- ಮೆಲ್ಕಾರ್ ನಡುವಿನ ರಸ್ತೆಯನ್ನು ಕೂಡಾ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಅದನ್ನು ದ್ವಿಪಥಗೊಳಿ ಸುವ ಕಾರ್ಯಕ್ಕೆ ಯೋಜನಾ ವರದಿ ಸಿದ್ಧಪಡಿಲಾಗುತ್ತಿದೆ. ಇದು ಪೂರ್ಣಗೊಂಡರೆ ಕೇರಳದವರಿಗೆ ಬೆಂಗಳೂರು ಪ್ರಯಾಣ ಹತ್ತಿರವಾಗಲಿದೆ.
ಮಂಗಳೂರು- ಶಿವಮೊಗ್ಗ
ಮಂಗಳೂರು- ಶಿವಮೊಗ್ಗ ರಸ್ತೆಯನ್ನು ದ್ವಿಪಥಗೊಳಿಸುವ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿದೆ. 220 ಕಿ.ಮೀ. ಉದ್ದದ ಈ ರಸ್ತೆಯು 4 ಹಂತಗಳಲ್ಲಿ ನಿರ್ಮಾಣಗೊಳ್ಳಲಿದೆ. ಈಗಾಗಲೇ ಯೋಜನಾ ವರದಿ ಸಿದ್ಧತೆ ಪ್ರಕ್ರಿಯೆಗಳು ಆರಂಭಗೊಂಡಿದೆ. ಈ ರಸ್ತೆ ಮೂಡಬಿದರೆ, ಕಾರ್ಕಳ, ಕುದುರೆಮುಖ, ಶೃಂಗೇರಿ- ತೀರ್ಥಹಳ್ಳಿ ಮೂಲಕ ಶಿವಮೊಗ್ಗಕ್ಕೆ ಹಾದು ಹೋಗಲಿದೆ.
ಟೋಲ್ ಅನಿವಾರ್ಯ
ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಅನಿವಾರ್ಯ. ಯೋಜನಾ ಶರತ್ತುಗಳಲ್ಲಿ ಇದು ಅಡಕವಾಗಿದೆ. ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಟೋಲ್‌ನಿಂದ ಮುಕ್ತಗೊಳಿಸಲಾಗಿದೆ. ಇತರ ದೊಡ್ಡ ವಾಹನಗಳು ಮಾತ್ರ ಟೋಲ್ ನೀಡಬೇಕಾಗುತ್ತಿದೆ. ದಿನಂಪ್ರತಿ ಓಡಾಡುವ ಕಾರು ಇನ್ನಿತರ ವಾಹನಗಳಿಗೆ ತಿಂಗಳ ಪಾಸ್ ಅನ್ನು ಅತಿ ಕಡಿಮೆ ದರದಲ್ಲಿ ನೀಡಲಾಗುವುದು. ಟೋಲ್ ವ್ಯವಸ್ಥೆ ಮಂಗಳೂರಿನಲ್ಲಿ ಮಾತ್ರವಲ್ಲ, ದೇಶದ ಎಲ್ಲಾ ಭಾಗದಲ್ಲೂ ಜಾರಿಯಲ್ಲಿದೆ ಎನ್ನುವುದು ಪ್ರಾಧಿಕಾರದ ಅಧಿಕಾರಿಗಳ ವಿವರಣೆ.
ವರದಿಯ ವಿವರಗಳು |
 |
ಕೃಪೆ : ಸುರೇಂದ್ರ ಎಸ್. ವಾಗ್ಳೆ | ಉದಯವಾಣಿ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|