ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ |
ಪ್ರಕಟಿಸಿದ ದಿನಾಂಕ : 2010-09-09
ಮಂಗಳೂರು ಉದ್ಯೋಗ ಆಕಾಂಕ್ಷಿ ಯುವಕನೋರ್ವನಿಂದ ಲಂಚ ಸ್ವೀಕರಿಸಿದ ಆರೋಪದಲ್ಲಿ ಮಂಗಳೂರು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ ಬಸವರಾಜು ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಗಳೂರು ಲೋಕಾಯುಕ್ತ ಡಿವೈಎಸ್ಪಿ ಸದಾನಂದ ವಣೇìಕರ್ ಮತ್ತು ಇನ್ಸ್‌ಪೆಕ್ಟರ್ ಮುಕುಂದ ನಾಯಕ್ ಅವರು ಪ್ರಕರಣ ಬಯಲಿಗೆಳೆದಿದ್ದಾರೆ.
ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ರಾಸಾಯನಿಕ ದ್ರಾವಣ ಸಿಂಪಡಿಸಿದ ನೋಟುಗಳ ಮೇಲೆ ಆರೋಪಿಯ ಕೈಬೆರಳಿನ ಸ್ಪರ್ಶವನ್ನು ವೈಜ್ಞಾನಿಕ ಕ್ರಮಗಳ ಮೂಲಕ ಖಾತರಿಪಡಿಸಲಾಗಿದೆ. ನೋಟುಗಳ ಕ್ರಮ ಸಂಖ್ಯೆಗಳು ತಾಳೆಯಾಗಿವೆ. ಆರೋಪಿ ಮತ್ತು ದೂರುದಾರರ ನಡುವೆ ನಡೆದ ಸಂಭಾಷಣೆಯನ್ನು ಮಿನಿ ಟೇಪ್ ರೆಕಾರ್ಡರ್ ಮೂಲಕ ದಾಖಲಿಸಿಕೊಳ್ಳಲಾಗಿದೆ ಎಂದು ಡಿವೈಎಸ್ಪಿ ಅವರು ಮಾಧ್ಯಮ ಪ್ರತಿನಿಧಿ ಗಳಿಗೆ ತಿಳಿಸಿದರು.
ಎಂಆರ್‌ಪಿಎಲ್ ನಲ್ಲಿ ಒಟ್ಟು 300 ಉದ್ಯೋಗ ಅವಕಾಶಗಳು ಇರುವ ಬಗ್ಗೆ ಪ್ರಕಟನೆ ಹೊರಡಿಸಲಾಗಿತ್ತು. ಸುರತ್ಕಲ್‌ನ ಬಲರಾಮ ಅವರು ಆ. 13 ರಂದು ಅರ್ಜಿ ಸಲ್ಲಿಸಿದ್ದರು. ಅಭ್ಯರ್ಥಿಗೆ 28 ವರ್ಷ ತುಂಬಿರುವ ಕಾರಣ 'ಓಬಿಸಿ' ಪ್ರಮಾಣಪತ್ರ ತಂದರೆ ಮಾತ್ರ ಉದ್ಯೋಗಕ್ಕೆ ಅರ್ಹತೆ ಪಡೆಯಬಹುದು ಎಂದು ಬಸವರಾಜು ಅವರು ಸೂಚಿಸಿದ್ದರು. ಆ. 16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು.
ಓಬಿಸಿ ಪ್ರಮಾಣಪತ್ರ ಸಿದ್ಧಪಡಿಸಿ ತಂದ ಬಲರಾಮ ಅವರ ಮುಂದೆ ಅರ್ಜಿಯನ್ನು ನವೀಕರಿಸಿ ಕಳುಹಿಸಲು ಬಸವರಾಜು 6,000 ರೂ. ಮೊತ್ತದ ಬೇಡಿಕೆ ಇಟ್ಟರು. ಚೌಕಾಶಿ ನಡೆದು 5,000 ರೂ. ನೀಡಲು ಪಟ್ಟು ಹಿಡಿದರು ಎನ್ನುವುದು ದೂರು.
ಬಲರಾಮ ಅವರು ಗೆಳೆಯ ಮುನೀರ್ ಕಾಟಿಪಳ್ಳ ಮೂಲಕ ಲೋಕಾಯುಕ್ತ ಅಧಿ ಕಾರಿಗಳನ್ನು ಸಂಪರ್ಕಿಸಿದ್ದಾರೆ. ಅವರು ನೀಡಿದ ಸೂಚನೆಯಂತೆ ಸೆ. 7 ರಂದು ಉದ್ಯೋಗ ಅಧಿ ಕಾರಿಗೆ 1 ಸಾವಿರ ರೂ. ನೀಡಿದ್ದಾರೆ. ಮರುದಿನ ಉಳಿದ 4 ಸಾವಿರ ರೂ. ಹಣ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಉದ್ಯೋಗ ಅಧಿಕಾರಿ ಜೊತೆ ನಡೆಸಿದ ಸಂಭಾಷಣೆಯನ್ನು ಬಲರಾಮ ಅವರು ಜೇಬಿನಲ್ಲಿದ್ದ ಟೇಪ್ ರೆಕಾರ್ಡರ್‌ನಲ್ಲಿ ದಾಖಲಿಸಿಕೊಂಡಿದ್ದಾರೆ.
ಬುಧವಾರ ಅಂತಿಮ ಕಾರಾಯಚರಣೆ ನಡೆದಿದೆ. ಲೋಕಾಯುಕ್ತರಿಂದ ನಿರ್ದೇಶಿಸಲ್ಪಟ್ಟ ಇಬ್ಬರು ಪಂಚನಾಮರು ಮುನೀರ್ ಮತ್ತು ಚರಣ್ ಕಚೇರಿ ಒಳಗೆ ಸಾಮಾನ್ಯ ಸಂದರ್ಶಕರಂತೆ ನಿಂತಿದ್ದರು.
ಉದ್ಯೋಗ ಅಧಿ ಕಾರಿ ಹಣ ಸ್ವೀಕರಿಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ತತ್‌ಕ್ಷಣ ಕಚೇರಿ ಪ್ರವೇಶಿಸಿದ್ದಾರೆ .
ನಿರಾಕರಣೆ
ವ್ಯವಸ್ಥಿತ ಸಂಚಿನಲ್ಲಿ ತನ್ನನ್ನು ಸಿಲುಕಿಸಲಾಗಿದೆ. ತಾನು ಲಂಚ ಸ್ವೀಕರಿಸಿಲ್ಲ. ಬಲವಂತವಾಗಿ ತನ್ನ ಜೇಬಿನಲ್ಲಿ ಹಣವನ್ನು ಹಾಕ ಲಾಗಿದೆ ಎಂದು ಲೋಕಾಯುಕ್ತರ ವಶದಲ್ಲಿದ್ದ ಆರೋಪಿ ಉದ್ಯೋಗ ಅಧಿಕಾರಿ ಪ್ರತಿಕ್ರಿಯಿಸಿದರು.
23 ತನಕ ನ್ಯಾಯಾಂಗ ಬಂಧನ
ಲೋಕಾಯುಕ್ತ ಅಧಿಕಾರಿಗಳು ಆರೋಪಿ ಬಸವರಾಜು ಅವರಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸೆ. 23 ತನಕ ನ್ಯಾಯಾಂಗ ಬಂಧನ ವಿಧಿಸಿದೆ.
ಆದರೆ ಸೆ. 13 ರಂದು ಆಕ್ಷೇಪ ಸಲ್ಲಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-09-09 00:00:00
|
|
|